Advertisement

Subrata Roy: ಸಹಾರಾ ಸಮೂಹದ ಸಂಸ್ಥಾಪಕ ಸುಬ್ರತಾ ರಾಯ್ ನಿಧನ

07:56 AM Nov 15, 2023 | Team Udayavani |

ಮುಂಬಯಿ: ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಹಾರಾ ಇಂಡಿಯಾ ಪರಿವಾರದ ಸಂಸ್ಥಾಪಕ ಸುಬ್ರತಾ ರಾಯ್(75) ಬುಧವಾರ (ನ.14 ರಂದು) ನಿಧನರಾಗಿದ್ದಾರೆ.

Advertisement

“ಸ್ಪೂರ್ತಿದಾಯಕ ನಾಯಕ ಮತ್ತು ದಾರ್ಶನಿಕರಾಗಿದ್ದ ಸುಬ್ರತಾ ರಾಯ್ ಅವರ ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಅವರನ್ನು ಭಾನುವಾರ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ದಾಖಲಿಸಲಾಗಿತ್ತು. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಉಂಟಾಗುವ ಆರೋಗ್ಯ ಸಮಸ್ಯೆಯಿಂದ ಹೋರಾಡುವ ವೇಳೆ ಹೃದಯ ಸ್ತಂಭನದಿಂದಾಗಿ ರಾತ್ರಿ 10.30ಕ್ಕೆ ನಿಧನರಾದರು” ಎಂದು ಸಹಾರಾ ಇಂಡಿಯಾ ಪರಿವಾರ್ ಸಂಸ್ಥೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಜೂನ್ 10, 1948 ರಂದು ಬಿಹಾರದ ಅರಾರಿಯಾದಲ್ಲಿ ಜನಿಸಿದ ರಾಯ್ ಭಾರತದ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಹಣಕಾಸು, ರಿಯಲ್ ಎಸ್ಟೇಟ್, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ‌ ಅವರು ವ್ಯಾಪಾರ ವ್ಯವಹಾರದ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ್ದರು.

ಗೋರಖ್‌ಪುರದ ಸರ್ಕಾರಿ ತಾಂತ್ರಿಕ ಸಂಸ್ಥೆಯಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಬಳಿಕ 1976 ರಲ್ಲಿ ಸಹಾರಾ ಫೈನಾನ್ಸ್  ಸ್ಥಾಪಿಸಿದರು. ಆ ಬಳಿಕ 1978 ರಲ್ಲಿ ಇದನ್ನು ಸಹಾರಾ ಇಂಡಿಯಾ ಪರಿವಾರ್ ಪರಿವರ್ತಿಸಿದರು.

ಉದ್ಯಮ ಕ್ಷೇತ್ರದಲ್ಲಿ ಉತ್ತುಂಗವಾಗಿ ಬೆಳೆದ ಸಹಾರಾ ಗ್ರೂಪ್‌, 1992 ರಲ್ಲಿ ಹಿಂದಿ ಭಾಷೆಯ ಪತ್ರಿಕೆ ರಾಷ್ಟ್ರೀಯ ಸಹಾರಾವನ್ನು ಪ್ರಾರಂಭ ಮಾಡಿತು. 1990ರ ಸಮಯದಲ್ಲಿ ಸಹಾರಾ ದೂರದರ್ಶನ ಕ್ಷೇತ್ರಕ್ಕೆ ಕಾಲಿಟ್ಟಿತು. ಸಹಾರಾ ಟಿವಿಯನ್ನು ಆರಂಭಿಸಿ,  ಆ ಬಳಿಕ ಅದನ್ನು ಸಹಾರಾ ಒನ್‌ ಎಂದು ಮರುನಾಮಕರಣ ಮಾಡಲಾಯಿತು.

Advertisement

ವ್ಯಾಪಾರ ಜಗತ್ತಿಗೆ ಅಪಾರ ಕೊಡುಗೆಗಳನ್ನು ನೀಡಿರುವ ರಾಯ್‌ ಅವರಿಗೆ ಹಲವಾರು ಪ್ರತಿಷ್ಠಿತ ಪ್ರಶಸ್ತಿ – ಗೌರವಗಳು ಸಂದಿವೆ. ಈಸ್ಟ್ ಲಂಡನ್ ವಿಶ್ವವಿದ್ಯಾನಿಲಯದಿಂದ ವ್ಯಾಪಾರ ನಾಯಕತ್ವಕ್ಕಾಗಿ ಗೌರವ ಡಾಕ್ಟರೇಟ್ ಮತ್ತು ಲಂಡನ್‌ನ ಪವರ್‌ಬ್ರಾಂಡ್ಸ್ ಹಾಲ್ ಆಫ್ ಫೇಮ್ ಅವಾರ್ಡ್ಸ್‌ನಲ್ಲಿ ವರ್ಷದ ಬಿಸಿನೆಸ್ ಐಕಾನ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದಿದ್ದರು.

ಉದ್ಯಮದ ಯಶಸ್ಸಿನ ಜೊತೆ ರಾಯ್‌ ಅವರು ಕಾನೂನು ಸಂಕಷ್ಟವನ್ನು ಕೂಡ ಎದುರಿಸಿದ್ದಾರೆ.

2014 ರಲ್ಲಿ, ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಯೊಂದಿಗಿನ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದ ಕಾರಣಕ್ಕಾಗಿ ಭಾರತದ ಸರ್ವೋಚ್ಚ ನ್ಯಾಯಾಲಯವು ಅವರನ್ನು ಬಂಧನಕ್ಕೆ ಆದೇಶಿಸಿತು. ಈ ಕಾರಣದಿಂದ ಅವರು ತಿಹಾರ್‌ ಜೈಲು ಸೇರಿದ್ದರು. ಆ ಬಳಿಕ ಅವರು ಪೆರೋಲ್‌ ಮೂಲಕ ಬಿಡುಗಡೆಯಾದರು.

ಸುಬ್ರತಾ ರಾಯ್ ಅವರು ಪತ್ನಿ, ಪುತ್ರ ಮತ್ತು ಸಹೋದರನನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next