Advertisement
ಸುಬ್ರಹ್ಮಣ್ಯ-ಕುಮಾರಧಾರಾ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು ಪ್ರಗತಿಯಲ್ಲಿದೆ. ರಸ್ತೆಯ ಬದಿ ಮೆಸ್ಕಾಂನ ಹೈಟೆನ್ಶನ್ ವಿದ್ಯುತ್ ಮಾರ್ಗ ಹಾದುಹೋಗಿದೆ. ಕಂಬಗಳ ಸ್ಥಳಾಂತರಕ್ಕೆ ದೇವಸ್ಥಾನದಿಂದ ಮೆಸ್ಕಾಂಗೆ ಹಣ ಪಾವತಿಸಲಾಗಿದೆ. ಆದರೆ, ನೀತಿ ಸಂಹಿತೆಯ ನೆಪದಲ್ಲಿ ಸ್ಥಳಾಂತರಕ್ಕೆ ಮೆಸ್ಕಾಂ ವಿಳಂಬ ಮಾಡುತ್ತಿದ್ದು, ಮಳೆಗೆ ವಿದ್ಯುತ್ ಕಂಬಗಳ ಬುಡದಲ್ಲಿನ ಮಣ್ಣು ಜರಿದು ಕಂಬಗಳು ನೆಲಕ್ಕುರುಳುವ ಸ್ಥಿತಿಯಲ್ಲಿದೆ.
ಸುಬ್ರಹ್ಮಣ್ಯ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಮಳೆ ನೀರು ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ವೇಳೆ ಮಳೆ ನೀರು ಮಣ್ಣಿನ ಜೊತೆ ಇಳಿಜಾರು ಪ್ರದೇಶಗಳಿಗೆ ನುಗ್ಗಿ ಬರುತ್ತಿದೆ. ಸೋಮವಾರವೂ ರಸ್ತೆ ಮೇಲೆಲ್ಲ ಕೆಸರು ನೀರು ಸಂಗ್ರಹಗೊಂಡು ಸಂಚಾರಕ್ಕೆ ತೊಡಕುಂಟಾಯಿತು. ಗಾಳಿ ಮಳೆಗೆ ಕೆಲವೆಡೆ ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ಪಂಜ, ಗುತ್ತಿಗಾರು, ಯೇನೆಕಲ್ಲು, ಕೊಲ್ಲಮೊಗ್ರು, ಕಲ್ಮಕಾರು, ಹರಿಹರ, ಮಡಪ್ಪಾಡಿ, ನಡುಗಲ್ಲು, ಐನಕಿದು. ಕೈಕಂಬ ಪ್ರದೇಶಗಳಲ್ಲೂ ಗಾಳಿ- ಮಳೆಯಾಗಿದ್ದು, ವಿದ್ಯುತ್ ಹಾಗೂ ದೂರವಾಣಿ ಸೇವೆ ವ್ಯತ್ಯಯಗೊಂಡಿದೆ.