ಜಂಟಿ ಸರ್ವೆಗೆ ಆಗ್ರಹ
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರತಿಭಟನ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಅರಣ್ಯ ಇಲಾಖೆಯವರು ತಮ್ಮಲ್ಲಿರುವ ಅರಣ್ಯ ಪ್ರದೇಶದಲ್ಲಿ ಗಿಡ ನೆಟ್ಟು ಕಾಡು ಬೆಳೆಸಲಿ. ಅದು ಬಿಟ್ಟು ಕೃಷಿಕರ ಜಮೀನನ್ನು ಪಡೆಯುವ ಕೆಲಸಕ್ಕೆ ಕೈ ಹಾಕುವುದು ಖಂಡನೀಯ. ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ, ಗಡಿ ಗುರುತು ಮಾಡುವ ಕೆಲಸ ಮಾಡಲಿ. ಮುಂದಿನ ಅಧಿವೇಶನದಲ್ಲಿ ಈ ಭಾಗದ ಶಾಸಕರು ಇದರ ವಿರುದ್ಧ ಧ್ವನಿ ಎತ್ತುತ್ತೇವೆ ಹಾಗೂ ಕಸ್ತೂರಿ ರಂಗನ್ ವಿರುದ್ಧ ಯಾವುದೇ ಹೋರಾಟಕ್ಕೂ ಸಿದ್ಧರಿದ್ದೇವೆ ಎಂದರು.
ಅರಣ್ಯ ಇಲಾಖೆಯಿಂದ ರೈತರಿಗೆ ಕಿರುಕುಳ
ಸಕಲೇಶಪುರ ಶಾಸಕ ಮಂಜುನಾಥ್ ಮಾತನಾಡಿ, ಅರಣ್ಯ ಹಾಗೂ ಪರಿಸರದ ಉಳಿವು ಮಲೆನಾಡಿನ ಜನರಿಂದ ಆಗಿದೆ. ಅರಣ್ಯ ಇಲಾಖೆ ಕೃಷಿಕರಿಗೆ ನಿರಂತರ ಕಿರುಕುಳ ನೀಡುತ್ತಿದೆ. ಕಸ್ತೂರಿ ರಂಗನ್ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿಯಾಗಲು ಬಿಡವುದಿಲ್ಲ ಎಂದರು.
Advertisement
ಜ.15ರೊಳಗೆ ಗಡಿ ಗುರುತು ಮಾಡಿ
ಇಂದು ನಾವು ಸರಕಾರಕ್ಕೆ ಕಸ್ತೂರಿ ರಂಗನ್ ವರದಿ ಕೈ ಬಿಡಲು ಮನವಿ ಸಲ್ಲಿಸುತ್ತಿದ್ದೇವೆ. ಜತೆಗೆ ಜ.15ರ ಮೊದಲು ಈ ಭಾಗದಲ್ಲಿ ಜಂಟಿ ಸರ್ವೆ ನಡೆಸಿ ಗಡಿ ಗುರುತು ಮಾಡುವ ಕೆಲಸವನ್ನು ಮಾಡಬೇಕು ಇಲ್ಲವೇ ಗುಂಡ್ಯದಲ್ಲಿ ರಸ್ತೆ ತಡೆ ನಡೆಸಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಕೇರಳ ಮಾದರಿ ವರದಿ ಅಗತ್ಯ
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಕಸ್ತೂರಿ ರಂಗನ್ ವರದಿ ಕೈಬಿಡಲು ಇಲ್ಲೂ ಕೇರಳ ಮಾದರಿಯಲ್ಲಿ ವರದಿ ಸಿದ್ಧಪಡಿಸಬೇಕು. ಈ ನಿಟ್ಟಿನಲ್ಲಿ ಇಲ್ಲಿನ ವಕೀಲರು ಇಂತಹ ವರದಿಯನ್ನು ಶೀಘ್ರ ಸಿದ್ಧಪಡಿಸುವ ಕೆಲಸ ಮಾಡಬೇಕು. ಕಸ್ತೂರಿ ರಂಗನ್ ವಿರುದ್ಧದ ಎಲ್ಲ ಹೋರಾಟಕ್ಕೂ ನಮ್ಮ ಬೆಂಬಲವಿದೆ ಎಂದರು.
Related Articles
ಸಭಾ ಕಾರ್ಯಕ್ರಮ ಮುಗಿದು ಮನವಿ ಸ್ವೀಕರಿಸಲು ತಹಶೀಲ್ದಾರ್‌ಗಿಂತ ಉನ್ನತ ಅಧಿಕಾರಿ ಗಳು ಬಾರದೇ ಇರುವ ಬಗ್ಗೆ ಪ್ರತಿಭಟನಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಶಾಸಕಿ ಭಾಗೀರಥಿ ಮುರುಳ್ಯ ನೇತೃತ್ವದಲ್ಲಿ ಪ್ರತಿಭಟನಕಾರರು ನೇರವಾಗಿ ಸುಬ್ರಹ್ಮಣ್ಯ ಹೆದ್ದಾರಿಗೆ ಬಂದು ಅಲ್ಲಿಂದ ಘೋಷಣೆ ಕೂಗುತ್ತ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಜಂಕ್ಷನ್‌ನಲ್ಲಿ ಹೆದ್ದಾರಿ ತಡೆ ನಡೆಸಿದರು.
Advertisement
ಪೊಲೀಸರು ಹೆದ್ದಾರಿ ತಡೆ ನಡೆಸದಂತೆ ಮನವಿ ಮಾಡಿದರೂ ಪ್ರತಿಭಟನಕಾರರುಸ್ಪಂದಿಸಲಿಲ್ಲ. ಸುಮಾರು 1 ಗಂಟೆಗೂ ಅಧಿಕ ಸಮಯ ಹೆದ್ದಾರಿ ಸಂಪೂರ್ಣ ಬಂದ್ ಆಗಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರು ಮನವಿ ಸ್ವೀಕರಿಸಿ, ಇಂದೇ ಮನವಿಯನ್ನು ಸರಕಾರಕ್ಕೆ ಸಲ್ಲಿಸುವ ಭರವಸೆ ನೀಡಿದರು. ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ ಜತೆಗಿದ್ದರು. ಉಪ್ಪಿನಂಗಡಿ ಸಿಐ ರವಿ ಬಿ.ಎಸ್. ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಸುಮಾರು 5 ಸಾವಿರಕ್ಕೂ ಅಧಿಕ ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.