ಸುಬ್ರಹ್ಮಣ್ಯ: ಐತಿಹಾಸಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಒಂದಾದ ಈಗ ಸಂಪರ್ಕ ಕಡಿತದ ಭೀತಿ ಎದುರಿಸುತ್ತಿದೆ.
ಸುಬ್ರಹ್ಮಣ್ಯ-ಮಂಜೇಶ್ವರ ಸಂಪರ್ಕ ರಸ್ತೆಯ ಪರ್ವತಮುಖಿ ತಲುಪುವ ಮುಂಚಿತ ಕುಮಾರಧಾರ ನದಿಯ ಬಳಿ ರಸ್ತೆ ಅಂಚಿನ ಗುಡ್ಡದ ಮೇಲಿರುವ ಮರವೊಂದು ರಸ್ತೆಗೆ ಬಾಗಿ ನಿಂತಿದೆ. ಇದು ರಸ್ತೆಗೆ ಉರುಳಿ ಬೀಳಲು ಕ್ಷಣಗಣನೆ ಮಾಡುತ್ತಿದೆ.
ಈ ಮರದ ಬುಡದಲ್ಲಿ ಮಣ್ಣು ಸವಕಳಿ ಉಂಟಾಗಿದ್ದು, ಮರ ಬಿದ್ದಲ್ಲಿ ಅದರ ಜತೆ ಗುಡ್ಡವೂ ಜರಿಯುವ ಸಾಧ್ಯತೆ ಇದೆ. ಮುಂದೆ ಇದು ಬೃಹತ್ ಪ್ರಮಾಣದ ಸಮಸ್ಯೆಗೂ ಕಾರಣವಾಗುವ ಸಾಧ್ಯತೆಗಳಿವೆ. ಮರ ಬಾಗಿ ಬೀಳಲು ಸಿದ್ಧವಾದ ಸ್ಥಳದ ಮೇಲ್ಮೈ ಗುಡ್ಡ ಪ್ರದೇಶವಾಗಿದ್ದು, ಬೃಹತ್ ಗಾತ್ರದಲ್ಲಿದೆ. ರಸ್ತೆಗೆ ಚಾಚಿಕೊಂಡೇ ಈ ಗುಡ್ಡವಿದೆ. ರಸ್ತೆ ಅಂಚಿನ ಗುಡ್ಡದಲ್ಲಿ ಸಾಲಿಗೆ ಇನ್ನೂ ಕೆಲವು ಸಣ್ಣಪುಟ್ಟ ಮರಗಳು ರಸ್ತೆಗೆ ಬಾಗಿಕೊಂಡಿವೆ. ಅಪಾಯದ ಸ್ಥಿತಿ ಎದುರಿಸುತ್ತಿರುವ ಈ ರಸ್ತೆಯ ಇನ್ನೊಂದು ಭಾಗದಲ್ಲಿ ಕುಮಾರಧಾರಾ ನದಿ ಹರಿಯುತ್ತಿದೆ. ಕುಸಿತದ ಭೀತಿ ಯಲ್ಲಿರುವ ಗುಡ್ಡವೂ ಬೃಹತ್ ಗಾತ್ರ ದಲ್ಲಿದ್ದು, ಹಿಂದೆಯೂ ಈ ಸ್ಥಳದ ಆಸುಪಾಸಿನಲ್ಲಿ ಗುಡ್ಡ ಜರಿದು ಸಮಸ್ಯೆ ಆಗಿತ್ತು. ಮರಗಳ ಬುಡಗಳೇ ದುರ್ಬಲವಾಗಿವೆ. ಇದು ಮತ್ತಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡುವ ಮುನ್ಸೂಚನೆ ಸಿಕ್ಕಿದೆ. ಜಾಗವೂ ಇಕ್ಕಟ್ಟಾಗಿರುವುದರಿಂದ ಗುಡ್ಡ ಜರಿದು ಬಿದ್ದರೆ ಸಂಪೂರ್ಣ ಸಂಪರ್ಕವೇ ನಷ್ಟವಾಗುತ್ತದೆ.
ನಿರ್ಲಕ್ಷಿಸುವಂತಿಲ್ಲ
ಗುಡ್ಡದ ಣ್ಣು, ಮರಗಳ ಜತೆಗೆ ರಸ್ತೆಗೆ ಉರುಳಲು ದೊಡ್ಡ ಬಂಡೆಗಳೂ ಕಾಯುತ್ತಿವೆ. ಮಣ್ಣು, ಮರಗಳೊಂದಿಗೆ ಕಲ್ಲುಗಳೂ ರಸ್ತೆಗೆ ಜಾರಿ ಬಂದಲ್ಲಿ ಅಪಾಯದ ತೀವ್ರತೆ ಹೆಚ್ಚುವುದು ಖಚಿತ. ವಾಹನಗಳು ಸಾಗುವ ಸಂದರ್ಭದಲ್ಲಿ ಅವಘಡಗಳು ಆಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.
•ಬಾಲಕೃಷ್ಣ ಭೀಮಗುಳಿ