Advertisement
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಿಂದ 2 ಕಿ.ಮೀ. ದೂರದಲ್ಲಿ ಕ್ಷೇತ್ರದ ಪ್ರವೇಶ ಹಂತದಲ್ಲಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡೇ ಇರುವ ಮೀಸಲು ಅರಣ್ಯ ಪ್ರದೇಶದ 40 ಎಕ್ರೆಯ ಪೈಕಿ 25 ಎಕ್ರೆ ಜಾಗದಲ್ಲಿ ಸುಸಜ್ಜಿತ ವೃಕ್ಷೋದ್ಯಾನ ನಿರ್ಮಾಣಗೊಳ್ಳುತ್ತಿದೆ. ನದಿ ತಟದಲ್ಲಿ ನಿಸರ್ಗ ರಮಣೀಯ ತಾಣದಲ್ಲಿ ಉದ್ಯಾವನಕ್ಕೆ ಪ್ರವೇಶಿಸಲು ಆಕರ್ಷಕ ಮಹಾದ್ವಾರ ತೆರೆದುಕೊಂಡಿದೆ. ಮಹಾದ್ವಾರದ ಕೆಲಸ ಪೂರ್ಣಗೊಂಡಿದೆ. ಇನ್ನೂ ಹಲವು ಕೆಲಸಗಳು ನಡೆದಿವೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಕುಮಾರಧಾರಾ ನದಿ ದಂಡೆ ಮೇಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಉದ್ದೇಶಿತ ವೃಕ್ಷೋದ್ಯಾನ ಪೂರ್ಣಗೊಂಡು ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ಕೊಡುವವರಿಗೆ ಪ್ರಾಕೃತಿಕ ಸೊಬಗು ಸವಿಯುವ ಅವಕಾಶ ಲಭಿಸಲಿದೆ.
ಆರಂಭಿಕ ಹಂತದ ಕೆಲಸಗಳಿಗೆ ವರ್ಷದ ಹಿಂದೆಯೇ ಚಾಲನೆ ದೊರಕಿದೆ. ಮುಂದಿನ 3 ವರ್ಷದಲ್ಲಿ ಹಂತ – ಹಂತವಾಗಿ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್ ಸಿದ್ಧವಾಗಲಿದೆ. 5 ಕೋಟಿ ರೂ. ವೆಚ್ಚದಲ್ಲಿ ವೃಕ್ಷೋದ್ಯಾನ ನಿರ್ಮಾಣಗೊಳ್ಳುತ್ತಿದೆ. ಅರಣ್ಯ ಇಲಾಖೆ ಮೀಸಲು ಅರಣ್ಯದಲ್ಲಿ ಸ್ಥಳದ ಗಡಿ ಗುರುತು ನಡೆದು ಗಡಿ ಗುರುತು ಬಳಿಕ 17 ಲಕ್ಷ ರೂ. ವೆಚ್ಚದಲ್ಲಿ ಬೇಲಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದು, ಅದು ಪೂರ್ಣಗೊಂಡಿದೆ. ಮುಂದೆ ಹಂತ-ಹಂತವಾಗಿ ಅನುದಾನ ಬಳಸಿಕೊಂಡು ಉದ್ಯಾನವನ ನಿರ್ಮಿಸಲಾಗುತ್ತದೆ. ಕುಮಾರಧಾರೆ ಸ್ನಾನ ಘಟ್ಟದ ಮೂರು ಪಾರ್ಶ್ವಕ್ಕೆ ಹೊಂದಿಕೊಂಡು ಈ ಉದ್ಯಾನವನ ತಲೆ ಎತ್ತಲಿದೆ. ವೃಕ್ಷೋದ್ಯಾನದಲ್ಲಿ ಪ್ರವೇಶದ್ವಾರ, ಪಾರ್ಕಿಂಗ್, ಶೌಚಾಲಯ, ನೀರಿನ ತೊಟ್ಟಿ, ವೃಕ್ಷೋದ್ಯಾನ ಸುತ್ತ ತಂತಿ ತಡೆಬೇಲಿ ಮುಂತಾದ ಕಾರ್ಯಗಳು ಪೂರ್ಣ ಗೊಂಡಿವೆ. ಉಳಿದ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಇಲ್ಲಿವರೆಗೆ ರೂ. 40 ಲಕ್ಷ ರೂ. ಅನುದಾನ ಬಳಕೆ ಆಗಿದೆ. ಅಪೂರ್ವ ಸಸ್ಯರಾಶಿ
ಮಲೆನಾಡಿನಲ್ಲಿ ಬೆಳೆಯುವ ಅಪೂರ್ವ ಸಸ್ಯರಾಶಿಗಳನ್ನು ಇಲ್ಲಿ ಬೆಳೆಸಲಾಗುತ್ತಿದೆ. ಜತೆಗೆ 17 ಜಾತಿಯ ಬಿದಿರು ಬೆಳೆಯಲಾಗುತ್ತದೆ. ಬಣ್ಣ ಬಣ್ಣದ ಹೂವುಗಳು ಹಾಗೂ ಪಶ್ಚಿಮ ಘಟ್ಟದ ಅಮೂಲ್ಯ ಮರಗಳನ್ನು ಬೆಳೆದು ಸುಂದರ ಉದ್ಯಾನವನ ರೂಪು ತಾಳಲಿದೆ. ಸರಕಾರವು ಅರಣ್ಯ ಇಲಾಖೆ ಮೂಲಕ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಸಸ್ಯಗಳ ಉದ್ಯಾನ ವನವನ್ನು ತಾಲೂ ಕುವಾರು ನಿರ್ಮಿಸಲು ಯೋಜನೆ ರೂಪಿಸಿತ್ತು. ಸುಳ್ಯ ತಾಲೂಕಿನ ಯಾವುದಾದರೊಂದು ಸ್ಥಳದಲ್ಲಿ ಉದ್ಯಾನವನ ನಿರ್ಮಿಸಲು ಅರಣ್ಯ ಇಲಾಖೆ ಎರಡು ವರ್ಷದ ಹಿಂದೆ ಮಂಜೂರಾತಿ ನೀಡಿತ್ತು. ಸುಬ್ರಹ್ಮಣ್ಯ ದೇಗುಲ ಆಸಕ್ತಿ ವಹಿಸಿ ನೆರವಿಗೆ ಮುಂದೆ ಬಂದಿತ್ತು.
Related Articles
Advertisement
ವೃಕ್ಷೋದ್ಯಾನದ ಒಳಗೆ ಮಕ್ಕಳ ಆಟಿಕೆ, ವೀಕ್ಷಣೆಗೆ, ವಿಶ್ರಾಂತಿಗೆ ಅನುಕೂಲಕರ ಆಸನ ವ್ಯವಸ್ಥೆ ಸಹಿತ ಇನ್ನುಳಿದ ಕೆಲಸ ಇನ್ನೆರಡು ತಿಂಗಳಲ್ಲಿ ವೇಗ ಪಡೆದುಕೊಂಡು ಮುಂದಿನ ಎರಡು ತಿಂಗಳಲ್ಲಿ ಉದ್ಯಾವನಕ್ಕೆ ಸಂಬಂಧಿಸಿ ಎಲ್ಲ ಸೌಕರ್ಯಗಳು ವೃಕ್ಷೋದ್ಯಾನದಲ್ಲಿ ಅಳವಡಿಕೆಯಾಗಲಿವೆ. ಎಲ್ಲವೂ ವೇಗವಾಗಿ ನಡೆದಲ್ಲಿ 2020ರ ಫೆಬ್ರವರಿಗೆ ತಿಂಗಳ ಅಂತ್ಯಕ್ಕೆ ಅಂತ್ಯಕ್ಕೆ ಸಾರ್ವಜನಿಕರ ಬಳಕೆಗೆ ಉದ್ಯಾನವನ ಸಿಗಲಿದೆ.
ಶೀಘ್ರ ಲೋಕಾರ್ಪಣೆವೃಕ್ಷೋದ್ಯಾನ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಮುಂದಿನ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆಗೊಳಿಸುವ ಸಿದ್ಧತೆಯಲ್ಲಿದ್ದೇವೆ. ಬಾಕಿ ಉಳಿದ ಕೆಲಸಗಳನ್ನು ಶೀಘ್ರ ಪೂರ್ತಿಗೊಳಿಸುತ್ತೇವೆ. ಉಳಿದವುಗಳನ್ನು ನಿಧಾನವಾಗಿ ಜೋಡಿಸಿಕೊಳ್ಳುತ್ತೇವೆ.
– ತ್ಯಾಗರಾಜ್
ಆರ್‌ಎಫ್ಒ, ಸುಬ್ರಹ್ಮಣ್ಯ ವಿಭಾಗ -ದಯಾನಂದ ಕಲ್ನಾರ್