Advertisement
ಕಾಸರಗೋಡಿನಲ್ಲಿ ಕೇಂದ್ರ ಸ್ಥಾನವನ್ನು ಹೊಂದಿರುವ ಸಿಪಿಸಿಆರ್‌ಐಯ ವತಿಯಿಂದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕಿದುವಿನಲ್ಲಿ ದಕ್ಷಿಣ ಏಷ್ಯಾ ಹಾಗೂ ಮಧ್ಯಪ್ರಾಚ್ಯ ವಲಯಗಳ ಅಂತಾರಾಷ್ಟ್ರೀಯ ತೆಂಗಿನ ಜೀನ್ ಬ್ಯಾಂಕ್ ಕಾರ್ಯಚರಿಸುತ್ತಿದ್ದು, ಈಗಾಗಲೇ ತೆಂಗಿನ ಹಲವು ತಳಿಗಳನ್ನು ಅಭಿವೃದ್ಧಿಪಡಿಸಿದೆ. ಮುಂದುವರಿದ ಭಾಗವಾಗಿ ಸಿಪಿಸಿಆರ್‌ಐ ಕಾಸರಗೋಡು ಹಾಗೂ ಕಿದು ಸಹಯೋಗದಲ್ಲಿ ಕಲ್ಪ ಸುವರ್ಣ ಗಿಡ್ಡ ತಳಿಯನ್ನು ಇಲ್ಲಿನ ವಿಜ್ಞಾನಿಗಳು, ಸಿಬಂದಿ ಅಭಿವೃದ್ಧಿಪಡಿಸಿದ್ದು, 2023-24ರಲ್ಲಿ ಅಂತಿಮಗೊಳಿಸಿದ್ದಾರೆ.
ಈ ಹೊಸ ತೆಂಗಿನ ಗಿಡ್ಡ ತಳಿಯು ಹೆಚ್ಚು ಇಳುವರಿ ನೀಡುತ್ತದೆ. ಇದರ ಎಳನೀರು ಅತೀ ಹೆಚ್ಚಿನ ಸಿಹಿ ಅಂಶದೊಂದಿಗೆ ರುಚಿಕರವಾಗಿದೆ. ಗಿಡ ನಾಟಿ ಮಾಡಿದ 36 ತಿಂಗಳಲ್ಲಿ ಇಳುವರಿ ನೀಡುತ್ತದೆ. ಒಂದು ಎಳನೀರಿನಲ್ಲಿ 415 ಮಿ.ಲೀ. ವರೆಗೆ ಎಳನೀರು ಇರುತ್ತದೆ. ಸಾಧಾರಣ ನಿರ್ವಹಣೆ ಮಾಡಿದಲ್ಲಿ ವಾರ್ಷಿಕ 105- 110ರಷ್ಟು ಕಾಯಿ ನೀಡುತ್ತದೆ. ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿದಲ್ಲಿ ಇನ್ನೂ ಹೆಚ್ಚು ಇಳುವರಿ ನೀಡಲಿದೆ. ಒಂದು ಮರಕ್ಕೆ 20-21 ಕೆ.ಜಿ. ಕೊಬ್ಬರಿ ಸಿಗುವುದು. ಇದರ ಎಲೆಗಳ ಅಂತರ ಕಡಿಮೆ ಇರುತ್ತದೆ. ಸಾಧಾರಣವಾಗಿ ತೆಂಗಿನ ಗಿಡಗಳನ್ನು 7.5 ಮೀ. ಅಂತರದಲ್ಲಿ ನಾಟಿ ಮಾಡಲಾಗುತ್ತದೆ. ಆದರೆ ಕಲ್ಪ ಸುವರ್ಣ ಗಿಡ್ಡ ತಳಿಯನ್ನು 7 ಮೀ. ಅಂತರದಲ್ಲಿ ನಾಟಿ ಮಾಡಬಹುದಾಗಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಸಿಪಿಸಿಆರ್‌ಐ ಈವರೆಗೆ ಸುಮಾರು 23 ತೆಂಗಿನ ತಳಿಗಳನ್ನು ಅಭಿವೃದ್ಧಿ ಪಡಿಸಿದೆ. ಈ ಪೈಕಿ 6 ಹೈಬ್ರಿಡ್, 6 ಗಿಡ್ಡ ತಳಿ, 11 ಎತ್ತರ ತಳಿಗಳು. ಒಂದು ತಳಿ ಅಭಿವೃದ್ಧಿಗೆ 3-4 ದಶಕ ಬೇಕಾಗುತ್ತದೆ. ತಳಿ ಅಭಿವೃದ್ಧಿಯ ಸಂಶೋಧನೆ ನಡೆಸಿ ಗುಣಮಟ್ಟ, ಇಳುವರಿ, ವಾತಾವರಣ, ಜೀವಿತಾವಧಿ ಇತ್ಯಾದಿ ತಿಳಿದುಕೊಂಡು ತಳಿಯ ಅಂತಿಮ ಅಭಿವೃದ್ಧಿ ಪೂರ್ಣಗೊಳಿಸಿ ಬಿಡುಗಡೆ ಮಾಡಲಾಗುತ್ತದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
Related Articles
Advertisement
ಕಿದು ಸಿಪಿಸಿಆರ್‌ಐನಲ್ಲಿ ಇಂದು ಕೃಷಿ ಸಮ್ಮೇಳನ
ಸುಬ್ರಹ್ಮಣ್ಯ: ಬಿಳಿನೆಲೆ ಗ್ರಾಮದ ಕಿದು ಸಿಪಿಸಿಆರ್‌ಐ ಸಂಸ್ಥೆಯಲ್ಲಿ ಮಾ.11ರಂದು ಬೆಳಗ್ಗೆ 11ರಿಂದ ಕೃಷಿ ಸಮ್ಮೇಳನ ನಡೆಯಲಿದೆ.ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಭಾಗೀರಥಿ ಮುರುಳ್ಯ, ಐಸಿಎಆರ್ ಡಿಸಿಜಿ ಡಾ| ಸಂಜಯ್ ಕುಮಾರ್ ಸಿಂಗ್, ಭಾರತ ಸರಕಾರದ ತೋಟಗಾರಿಕಾ ಆಯುಕ್ತ ಡಾ| ಪ್ರಭಾತ್ ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ. ಸಿಪಿಸಿಆರ್‌ಐ ಕಾಸರಗೋಡು ಹಾಗೂ ಕಿದು ಸಹಯೋಗದಲ್ಲಿ ತೆಂಗಿನ ಕಲ್ಪ ಸುವರ್ಣ ಗಿಡ್ಡ ತಳಿ ಅಭಿವೃದ್ಧಿ ಪಡಿಸಲಾಗಿದೆ. ಲೈಸನ್ಸಿಂಗ್ ಪ್ರಕ್ರಿಯೆ ನಡೆಯುತ್ತಿದ್ದು, ಆಸಕ್ತರು ಸಿಪಿಸಿಆರ್‌ಐಯನ್ನು ಸಂಪರ್ಕಿಸಬಹುದು.
– ದಿವಾಕರ್ ವೈ.
ಸಿಪಿಸಿಆರ್‌ಐ ವಿಜ್ಞಾನಿ -ದಯಾನಂದ ಕಲ್ನಾರ್