Advertisement
ಬಾಳುಗೋಡು ಗ್ರಾಮದ ಪದಕ ಮಿತ್ತಡ್ಕ ನಿವಾಸಿಗಳಿಬ್ಬರು ಬುಧವಾರ ಕಾಡಿನಿಂದ ಪ್ರಾಕೃತಿಕವಾಗಿ ಹರಿದು ಬರುವ ನೀರಿನ ಸಂಪರ್ಕ ಸರಿಪಡಿಸಲೆಂದು ಕಾಡಿನತ್ತ ತೆರಳಿದ್ದರು. ಈ ವೇಳೆಗೆ ಮೀಸಲು ಅರಣ್ಯ ವ್ಯಾಪ್ತಿಯ ಜನವಸತಿ ಪ್ರದೇಶದಿಂದ ಸುಮಾರು 5 ಕಿ.ಮೀ. ದೂರದಲ್ಲಿ ಈ ಆನೆ ಗೋಚರಿಸಿತು. ಬೆದರಿದ ಅವರು ಮರಳಿ ಬಂದು ಸುಬ್ರಹ್ಮಣ್ಯ ಅರಣ್ಯ ಇಲಾಖೆ ಸಿಬಂದಿಗೆ ಮಾಹಿತಿ ನೀಡಿದರು. ಅರಣ್ಯ ಸಿಬಂದಿ ಕಾಡಿಗೆ ತೆರಳಿ ಪರಿಶೀಲಿಸಿ ಆನೆಗೆ ಗಾಯವಾಗಿರುವುದನ್ನು ದೃಢಪಡಿಸಿದ್ದಾರೆ. ಆನೆಯ ಮುಂಭಾಗದ ಕಾಲಿಗೆ ಏಟಾಗಿದ್ದು, ದಪ್ಪಗೆ ಊದಿಕೊಂಡಿದೆ. ಕುಂಟುತ್ತ ಸಾಗುವ ಆನೆ ತೀವ್ರ ನೋವಿನಿಂದ ಬಳಲುತ್ತಿರುವುದು ಅದರ ಚಲನವಲನಗಳಿಂದ ಗೊತ್ತಾಗುತ್ತಿದೆ. ಅದು ನೋವು ತಾಳಲಾರದೆ ಆಗಾಗ ಘೀಳಿಡುತ್ತಿದೆ. ಅರಣ್ಯ ಸಿಬಂದಿ ಮತ್ತು ಸ್ಥಳೀಯರು ಸಮೀಪಕ್ಕೆ ಹೋದಾಗ ಮರವನ್ನು ಅಲ್ಲಾಡಿಸಿ ಹತ್ತಿರ ಬರದಂತೆ ಹೆದರಿಸುತ್ತಿದೆ.
ಬಾಳುಗೋಡಿನ ಪದಕ ಮಿತ್ತಡ್ಕ ಪರಿಸರದಲ್ಲಿ 10 ದಿನಗಳಿಂದ ಆನೆಯೊಂದು ಓಡಾಡುತ್ತಿತ್ತಲ್ಲದೆ ತೋಟಗಳಿಗೂ ದಾಳಿ ನಡೆಸುತ್ತಿತ್ತು. ಬುಧವಾರ ಗಾಯಗೊಂಡ ಸ್ಥಿತಿಯಲ್ಲಿ ಕಂಡು ಬಂದಿರುವ ಆನೆ ಅದುವೇ ಆಗಿರಬಹುದೆನ್ನುವ ಶಂಕೆಯನ್ನು ಮಿತ್ತಡ್ಕ ನಿವಾಸಿ ಪ್ರಶಾಂತ ವ್ಯಕ್ತಪಡಿಸಿದ್ದಾರೆ. ಬಾಳುಗೋಡು ಮೀಸಲು ಅರಣ್ಯದೊಳಗೆ ಕಾಡಾನೆ ಗಾಯಗೊಂಡು ಇರುವುದು ನಮ್ಮ ಗಮನಕ್ಕೆ ಬಂದಿದೆ. ಸಿಬಂದಿ ಪರಿಶೀಲಿಸಿ ಬಂದಿದ್ದಾರೆ. ಆನೆಗೆ ಚಿಕಿತ್ಸೆಯ ಅಗತ್ಯವಿದೆ. ಗುರುವಾರ ನಾಗರಹೊಳೆ ವನ್ಯಜೀವಿ ತಜ್ಞ ವೈದ್ಯರು ಆಗಮಿಸಲಿದ್ದು ಚಿಕಿತ್ಸೆಯ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ.
– ತ್ಯಾಗರಾಜ್,
ಸುಬ್ರಹ್ಮಣ್ಯ ಅರಣ್ಯ ವಿಭಾಗದ ಆರ್‌ಎಫ್ಒ