Advertisement

Subrahmanya ರೆಂಜಿಲಾಡಿ: ಹಡಿಲು ಬಿದ್ದ ಗದ್ದೆಯಲ್ಲಿ ನೇಜಿ ನಾಟಿ

09:05 PM Nov 14, 2023 | Team Udayavani |

ಸುಬ್ರಹ್ಮಣ್ಯ: ಕಳೆದ ಎರಡು ವರ್ಷಗಳಿಂದ ನೇಜಿ ನಾಟಿ ಮಾಡದೆ ಹಡಿಲು ಬಿದ್ದಿದ್ದ ಬತ್ತದ ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟ ನಡೆಸಿ, ಇದೀಗ ನೇಜಿ ನಾಟಿ ಮಾಡುವ ಮೂಲಕ ಮತ್ತೆ ಗದ್ದೆಗೆ ಮರುಜೀವ ನೀಡಲಾಗಿದೆ.

Advertisement

ರೆಂಜಿಲಾಡಿಯ ಸಾಕೋಟೆಜಾಲು ಚಂದ್ರಾವತಿ ಅವರು ಹಿಂದೆ ತಮ್ಮಲ್ಲಿನ ಗದ್ದೆಯಲ್ಲಿ ಬತ್ತ ಬೆಳೆಯುತ್ತಿದ್ದರು. ಆದರೆ ಕಳೆದ 2 ವರ್ಷಗಳಿಂದ ವಿವಿಧ ಕಾರಣ ಗಳಿಂದ ನಾಟಿ ಮಾಡದೆ ಹಡಿಲು ಬಿದ್ದಿತ್ತು.

ಕೃಷಿಗೆ ಪೂರಕವಾದ ಕ್ರೀಡಾಕೂಟ
ನೂಜಿಬೈಲ್‌ ತುಳುನಾಡ ತುಡರ್‌ ಯುವಕ ಮಂಡಲ ಕಳೆದ ವರ್ಷದಿಂದ ಕೆಸರು ಗದ್ದೆಯಲ್ಲಿ ಕ್ರೀಡಾಕೂಟ ನಡೆ ಸಲು ಆರಂಭಿಸಿತ್ತು. ಕಳೆದ ವರ್ಷ ನೂಜಿಬೈಲ್‌ನ ಗದ್ದೆಯಲ್ಲಿ ಕ್ರೀಡಾಕೂಟ ನಡೆಸಲಾಗಿತ್ತು. ಆದರೆ ಅಲ್ಲಿ ಈ ವರ್ಷ ಸಾಧ್ಯವಾಗಿರಲಿಲ್ಲ. ಬಳಿಕ ಯುವಕ ಮಂಡಲದ ಸದಸ್ಯರು ವಿವಿಧೆಡೆ ಕ್ರೀಡಾ ಕೂಟಕ್ಕೆ ಗದ್ದೆಗಳನ್ನು ಹುಡುಕಲು ಆರಂಭಿಸಿದರು. ಕೊನೆಗೆ ಯುವಕ ಮಂಡಲದ ಅಧ್ಯಕ್ಷ ತಿರುಮಲೇಶ್ವರ ಸಾಕೋಟೆ ಅವರಿಗೆ ಸೇರಿದ ಗದ್ದೆಯನ್ನೇ ಬಳಕೆಗೆ ತೀರ್ಮಾನಿಸಲಾಯಿತು. ಅಲ್ಲದೇ ಕ್ರೀಡಾಕೂಟದ ಬಳಿಕ ಗದ್ದೆಯಲ್ಲಿ ನೇಜಿ ನಾಟಿ ಮಾಡುವ ಬಗ್ಗೆಯೂ ತಿರುಮಲೇಶ್ವರ ತಿಳಿಸಿ, ಸದಸ್ಯರ, ಮನೆಯವರ ಒಪ್ಪಿಗೆ ಪಡೆದು ಸಿದ್ಧತೆ ಆರಂಭಿಸಲಾಯಿತು.

ನಿರಂತರ ಕೆಲಸ
ಹಡಿಲು ಬಿದ್ದ ಗದ್ದೆಯಲ್ಲಿ ಸುಮಾರು ಎರಡು ವಾರಗಳ ನಿರಂತರ ಕೆಲಸ ಮಾಡಿ, ಗದ್ದೆಯಲ್ಲಿನ ಹುಲ್ಲು, ಪೊದೆ, ಕಲ್ಲು ಮಿಶ್ರಿತ ಮಣ್ಣನ್ನು ತೆರವು ಮಾಡಿ, ಗದ್ದೆಯ ದಡಕ್ಕೆ ಮಣ್ಣು ಹಾಕಿ, ಮೂಲಕ ಉಳುಮೆ ಮಾಡಿ, ಸ್ವರೂಪ ಕಳೆದುಕೊಂಡಿದ್ದ ಗದ್ದೆಗೆ ನಿಜರೂಪ ನೀಡಲಾಯಿತು. ಬಳಿಕ ಗದ್ದೆಯಲ್ಲಿ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡಾಕೂಟವನ್ನು ಕೆಲವು ದಿನಗಳ ಹಿಂದೆ ನಡೆಸಲಾಯಿತು.

ನೇಜಿ ನಾಟಿ ಕಾರ್ಯ
ಕ್ರೀಡಾಕೂಟ ಅದ್ದೂರಿಯಾಗಿ ಜರಗಿದ ಬಳಿಕ ಪೂರ್ವ ನಿಗದಿಯಂತೆ ಇದೀಗ ಸ್ಥಳೀಯ 10ಕ್ಕೂ ಅಧಿಕ ಕಾರ್ಮಿಕರು ಗದ್ದೆಯಲ್ಲಿ ನೇಜಿ ನಾಟಿ ಮಾಡಿದರು. ಆ ಮೂಲಕ ಒಂದು ಉದ್ದೇಶದಿಂದ ಇನ್ನೊಂದು ಉದ್ದೇಶಕ್ಕೂ ಗದ್ದೆ ಸಹಕಾರಿಯಾದಂತಾಯಿತು. ಒಟ್ಟಾರೆ 1.6 ಎಕ್ರೆ ಗದ್ದೆಯ 1 ಎಕ್ರೆ ಪ್ರದೇಶದಲ್ಲಿ ನಾಟಿ ಮಾಡಲಾಗಿದೆ.

Advertisement

ಗದ್ದೆಯಲ್ಲಿ ನೇಜಿ ನಾಟಿ ಮಾಡಲು ಆಸಕ್ತಿಯಿತ್ತು. ಕಳೆದ 2 ವರ್ಷಗಳಿಂದ ಕೆಲಸ ಕೈಗೂಡಿರಲಿಲ್ಲ. ಈ ವರ್ಷ ಇದೇ ಗದ್ದೆಯಲ್ಲಿ ಕೆಸರು ಗದ್ದೆ ಕ್ರೀಡಾಕೂಟ ನಡೆಸಿದ್ದರು. ಆಗ ಗದ್ದೆಯನ್ನು ಕೃಷಿಗೆ ಪೂರಕವಾಗಿ ತಯಾರಿ ಮಾಡಲಾಗಿತ್ತು. ಇದರಿಂದ ಸುಲಭದಲ್ಲಿ ನಾಟಿ ಸಾಧ್ಯವಾಯಿತು.
-ಚಂದ್ರಾವತಿ ಸಾಕೋಟೆಜಾಲು,
ಗದ್ದೆಯ ಮಾಲಕಿ.

Advertisement

Udayavani is now on Telegram. Click here to join our channel and stay updated with the latest news.

Next