Advertisement

ಸೋರುತಿದೆ ಸುಬ್ರಹ್ಮಣ್ಯ ಕ್ರಾಸ್‌ ರೋಡ್‌ ರೈಲು ನಿಲ್ದಾಣ

12:38 PM Jul 22, 2018 | |

ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತಿ ದೊಡ್ಡ ರೈಲ್ವೇ ನಿಲ್ದಾಣವಾದ ಸುಬ್ರಹ್ಮಣ್ಯ ಕ್ರಾಸ್‌ ರೋಡ್‌ ಅವ್ಯವಸ್ಥೆಯ ಆಗರವಾಗಿದೆ. ಮಳೆ ಬಂದರೆ ಸೋರುವ ಫ್ಲಾಟ್‌ಫಾರಂ, ಛಾವಣಿ ಇಲ್ಲದ ವಿಶ್ರಾಂತಿ ಕೊಠಡಿ, ಬೆಳಕಿನ ಸಮಸ್ಯೆ- ಹೀಗೆ ಕೊರತೆಯ ಪಟ್ಟಿ ದೊಡ್ಡದಿದೆ. ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರಿಗೆ ಸಂಪರ್ಕ ಕಲ್ಪಿಸಲು ಅಗತ್ಯವಾದ ನಿಲ್ದಾಣ ಇದಾದರೂ ಮೂಲಸೌಕರ್ಯ ಕೊರತೆ ತೀವ್ರವಾಗಿದೆ.

Advertisement

ವಿಶ್ರಾಂತಿ ಕೊಠಡಿ ಇಲ್ಲ
ಇಲ್ಲಿ ಮಳೆ, ಗಾಳಿಯಿಂದ ರಕ್ಷಿಸಿಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲ. ಸಾಮಾನ್ಯ ಪ್ರಯಾಣಿಕರಿಗಾಗಲಿ, ಮಹಿಳೆಯರಿಗಾಗಲಿ ವಿಶ್ರಾಂತಿ ಕೊಠಡಿ ಇಲ್ಲ.  ಇದರಿಂದ ಹೊರಗಿರುವ ಸಿಮೆಂಟ್‌ ಬೆಂಚ್‌ಗಳಲ್ಲೇ ಕೂತು, ಮಳೆ ಬಂದರೆ ನೀರು ಬೀಳುವುದರಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರು ಪರದಾಟ ನಡೆಸಬೇಕಿದೆ.

ಇಲ್ಲಗಳದ್ದೇ ದೊಡ್ಡ ಪಟ್ಟಿ
ರೈಲ್ವೇ ನಿಲ್ದಾಣವಾದರೂ ಇಲ್ಲಿ ಸೂಕ್ತ ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆ ಇದೆ. ಲೋವೋಲ್ಟೆಜ್‌, ರಾತ್ರಿ ವೇಳೆ ಬೆಳಕಿನ ಸಮಸ್ಯೆಯೂ ಇದೆ. ಪ್ಲಾಟ್‌ಫಾರ್ಮ್ನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಸಿಬಂದಿ ವಸತಿಗೃಹ ನಿರ್ವಹಣೆ ಇಲ್ಲದೆ ಪಾಳುಬಿದ್ದಿದೆ. ಸ್ಟೇಶನ್‌ ಮಾಸ್ಟರ್‌ ಕೊಠಡಿಯ ಒಂದು ಬದಿಯಲ್ಲೇ ಟಿಕೆಟ್‌ ಕೌಂಟರ್‌ ಇದ್ದು ಇದು ಅಕ್ಷರಶಃ ಕೋಳಿ ಗೂಡಿನಂತಿದೆ.


ಓವರ್‌ ಬ್ರಿಜ್‌ ಇಲ್ಲ
ನಿಲ್ದಾಣದಲ್ಲಿ ಆರು ಲೇನ್‌ಗಳಿವೆ. ಮೂರನೇ ಲೇನ್‌ನಲ್ಲಿ ರೈಲು ನಿಂತರೆ ಪ್ರಯಾಣಿಕರು ಹಳಿ ದಾಟಿಯೇ ರೈಲು ಏರಬೇಕು. ಓವರ್‌ ಬ್ರಿಜ್‌ ಇಲ್ಲದ್ದರಿಂದ ರೈಲು ನಿಂತಿದ್ದರೆ, ಅದರ ಬೋಗಿ ಒಳಹೊಕ್ಕು ಹಳಿ ದಾಟಿ ಆ ಕಡೆ ನಿಂತಿರುವ ರೈಲು ಏರಬೇಕು. ಈ ಹಿಂದೆ ಹಳಿ ದಾಟುವ ಧಾವಂತಕ್ಕೆ ಪ್ರಯಾಣಿಕರೊಬ್ಬರು ಕಾಲು ಕಳೆದುಕೊಂಡ ಘಟನೆಯೂ ನಡೆದಿದೆ. ವಯಸ್ಸಾದ ಪ್ರಯಾಣಿಕ ರಂತೂ ಇಲ್ಲಿ ಹಳಿದಾಟುವುದು ಕಷ್ಟಕರವಾಗಿದೆ.

ತಲೆಕೆಡಿಸಿಕೊಳ್ಳದ ಇಲಾಖೆ
ಸುಬ್ರಹ್ಮಣ್ಯ ಕ್ರಾಸ್‌ ರೋಡ್‌ ನಿಲ್ದಾಣಕ್ಕೆ ನಿತ್ಯ ಸರಾಸರಿ 1 ಸಾವಿರದಷ್ಟು ಪ್ರಯಾಣಿಕರು ಆಗಮಿಸುತ್ತಾರೆ.  ಈ ನಿಲ್ದಾಣ ಮೂಲಕ ಬೆಂಗಳೂರು, ಯಶವಂತಪುರ, ಕಾರವಾರ, ಕಣ್ಣೂರು, ಮಂಗಳೂರು ಎಕ್ಸ್‌ಪ್ರೆಸ್‌ ಹಾಗೂ ಮಂಗಳೂರು-ಸುಬ್ರಹ್ಮಣ್ಯ ನಡುವೆ ಪ್ಯಾಸೆಂಜರ್‌ ರೈಲು ಓಡಾಟವಿದೆ. ಪ್ರತಿದಿನ ಗೂಡ್ಸ್‌ ರೈಲು ಸೇರಿದಂತೆ 9ರಿಂದ 10 ರೈಲುಗಳು ಈ ಮೂಲಕ ಸಂಚರಿಸುತ್ತಿವೆ. ಆದರೂ ಮೂಲಸೌಕರ್ಯ ವೃದ್ಧಿಗೆ ಇಲಾಖೆ ತಲೆಕೆಡಿಸಿಕೊಂಡಿಲ್ಲ.

ಪ್ರಯಾಣಿಕರಿಗೆ ಅನುಕೂಲ ಎಂದು?
1964ರಲ್ಲಿ ಕುಲ್ಕುಂದದಲ್ಲಿ ನಿಲ್ದಾಣ ನಿರ್ಮಾಣಕ್ಕೆ ಸರ್ವೇ ನಡೆದಿತ್ತು. ಆಗ ನಿಲ್ದಾಣವಾದರೆ ದೇಗುಲ ಭದ್ರತೆಗೆ ತೊಡಕಾಗುತ್ತದೆ ಎಂದು ಹಲವರು ಹೇಳಿದ್ದರು. ಬಳಿಕ ನಿಲ್ದಾಣವನ್ನು 13 ಕಿ.ಮೀ. ದೂರದ ನೆಟ್ಟಣಕ್ಕೆ ವರ್ಗಾಯಿಸಲಾಗಿತ್ತು. ಈಗ ಪ್ರಯಾಣಿಕರು ಇಲ್ಲಿಂದ ದೇಗುಲಗಳಿಗೆ ತೆರಳಲು ಬಾಡಿಗೆ ವಾಹನ ಆಶ್ರಯಿಸುವುದು ಅನಿವಾರ್ಯವಾಗಿದೆ. ಸದ್ಯ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ ಅವರು ರೈಲ್ವೇ ಸಚಿವರಾದಾಗ ಈ ನಿಲ್ದಾಣದ ಸುಧಾರಣೆ ಆಶಾಭಾವನೆ ವ್ಯಕ್ತವಾಗಿತ್ತು. ಆದರೆ ಅದು ಹುಸಿಯಾಗಿದೆ. ಆದಾಗ್ಯೂ ಈ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಪ್ರವಾಸಿ ನಿಲ್ದಾಣವನ್ನಾಗಿಸುವುದು, ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರಿಗಾಗಿ ಬೆಂಗಳೂರು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವಂತೆ ಹೆಚ್ಚಿನ ರೈಲುಗಳನ್ನು ಓಡಿಸಬೇಕಿದೆ.
 

Advertisement

ದೇಶದ ರೈಲು ನಿಲ್ದಾಣಗಳು ಆಧುನೀಕರಣಗೊಂಡಿವೆ. ಆದರೆ ಈ ನಿಲ್ದಾಣದ ಸ್ಥಿತಿ ತೀರಾ ಕೆಟ್ಟದಾಗಿದೆ. ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿತ್ತು. ಈ ಕುರಿತು ಕೇಂದ್ರ ರೈಲ್ವೇ ಸಚಿವರಿಗೆ ದೂರು ನೀಡಲು ನಿರ್ಧರಿಸಿದ್ದೇನೆ.
-ಕೇಶುಭಾಯಿ ಪಟೇಲ್‌, ಯಾತ್ರಾರ್ಥಿ

ನೀರು ಸೋರಿಕೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಗಮನಹರಿಸಿ ಅದನ್ನು ಸರಿಪಡಿಸುತ್ತೇವೆ. 
ಕೆ.ಪಿ. ನಾಯ್ಡು.  ರೈಲ್ವೇ ಸೆಕ್ಷನ್‌ ಎಂಜಿನಿಯರ್‌

* ಬಾಲಕೃಷ್ಣ  ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next