Advertisement

ಸುಬ್ರಹ್ಮಣ್ಯ ಗುಡ್ಡ ಕುಸಿದು ದುರಂತ ಪ್ರಕರಣ : ಇಬ್ಬರು ಮಕ್ಕಳಿಗೆ ಕಣ್ಣೀರ ವಿದಾಯ

08:12 AM Aug 03, 2022 | Team Udayavani |

ಸುಬ್ರಹ್ಮಣ್ಯ: ಇಲ್ಲಿನ ಪರ್ವತಮುಖೀಯಲ್ಲಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮಣ್ಣಿನಡಿ ಸಿಲುಕಿ ಮೃತಪಟ್ಟ ಇಬ್ಬರು ಮಕ್ಕಳ ಅಂತ್ಯಸಂಸ್ಕಾರ ಪಂಜ ಕರಿಮಜಲಿನಲ್ಲಿ ಮಂಗಳವಾರ ನಡೆಯಿತು.

Advertisement

ಸೋಮವಾರ ರಾತ್ರಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಪಂಜದ ಕರಿಮಜಲು ಕುಸುಮಾಧರ ಮತ್ತು ರೂಪಶ್ರೀ ದಂಪತಿಯ ಮಕ್ಕಳಾದ ಶ್ರುತಿ (11) ಮತ್ತು ಗಾನಶ್ರೀ (6) ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು. ಘಟನೆ ವೇಳೆ ಮೂವರು ಹೊರಗೆ ಓಡಿ ಪಾರಾಗಿದ್ದರು. ಕೂಡಲೇ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ಮೇಲಕ್ಕೆತ್ತಿದರೂ ಬದುಕಿಸುವ ಪ್ರಯತ್ನ ಕೈಗೂಡಲಿಲ್ಲ. ಕಡಬ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ರಾತ್ರಿಯೇ ಮನೆಯವರಿಗೆ ಬಿಟ್ಟುಕೊಡಲಾಯಿತು.

ಕಣ್ಣೀರ ವಿದಾಯ
ಏನೂ ಅರಿಯದ ಎಳೆಯ ಮಕ್ಕಳಿಬ್ಬರ ಸಾವು ಇಡೀ ಸುಬ್ರಹ್ಮಣ್ಯ ಪರಿಸರದ ಜನತೆಯನ್ನು ಕಣ್ಣೀರಲ್ಲಿ ಮುಳುಗಿಸಿದೆ. ಹಲವಾರು ಮಂದಿ ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು. ಶ್ರುತಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯಲ್ಲಿ 5ನೇ ತರಗತಿ ಹಾಗೂ ಗಾನಶ್ರೀ ಸುಬ್ರಹ್ಮಣ್ಯ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 2ನೇ ತರಗತಿ ಕಲಿಯುತ್ತಿದ್ದರು.

ಪರಿಹಾರ ಹಸ್ತಾಂತರ
ಸೋಮವಾರ ರಾತ್ರಿಯೇ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ಕಡಬ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮಂಗಳವಾರ ಬೆಳಗ್ಗೆ ಘಟನೆ ನಡೆದ ಪರ್ವತಮುಖೀಗೂ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದರು. ಮೃತರ ಮನೆಗೆ ಸಚಿವ ಎಸ್‌. ಅಂಗಾರ ಭೇಟಿ ನೀಡಿ ಸಾಂತ್ವನ ಹೇಳಿದರು. ಮೃತ ಮಕ್ಕಳ ಕುಟುಂಬಕ್ಕೆ ಸರಕಾರದಿಂದ ನೀಡಲಾದ 11.5 ಲಕ್ಷ ರೂ. ಮೊತ್ತದ ಒಟ್ಟು ಮೂರು ಚೆಕ್‌ಗಳನ್ನು ಸಚಿವ ಎಸ್‌. ಅಂಗಾರ ವಿತರಿಸಿದರು. ಕಡಬ ತಹಶೀಲ್ದಾರ್‌ ಅನಂತಶಂಕರ ಜತೆಗಿದ್ದರು.

ಇದನ್ನೂ ಓದಿ : ಮಧ್ಯರಾತ್ರಿ ಕಾಂಗ್ರೆಸ್ ನಾಯಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next