Advertisement

ಬಿಳಿನೆಲೆಗೆ ಬಂದ ನಕ್ಸಲರಿಗೆ ಶೋಧ: ಮೊಬೈಲ್‌, ಲ್ಯಾಪ್‌ಟಾಪ್‌ ಚಾರ್ಜ್‌ ಮಾಡಿಸಿಕೊಂಡಿದ್ದರು!

03:05 PM Apr 07, 2024 | Team Udayavani |

ಸುಬ್ರಹ್ಮಣ್ಯ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿನ ಅರಣ್ಯದಂಚಿನ ಮನೆಗೆ ಗುರುವಾರ ರಾತ್ರಿ ಭೇಟಿ ನೀಡಿದ್ದ ಮುಸುಕುಧಾರಿ, ಶಸ್ತ್ರಧಾರಿ ನಕ್ಸಲರ ತಂಡದಲ್ಲಿ 6 ಮಂದಿ ಇದ್ದರು ಎನ್ನುವುದು ದೃಢಪಟ್ಟಿದೆ.

Advertisement

ಬಂದವರೆಲ್ಲರೂ ಒಂದೇ ರೀತಿಯ ವಸ್ತ್ರ ಧರಿಸಿದ್ದು, ಮುಖ ಮರೆಸಿಕೊಂಡಿದ್ದರು. ಶೂ ಧರಿಸಿದ್ದು, ದೊಡ್ಡ ಬ್ಯಾಗ್‌ ಹಾಕಿಕೊಂಡಿದ್ದರು. ಬ್ಯಾಗ್‌ನಲ್ಲಿ ಗನ್‌ ಮಾದರಿಯ ಉಪಕರಣ ಇರುವುದನ್ನು ಮನೆಯವರು ಗಮನಿಸಿದ್ದಾರೆ. ಇಬ್ಬರು ಮನೆಯ ಒಳಗೆ ಪ್ರವೇಶಿಸಿದ್ದು, ವಿದ್ಯುತ್‌ ದೀಪಗಳನ್ನು, ಮನೆ ಯಜಮಾನರ ಮೊಬೈಲನ್ನು ಸ್ವಿಚ್‌ ಆಫ್ ಮಾಡಿಸಿ, ಟಿವಿಯ ಶಬ್ದವನ್ನು ಹೆಚ್ಚಿಸಿದ್ದರು. ಜತೆಗೆ ಬಂದಿದ್ದ ನಾಲ್ವರು ಮನೆಯ ಎದುರು ಹಾಗೂ ಹಿಂದೆ ನಿಂತುಕೊಂಡಿದ್ದರು. ಬಳಿಕ ಊಟ ಕೇಳಿ ತಯಾರಿಸಿ ಮನೆಯಲ್ಲಿದ್ದ ಕೋಳಿ ಪದಾರ್ಥದಲ್ಲಿ ಊಟ ಮಾಡಿದ್ದಾರೆ. ಮನೆಮಂದಿ ಟಿವಿಯಲ್ಲಿ ನೋಡುತ್ತಿದ್ದ ಧಾರಾವಾಹಿಯನ್ನೂ ವೀಕ್ಷಿಸಿ ಬಳಿಕ ಅಕ್ಕಿ ಸಹಿತ ಕೆಲವು ಸಾಮಗ್ರಿಗಳನ್ನು ಕೇಳಿ ಪಡೆದು ಅರಣ್ಯದತ್ತ ತೆರಳಿದ್ದರು. ಆರು ಮೊಬೈಲ್‌ ಫೋನ್‌ ಮತ್ತು ಒಂದು ಲ್ಯಾಪ್‌ಟಾಪ್‌ಗೆ ಚಾರ್ಜ್‌ ಮಾಡಿಸಿಕೊಂಡಿದ್ದರು. ಕನ್ನಡ ಹಾಗೂ ಇತರ ಭಾಷೆಗಳಲ್ಲಿ ಮಾತನಾಡಿದ್ದರು ಎಂದು ಮನೆಯವರು ಮಾಹಿತಿ ನೀಡಿದ್ದಾರೆ.

ಶೋಧ ಚುರುಕು
ನಕ್ಸಲರು ಮನೆಗೆ ಭೇಟಿ ನೀಡಿದ ವಿಚಾರ ತಿಳಿಯುತ್ತಲೇ ಪೊಲೀಸ್‌ ಅಧಿ ಕಾರಿಗಳು, ನಕ್ಸಲ್‌ ನಿಗ್ರಹ ಪಡೆಯವರು ಚೇರುವಿನ ಮನೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಮನೆ ಸಮೀಪದ ಅರಣ್ಯ ಹಾಗೂ ಇತರ ಕಡೆಗಳಲ್ಲಿ ಎಎನ್‌ಎಫ್ ಶೋಧ ನಡೆಸುತ್ತಿದೆ. ನಕ್ಸಲರು ಭೇಟಿ ನೀಡಿದ ಮನೆ ಸುಬ್ರಹ್ಮಣ್ಯ-ಗುಂಡ್ಯ ಹೆದ್ದಾರಿಯಿಂದ ಸ್ವಲ್ಪವೇ ದೂರ ಅರಣ್ಯದಂಚಿನಲ್ಲಿದೆ.

ಜನರಲ್ಲಿ ಆತಂಕ
10-12 ವರ್ಷಗಳ ಬಳಿಕ ನಕ್ಸಲರು ಸುಬ್ರಹ್ಮಣ್ಯ ಭಾಗದ ಅಲ್ಲಲ್ಲಿ ಆಗಾಗ ಕಾಣಿಸಿ ಕೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ನಕ್ಸಲರು ಭೇಟಿ ನೀಡಿದ ಮನೆಗಳು, ಆಯ್ದ ಪ್ರದೇಶಗಳಿಗೆ ಹೆಚ್ಚುವರಿ ಪೊಲೀಸ್‌ ಭದ್ರತೆ ಒದಗಿಸುವುದಲ್ಲದೆ ಗಸ್ತು ಬಿಗುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next