Advertisement

ಎಲ್ಲೆಡೆ ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ

11:48 AM Dec 14, 2018 | Team Udayavani |

ಮೈಸೂರು: ಸುಬ್ರಹ್ಮಣ್ಯ ಷಷ್ಠಿ ಅಂಗವಾಗಿ ಸಿದ್ಧಲಿಂಗಪುರದ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ನಗರದೆಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಸುಬ್ರಹ್ಮಣೇಶ್ವರಸ್ವಾಮಿಯ ದರ್ಶನ ಪಡೆದು ಪುನೀತರಾದ ಸಹಸ್ರಾರು ಭಕ್ತರು, ಹುತ್ತಕ್ಕೆ ಹಾಲೆರೆದು ಷಷ್ಠಿ ಆಚರಣೆ ಮಾಡಿದರು. 

Advertisement

ಹಬ್ಬದ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯ ಸಿದ್ಧಲಿಂಗಪುರದ ಸುಬ್ರಹ್ಮಣೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಹಬ್ಬದ ಪ್ರಯುಕ್ತ ಮುಂಜಾನೆ 2 ಗಂಟೆಯಿಂದಲೇ ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ದೇವರ ದರ್ಶನ ಪಡೆಯುವ ಜತೆಗೆ ಪೂಜೆಗೆ ಅವಕಾಶ ಮಾಡಿಕೊಡಲಾಗಿತ್ತು.

ಬೆಳಗ್ಗೆ ಮೂರು ಗಂಟೆಗೆ ಸುಬ್ರಹ್ಮಣೇಶ್ವರಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಸಹಸ್ರ ನಾಮಾರ್ಚನೆ, ಅಷ್ಟವಧಾನ ಪೂಜೆ ಸಲ್ಲಿಸಿ, ನಂತರ ಹಾಲು, ಮೊಸರು, ಜೇನುತುಪ್ಪ, ಬೆಣ್ಣೆ ಅಭಿಷೇಕ ಮಾಡಲಾಯಿತು. ಮೈಸೂರು, ಶ್ರೀರಂಗಪಟ್ಟಣ ಸೇರಿದಂತೆ ವಿವಿಧೆಡೆಗಳಲ್ಲಿ ಆಗಮಿಸಿದ್ದ ಅಸಂಖ್ಯಾತ ಭಕ್ತರು, ಸಾಲುಗಟ್ಟಿನಿಂತ ದೇವರ ದರ್ಶನ ಪಡೆದರು. 

ಬೆಳ್ಳಿ ನಾಗರ ಧಾರಣೆ:ಪ್ರತಿ ವರ್ಷದ ಷಷ್ಠಿ ಸಂದರ್ಭದಲ್ಲಿ ಸುಬ್ರಹ್ಮಣೇಶ್ವರಸ್ವಾಮಿಗೆ ಬೆಳ್ಳಿ ನಾಗಾಭರಣವನ್ನು ಧರಿಸಲಾಗುತ್ತದೆ. ಅಂತೆಯೇ ಕಳೆದ ರಾತ್ರಿಯೇ ಪೊಲೀಸ್‌ ಬಂದೋಬಸ್ತ್ನಲ್ಲಿ ತಹಶೀಲ್ದಾರ್‌ ರಮೇಶ್‌ಬಾಬು, ದೇವಸ್ಥಾನದ ಪ್ರಧಾನ ಅರ್ಚಕ ಎನ್‌.ವಿ. ಸುಬ್ರಹ್ಮಣ್ಯ ಸಮ್ಮುಖದಲ್ಲಿ ದೇವರಿಗೆ ಧರಿಸಲಾಗಿತ್ತು. ಈ ಬೆಳ್ಳಿ ನಾಗಾಭರಣವನ್ನು ಮೈಸೂರು ಅರಸರು ಕೊಡುಗೆಯಾಗಿ ನೀಡಿದ್ದು,

ಮಹಾರಾಜರ ಕಾಲದಿಂದಲೂ ಷಷ್ಠಿ ಸಂದರ್ಭದಲ್ಲಿ ದೇವರಿಗೆ ಧರಿಸಲಾಗುತ್ತದೆ. ಷಷ್ಠಿ ಹಿನ್ನೆಲೆಯಲ್ಲಿ ನಡೆದ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದ ಬಳಿಕ ಮಧ್ಯಾಹ್ನ 12.30ರ ಹೊತ್ತಿಗೆ ಸುಬ್ರಹ್ಮಣೇಶ್ವರಸಾಮಿಯ ರಥೋತ್ಸವ ವೈಭವದಿಂದ ಜರುಗಿತು. ಷಷ್ಠಿ ಹಬ್ಬದ ಪ್ರಯುಕ್ತ ಅಸಂಖ್ಯಾತ ಭಕ್ತಾಧಿಗಳು ಜಮಾಯಿಸಿದ್ದ ಹಿನ್ನೆಲೆಯಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. 

Advertisement

ಹುತ್ತಗಳಿಗೆ ಪೂಜೆ: ಷಷ್ಠಿ ಪ್ರಯುಕ್ತ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದರೆ. ಮತ್ತೂಂದೆಡೆ ಭಕ್ತರು ನಾಗರ ಹುತ್ತಕ್ಕೆ ಹಾಲು-ಬೆಣ್ಣೆ ತನಿ ಎರೆಯುವ ಮೂಲಕ ಹರಕೆ ತೀರಿಸಿದರು. ಈ ನಡುವೆ ಕೆಲವು ಭಕ್ತಾಧಿಗಳು ಬೆಳ್ಳಿಯ ನಾಗರ ವಿಗ್ರಹಳನ್ನು ಹುತ್ತಕ್ಕೆ ಹಾಕುವ ಮೂಲಕ ಭಕ್ತಿಭಾವ ಮೆರೆದರು. 

ಪೊಲೀಸ್‌ ಭದ್ರತೆ: ದೇವರದರ್ಶನ ಸೇರಿ ಇನ್ನಿತರ ಸಂದರ್ಭದಲ್ಲಿ ಯಾವುದೇ ಗೊಂದಲ, ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ದೇವಸ್ಥಾನದ ಪ್ರವೇಶಸ್ಥಳ, ಭಕ್ತರು ಸಾಲಾಗಿ ನಿಂತಿದ್ದ ಕಡೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಸರಗಳ್ಳರ ಮೇಲೆ ನಿಗಾ ಇಡಲು ಮಫ್ತಿ ಪೊಲೀಸರು, ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿತ್ತು.

ಷಷ್ಠಿ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಮಾರ್ಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ, ಬದಲಿ ಮಾರ್ಗವನ್ನು ಕಲ್ಪಿಸಲಾಗಿತ್ತು. ಹೀಗಾಗಿ ಮೈಸೂರು-ಬೆಂಗಳೂರು ಮಾರ್ಗವಾಗಿ ಸಂಚರಿಸುವ ವಾಹನಗಳು ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿಯ ರಿಂಗ್‌ರಸ್ತೆಯಲ್ಲಿ ಎಡಕ್ಕೆ ತಿರುಗಿ ರಾಯಲ್‌ ಇನ್‌ ಜಂಕ್ಷನ್‌, ಕೆಆರ್‌ಎಸ್‌ ರಸ್ತೆ,ಪಂಪ್‌ಹೌಸ್‌, ಪಾಲಹಳ್ಳಿ ಮಾರ್ಗವಾಗಿ ಪಶ್ಚಿಮವಾನಿಗೆ ತಲುಪಲು ಸೂಚಿಸಲಾಗಿತ್ತು. 

ವಿವಿಧೆಡೆಗಳಲ್ಲಿ ಆಚರಣೆ: ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ಮೈಸೂರಿನಲ್ಲಿ ಹಲವು ದೇವಸ್ಥಾನಗಳು ಹಾಗೂ ಬಡಾವಣೆಗಳಲ್ಲಿ ಆಚರಿಸಲಾಯಿತು. ಪ್ರಮುಖವಾಗಿ ದೇವರಾಜ ಮೊಹಲ್ಲಾದ ಅಮೃತೇಶ್ವರ ದೇವಸ್ಥಾನ, ವಿಶ್ವೇಶ್ವರನಗರದ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, ಮಾನಂದವಾಡಿ ರಸ್ತೆಯ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಇನ್ನಿತರ ದೇವಸ್ಥಾನಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು.

ಇನ್ನೂ ನಗರದ ವಿವಿಧ ಬಡಾವಣೆಗಳಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಭಕ್ತಾಧಿಗಳು ತಮ್ಮ ಬಡಾವಣೆಯಲ್ಲಿರುವ ಹುತ್ತಕ್ಕೆ ವಿಶೇಷ ಪೂಜೆ ಸಲ್ಲಿಸಿ, ಹುತ್ತಕ್ಕೆ ಹಾಲು, ಮೊಸರಿನಿಂದ ಪೂಜೆ ಸಲ್ಲಿಸಿ, ತನಿ ಎರೆಯುವ ಮೂಲಕ ಹಬ್ಬದ ಆಚರಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next