Advertisement

ಬೆಳೆಹಾನಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿ

04:42 PM Sep 22, 2018 | |

ಹಾವೇರಿ: ತಾಲೂಕಿನಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದಾಗಿ ಅಪಾರ ಬೆಳೆ ಹಾನಿಯಾಗಿದ್ದು ಶೀಘ್ರ ಬೆಳೆಹಾನಿ ಸಮೀಕ್ಷೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ತೀರ್ಮಾನಿಸಲಾಯಿತು. ನಗರದ ತಾಪಂ ಸಭಾಭವನದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

Advertisement

ಸಭೆಯಲ್ಲಿ ಸದಸ್ಯ ಸತೀಶ ಸಂದಿಮನಿ ಮಾತನಾಡಿ, ಜಿಲ್ಲೆಯಲ್ಲಿ ರಾಣಿಬೆನ್ನೂರು ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ, ಹಾವೇರಿ ತಾಲೂಕಿನ ರೈತರ ಬೆಳೆಗಳು ಸಹ ಹಾನಿಯಾಗಿದ್ದು ಸರ್ಕಾರ ತಾರತಮ್ಯ ಮಾಡುವ ಮೂಲಕ ರೈತರನ್ನು ಕಡೆಗಣಿಸುತ್ತಿದೆ. ಅಲ್ಲದೇ ಕೃಷಿ ಅಧಿಕಾರಿಗಳು ಸಹ ಬೆಳೆ ಸಮೀಕ್ಷೆ ಕೈಗೊಳ್ಳುವಲ್ಲಿ ನಿರ್ಲಕ್ಷ್ಯತೋರಿದ್ದು, ಯಾವೊಬ್ಬ ಅಧಿಕಾರಿಗಳು ಸಹ ಬೆಳೆಹಾನಿಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿಲ್ಲ. ಅಧಿಕಾರಿಗಳು ಮಾಡುವ ತಪ್ಪಿನಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ ಎಂದರು.

ತಾಲೂಕಿನ ಎಲ್ಲ ಗ್ರಾಮ ಪಂಚಾಯತ್‌ ಗಳಲ್ಲಿ ಅಳವಡಿಸಿರುವ ಮಳೆ ಮಾಪನಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಗ್ರಾಪಂ ಅಭಿವೃದ್ಧಿ ಅಧಿ ಕಾರಿಗಳು ಮಳೆ ಬಿದ್ದ ಪ್ರಮಾಣದ ಬಗ್ಗೆ ಸರಿಯಾದ ಮಾಹಿತಿ ನೀಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದರು.

ಕೃಷಿ ಅಧಿಕಾರಿ ಕರಿಯಲ್ಲಪ್ಪ ಡಿ. ಮಾತನಾಡಿ, ತಾಲೂಕಿನಲ್ಲಿ ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಬೆಳೆಹಾನಿ ಕುರಿತು ಸಮೀಕ್ಷೆ ಕೈಗೊಂಡು ವರದಿ ಸಲ್ಲಿಸಲಾಗಿದೆ. ಆದರೆ, ಬರಪೀಡಿತ ತಾಲೂಕಿನ ಘೋಷಣೆ ನಿರ್ಣಯವನ್ನು ರಾಜ್ಯಮಟ್ಟದಲ್ಲಿ ಕೈಗೊಳ್ಳಲಾಗುತ್ತದೆ. ಬರಪೀಡಿತ ತಾಲೂಕು ಘೋಷಣೆಗೆ ಮಾಡಲು ಕೆಲವೊಂದು ನಿಬಂಧನೆಗಳಿವೆ. ಕೇವಲ ನಮ್ಮ ವರದಿ ಆಧರಿಸಿ ಬರಪೀಡಿತ ತಾಲೂಕು ಎಂದು ಘೋಷಿಸಲ್ಲ ಎಂದು ಸಭೆಗೆ ತಿಳಿಸಿದರು.

ತಾಪಂ ಸದಸ್ಯ ಮಾಲತೇಶ ಬನ್ನಿಮಟ್ಟಿ ಮಾತನಾಡಿ, ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ಜಮೀನುಗಳಿಗೆ ನದಿ ನೀರು ನುಗ್ಗಿ ಹಾನಿಯಾದ ಸಂದರ್ಭದಲ್ಲಿ ಸಮೀಕ್ಷೆಗೆ ಬಂದಿದ್ದ ಅ ಧಿಕಾರಿಗಳು, ಸದ್ಯ ಮಳೆ ಕೊರತೆಯಿಂದ ಬೆಳೆಹಾನಿಯಾಗಿದ್ದು, ಈ ಬಗ್ಗೆ ಸಮೀಕ್ಷೆ ಕೈಗೊಂಡಿಲ್ಲ. ಕೂಡಲೇ ಅಧಿಕಾರಿಗಳು ಬೆಳೆಹಾನಿ ಕುರಿತು ಸಮೀಕ್ಷೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

Advertisement

ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಕರಿಯಪ್ಪ ಉಂಡಿ ಮಾತನಾಡಿ, ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಬರದ
ಛಾಯೆ ಆವರಿಸಿದ್ದು, ಬೆಳೆಗಳು ಒಣಗಿ ಹೋಗುತ್ತಿವೆ. ಕೂಡಲೇ ಬೆಳೆಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಠರಾವು ಮಾಡಲು ಸೂಚಿಸಿದರು. 

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಣಾ ಧಿಕಾರಿ ಪಿ.ಎನ್‌. ಹುಬ್ಬಳ್ಳಿ, ಬೆಳೆಹಾನಿ ಪರಿಹಾರ ವಿತರಣೆಗೆ ನಿಗದಿತ ಅವಧಿ ಘೋಷಣೆ ಮಾಡಲು ಕ್ರಮ ಕೈಗೊಳ್ಳುವಂತೆ ಠರಾವು ಪಾಸ್‌ ಮಾಡಲು ಸೂಚಿಸಿದರು. ತೋಟಗಾರಿಕೆ ಇಲಾಖೆ ಅಧಿಕಾರಿ ಬಸವರಾಜ ಬರೆಗಾರ ಮಾತನಾಡಿ, ತಾಲೂಕಿನಲ್ಲಿ 101 ಶಾಲೆಗಳಲ್ಲಿ ಕಿಚನ್‌ ಗಾರ್ಡ್‌ನ್‌ ನಿರ್ಮಿಸಲು ಆಯ್ಕೆ ಮಾಡಿಕೊಳ್ಳಲಾಗಿದೆ. ಇಲ್ಲಿ ಶಾಲೆಯ ಬಿಸಿಯೂಟ ಯೋಜನೆಗೆ ಅಗತ್ಯವಾಗಿ ಬೇಕಾದ ತರಕಾರಿ ಬೆಳೆಗಳನ್ನು ಬೆಳೆಯುವುದು ಹಾಗೂ ಮಕ್ಕಳಿಗೆ ತರಕಾರಿಗಳ ಬಗ್ಗೆ ತಿಳಿವಳಿಕೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಸಭೆಯಲ್ಲಿ ಆರೋಗ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕಂದಾಯ, ಅರಣ್ಯ, ಶಿಶು ಅಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಕುರಿತು ಚರ್ಚಿಸಲಾಯಿತು. ತಾಪಂ ಅಧ್ಯಕ್ಷ ಕರಿಯಲ್ಲಪ್ಪ ಉಂಡಿ, ತಾಪಂ ಉಪಾಧ್ಯಕ್ಷೆ ಸಾವಿತ್ರಮ್ಮ ಮರಡೂರ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ ಗುಡಜ್ಜನವರ, ತಾಪಂ ಒಇ ಪಿ.ಎನ್‌.ಹುಬ್ಬಳ್ಳಿ ವೇದಿಕೆಯಲ್ಲಿದ್ದರು.

ಬೆಳೆ ವಿಮೆಯಲ್ಲಿ ಅನ್ಯಾಯ
ಇನ್ನು ಬೆಳೆವಿಮೆ ಪರಿಹಾರ ವಿತರಣೆಯಲ್ಲಿಯೂ ರೈತರಿಗೆ ಮೋಸ ಮಾಡಲಾಗುತ್ತಿದೆ. ರೈತರಿಗೆ ಸರಿಯಾಗಿ ಮಾಹಿತಿ ನೀಡುತ್ತಿಲ್ಲ. ಬೆಳೆವಿಮೆ ತುಂಬಲು ಅವಧಿ ನಿಗದಿ ಮಾಡಿರುವಂತೆ ಬೆಳೆಹಾನಿ ಪರಿಹಾರ ವಿತರಣೆಗೂ ನಿಗದಿತ ಅವಧಿ ಘೋಷಣೆ ಮಾಡಬೇಕು. ಕಳೆದ ಎರಡು ವರ್ಷಗಳಿಂದ ಬೆಳೆಹಾನಿ ಪರಿಹಾರ ವಿತರಣೆಗೆ ಕ್ರಮ ಕೈಗೊಂಡಿಲ್ಲ. ಈ ಕುರಿತು ರೈತರು ಹಲವು ಬಾರಿ ಪ್ರತಿಭಟನೆ ನಡೆಸಿದರೂ ಸಮಸ್ಯೆ ಪರಿಹಾರವಾಗಿಲ್ಲ. ಅಧಿಕಾರಿಗಳು ಹಾಗೂ ಬೆಳೆವಿಮಾ ಕಂಪನಿಗಳು ತೆಗೆದುಕೊಂಡ ನಿರ್ಣಯವೇ ಅಂತಿಮ ಎನ್ನುವಂತಾಗಿದೆ ಎಂದು ಸದಸ್ಯ ಸತೀಶ ಸಂದಿಮನಿ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಸುಮಾರು 300ಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಅದರಲ್ಲಿಯೂ ಅನುದಾನಿತ ಶಾಲೆಗಳಲ್ಲಿ ಹುದ್ದೆಗಳು ಖಾಲಿ ಇದ್ದರೂ ನೇಮಕಕ್ಕೆ ಸರ್ಕಾರ ವಿಧಿಸಿರುವ ನಿಬಂಧನೆಗಳಿಂದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಿಸುವಂತಾಗಿದೆ. ಇದು ಮಲತಾಯಿ ಧೋರಣೆಯಾಗಿದ್ದು, ಕೂಡಲೇ ಸರ್ಕಾರ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ನೇಮಕಕ್ಕೆ ವಿಧಿಸಿರುವ ನಿಯಮ ಸಡಿಲಗೊಳಿಸಬೇಕು.
ವಗ್ಗಣ್ಣನವರ, ತಾಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next