ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್ ಮೂಲಕವೇ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸಲ್ಲಿಸಬೇಕು. ಆನ್‌ಲೈನ್ ಮೂಲಕ ವಿದ್ಯಾರ್ಥಿಗಳ ಮಾಹಿತಿ ನೀಡದಿದ್ದರೆ ಪ್ರಾಂಶುಪಾಲರೇ ಜವಾಬ್ದಾರರಾ ಗುತ್ತಾರೆ. ಒಂದೊಮ್ಮೆ ಆನ್‌ಲೈನ್‌ನಲ್ಲಿ ಮಾಹಿತಿ ನೀಡದಿದ್ದರೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸಲು ಕಷ್ಟವಾಗಬಹುದು.
ಹೌದು, ಪಿಯು ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದು 2017-18ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯು ತರಗತಿಗಳಿಗೆ ದಾಖಲಾಗಿರುವ ಎಲ್ಲ ವಿದ್ಯಾರ್ಥಿಗಳ ಮತ್ತು ಈ ವರ್ಷ ಕಾಲೇಜು ಬದಲಾವಣೆ ಮಾಡಿಕೊಂಡು ದ್ವಿತೀಯ ಪಿಯುಗೆ ದಾಖಲಾಗಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಒದಗಿಸಲು ನಿರ್ದೇಶನ ನೀಡಿದೆ. ಕಡತ, ಕೈಬರಹದ ಮೂಲಕ ವಿದ್ಯಾರ್ಥಿಗಳ ಮಾಹಿತಿ ಪಡೆಯುವ ವ್ಯವಸ್ಥೆ ಈಗ ಪಿಯು ಇಲಾಖೆಯಲ್ಲಿಲ್ಲ. ವಿದ್ಯಾರ್ಥಿಗಳ ಮಾಹಿತಿ ಪಡೆ ಯುವ ವ್ಯವಸ್ಥೆಯನ್ನು ಸಂಪೂರ್ಣ ಆನ್‌ಲೈನ್ ಮಾಡಲಾಗುತ್ತಿದೆ. ಈಗಾಗಲೇ ಪ್ರಥಮ ಪಿಯು ವಿದ್ಯಾರ್ಥಿಗಳ ಫಲಿತಾಂಶದ ಆನ್‌ಲೈನ್ ಅಪ್‌ಡೇಟ್ ಮಾಡಲಾಗಿದೆ.
ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಬರೆಯುವ ರೆಗ್ಯೂಲರ್ ವಿದ್ಯಾರ್ಥಿಗಳ ಎಲ್ಲಾ ಮಾಹಿತಿಯನ್ನು ಆನ್‌ಲೈನ್‌ನಲ್ಲೇ
ನೀಡಬೇಕೆಂದು ಹೊಸ ಆದೇಶದಲ್ಲಿ ತಿಳಿಸಿದೆ.
ಪರೀಕ್ಷೆಗೆ ಹಾಜರಾಗುವ ರೆಗ್ಯೂಲರ್ ವಿದ್ಯಾರ್ಥಿಗಳು ಪರೀಕ್ಷಾ ಶುಲ್ಕ ಸಂದಾಯ ಮಾಡಿರುವ ಬಗ್ಗೆಯೂ ಆಯಾ ಕಾಲೇಜಿನ ಪ್ರಾಂಶುಪಾಲರು ಇಲಾಖೆಗೆ ಆನ್‌ಲೈನ್ ಮೂಲಕವೇ ನೀಡಬೇಕು. ಪರೀಕ್ಷಾ ಶುಲ್ಕ ಹಾಗೂ ಪರೀಕ್ಷೆ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ತುಲನಾತ್ಮಕವಾಗಿ ಪರಿಶೀಲಿಸಿ, ಸರಿ ಇದೆಯೇ ಎಂಬುದನ್ನು ಪ್ರಾಂಶುಪಾಲರು ಗಮನಿಸಬೇಕು.
ಪ್ರಾಂಶುಪಾಲರ ಜವಾಬ್ದಾರಿ ಏನು?: ಈ ವರ್ಷ ದ್ವಿತೀಯ ಪಿಯು ಪರೀಕ್ಷೆ ಬರೆಯಲಿರುವ ಎಲ್ಲ ವಿದ್ಯಾರ್ಥಿಗಳ ಮಾಹಿತಿಯನ್ನು ಆನ್‌ಲೈನ್ ಮೂಲಕ ಅಪ್‌ಡೇಟ್ ಮಾಡುವುದು, ಪಿಯು ಆನ್‌ಲೈನ್ ಪೋರ್ಟಾಲ್‌ನಲ್ಲಿ ಕಾಲೇಜಿನ ಯೂಸರ್‌ನೆàಮ್ ಮತ್ತು ಪಾಸ್‌ವರ್ಡ್ ಬಳಸಿ ಲಾಗ್ ಇನ್ ಆಗಿ ಮಾಹಿತಿ ಒದಗಿಸುವುದು, ದಾಖಲಾತಿ ಮಾಹಿತಿ ತಿದ್ದುಪಡಿ ಇತ್ಯಾದಿ ಪ್ರಾಂಶುಪಾಲರೇ ಮಾಡಬೇಕು. 2018ರ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಇಲಾಖೆಯಲ್ಲಿ ಆನ್‌ಲೈನ್ ಮೂಲಕ ನೋಂದಾಯಿಸಲು ನ.10 ಕೊನೆಯ ದಿನವಾಗಿರುತ್ತದೆ. ನಿಗದಿತ ದಿನಾಂಕದೊಳಗೆ ನೋಂದಣಿ ಕಾರ್ಯ ಮುಗಿಸಲು ಇಲಾಖೆ ಅಧಿಕಾರಿಗಳಿಗೆ ಹಾಗೂ ಪ್ರಾಂಶುಪಾಲರಿಗೆ ಸೂಚಿಸಲಾಗಿದೆ. ಆನಂತರ ವಿದ್ಯಾರ್ಥಿಯ ಹೆಸರು, ತಂದೆ ತಾಯಿಯ ಹೆಸರು, ಜನ್ಮದಿನಾಂಕ, ಸಂಯೋಜನೆ, ವಿಷಯಗಳು, ಮಾಧ್ಯಮ ಮತ್ತು ಭಾವಚಿತ್ರದ ಬದಲಾವಣೆಗೆ ಅವಕಾಶ ಇರುವುದಿಲ್ಲ. ತಿದ್ದುಪಡಿ ಮಾಡದಿದ್ದರೆ ಇದಕ್ಕೆ ಆ ಕಾಲೇಜಿನ ಪ್ರಾಂಶುಪಾಲರೇ ಜವಾಬ್ದಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದೆ.
ತಿದ್ದುಪಡಿಗೆ ಅವಕಾಶ: ಈಗಾಗಲೇ ಆನ್‌ಲೈನ್ ಮೂಲಕ ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳ ಅಥವಾ ಪೋಷಕರ ಹೆಸರಿನ ಸ್ಪೆಲಿಂಗ್ ತಿದ್ದುಪಡಿಗೆ ಅವಕಾಶವಿದೆ. ಪ್ರಥಮ ಪಿಯು ಆಧರಿಸಿ ವಿದ್ಯಾರ್ಥಿ ದಾಖಲಾಗಿ ರುವ ಸಂಯೋಜನೆ, ಮಾಧ್ಯಮ ಮತ್ತು ವಿಷ ಯದ ತಿದ್ದುಪಡಿಗೂ ಅವಕಾಶ ವಿದೆ. ಆದರೆ, ದ್ವಿತೀಯ ಪಿಯು ತರಗತಿಗಳಿಗೆ ಸಂಯೋಜನೆ (ಕಲಾ,ವಾಣಿಜ್ಯ ಮತ್ತು ವಿಜ್ಞಾನ) ಬದಲಾವಣೆಗೆ ಅವಕಾಶ ಇರುವುದಿಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಜು ಖಾರ್ವಿ ಕೊಡೇರಿ