Advertisement

ಬೆಳೆ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಿ

05:14 PM Jul 07, 2020 | Suhan S |

ಚಿತ್ರದುರ್ಗ: ಕೋವಿಡ್ ಕಾರಣಕ್ಕೆ ಭದ್ರಾ ಮೇಲ್ದಂಡೆ ಕಾಮಗಾರಿ ವಿಳಂಬವಾಗಿದ್ದು, ಈ ಅವಧಿಯಲ್ಲಿ ಭೂ ಸ್ವಾಧೀನ ಮಾಡಿಕೊಂಡಿರುವ ರೈತರಿಗೆ ಬೆಳೆ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸೋಮವಾರ ಭದ್ರಾ ಮೇಲ್ದಂಡೆ ಯೋಜನೆ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ಆಗಿರುವ ನಷ್ಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಉದ್ಯಮಿಗಳು ಸೇರಿದಂತೆ ಅನೇಕ ವಲಯಗಳಿಗೆ ಪರಿಹಾರ ನೀಡಿವೆ. ಅದರಂತೆ ರೈತರಿಗೂ ಪರಿಹಾರ ಪ್ಯಾಕೇಜ್‌ ನೀಡಬೇಕು. ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಮಗಾರಿ ಮಾಡಿರುವ ರೈತರಿಗೆ ಪರಿಹಾರ ಹಾಗೂ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ತಾಕೀತು ಮಾಡಿದರು. ಯೋಜನಾ ವ್ಯಾಪ್ತಿಗೆ ಬರುವ ಎಲ್ಲಾ ಅಧಿಕಾರಿಗಳು ಸಭೆಗೆ ಬರಬೇಕು. ಸರ್ವೇ, ಅರಣ್ಯ ಸೇರಿದಂತೆ ಎಲ್ಲಾ ಅಧಿಕಾರಿಗಳನ್ನು ಒಳಗೊಂಡಂತೆ ಪ್ರತಿ ತಿಂಗಳೂ ಸಭೆ ನಡೆದರೆ ಕಗ್ಗಂಟಾಗಿರುವ ವಿಷಯಗಳನ್ನು ಬಗೆಹರಿಸಬಹುದು ಎಂದು ತಿಳಿಸಿದರು. ಚಿತ್ರದುರ್ಗ ಜಿಲ್ಲೆ ಹಾಗೂ ಆಯಾ ತಾಲೂಕುಗಳಿಗೆ ಹಂಚಿಕೆಯಾಗಿರುವ ನೀರಿನ ವಿಚಾರದಲ್ಲಿ ವ್ಯತ್ಯಯ ಆಗಬಾರದು. ಒತ್ತಡಗಳಿಗೆ ಮಣಿದು ಹೊಸ ಕೆರೆಗಳ ಸೇರ್ಪಡೆ ಮಾಡಬಾರದು. ಇದರಿಂದಾಗಿ ಕೊನೆಯ ಭಾಗದಲ್ಲಿರುವ ಚಳ್ಳಕೆರೆ ಹಾಗೂ ಪಾವಗಡ ತಾಲೂಕುಗಳಿಗೆ ಅನ್ಯಾಯವಾಗಲಿದೆ. ಕೆರೆಗಳಿಗೆ ಶೇ. 50 ರಷ್ಟು ನೀರು ತುಂಬಿಸುವ ಗುರಿ ಇದೆ. ಒಂದೊಮ್ಮೆ ಆಯಾ ತಾಲೂಕುಗಳಲ್ಲಿ ಕೆರೆಗಳ ಸಂಖ್ಯೆ ಹೆಚ್ಚಾದಲ್ಲಿ ತಾಲೂಕುಗಳಿಗೆ ನಿಗ ಯಾಗಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ. ತಾಂತ್ರಿಕ ವಾಗಿ ಇರುವ ಸಮಸ್ಯೆಯನ್ನು ತಿಳಿಸಬೇಕು. ಜತೆಗೆ ನೀರು ತುಂಬಿಸುವ ಮುನ್ನ ಕೆರೆಗಳನ್ನು ಸುಸ್ಥಿಯಲ್ಲಿಡಲು ಅಗತ್ಯ ಕ್ರಮ ಜರುಗಿಸಿ. ಒತ್ತುವರಿಯಾಗಿರುವ ಕೆರೆಗಳನ್ನೂ ತೆರವುಗೊಳಿಸ ಬೇಕು ಎಂದು ಹೇಳಿದರು.

ಭದ್ರಾ ಯೋಜನೆ ಮುಖ್ಯ ಇಂಜಿನಿಯರ್‌ ರಾಘವನ್‌ ಮಾತನಾಡಿ, ಜಿಲ್ಲೆಯಲ್ಲಿ 160 ಕೆರೆಗಳ ಯೋಜನಾ ವ್ಯಾಪ್ತಿಗೆ ಬರಲಿದ್ದು, ಇವುಗಳ ಪುನಶ್ಚೇತನಕ್ಕಾಗಿ 105 ಕೋಟಿ ರೂ. ಮೀಸಲಿರಿಸಲಾಗಿದೆ. ಚಳ್ಳಕೆರೆ 49, ಹೊಸದುರ್ಗ 27, ಚಿತ್ರದುರ್ಗ 11, ಹೊಳಲ್ಕೆರೆ 21, ಹಿರಿಯೂರು 32, ಮೊಳಕಾಲ್ಮೂರು 20 ಕೆರೆಗಳು ಬರಲಿವೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ ಸೇರಿದಂತೆ ಯೋಜನೆಗೆ ಸಂಬಂಧಿಸಿದ ಇಂಜಿನಿಯರ್‌ಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next