Advertisement

ಶಾಲೆಗಳಲ್ಲಿನ ಕೊರತೆ ಸಮಗ್ರ ವರದಿ ಸಲ್ಲಿಸಿ

10:09 AM Jun 21, 2018 | |

ದಾವಣಗೆರೆ: ಶಿಕ್ಷಕರು, ಕೊಠಡಿ, ಕುಡಿಯುವ ನೀರು, ಶೌಚಾಲಯ, ಕಾಂಪೌಂಡ್‌ ಒಳಗೊಂಡಂತೆ ಶಾಲೆಗಳಲ್ಲಿನ ಕೊರತೆ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ| ಎನ್‌. ಲಿಂಗಣ್ಣ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

Advertisement

ಬುಧವಾರ, ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ತೈಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ, ಮಾತನಾಡಿದ
ಅವರು, ದಾವಣಗೆರೆ ಉತ್ತರ ಮತ್ತು ದಕ್ಷಿಣ ವಲಯ ವ್ಯಾಪ್ತಿಯ ಶಾಲೆಗಳಲ್ಲಿನ ಕೊರತೆಯ ಬಗ್ಗೆ ಸಮಗ್ರ ವರದಿ ಆಧರಿಸಿ ಸಂಬಂಧಿತರೊಂದಿಗೆ ಚರ್ಚಿಸಿ, ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣಕ್ಕೆ ಅಗತ್ಯ 

ಅನುದಾನ ತರಲು ಸಹಾಯವಾಗುತ್ತದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆಗಳಲ್ಲಿ ಪರಿಶೀಲಿಸಿ, ಆದಷ್ಟು ಬೇಗ ವರದಿ ಸಲ್ಲಿಸಬೇಕು. ವರದಿ ಅಗತ್ಯ ಮೂಲಭೂತ ಸೌಲಭ್ಯದ ಬಗ್ಗೆ ಪ್ರತ್ಯೇಕ ಬಜೆಟ್‌ ಮಾಹಿತಿ ಹೊಂದಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಷಾಕುಮಾರಿ, ಪುಷ್ಪಲತಾ ಅವರಿಗೆ ತಿಳಿಸಿದರು.

ದಾವಣಗೆರೆ ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಉಷಾಕುಮಾರಿ, ಉತ್ತರ ವಲಯ ವ್ಯಾಪ್ತಿಯ ಶಾಲೆಗಳ
ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ 14,843 ಜೊತೆ ಸಮವಸ್ತ್ರ ವಿತರಿಸಲಾಗಿದೆ. 2ನೇ ಜೊತೆ ಸಮವಸ್ತ್ರ ಹಾಗೂ 8 ಮತ್ತು 9ನೇ ತರಗತಿ ವಿದ್ಯಾರ್ಥಿನಿಯರಿಗೆ ಚೂಡಿದಾರ್‌ಬಟ್ಟೆ , ಶೂ, 1,100 ಬೈಸಿಕಲ್‌ ಬಂದಿಲ್ಲ. 90ಕೊಠಡಿಗಳು ನೆಲಸಮ ಮಾಡಲೇಬೇಕಾದ ಸ್ಥಿತಿಯಲ್ಲಿವೆ ಎಂದು ಮಾಹಿತಿ ನೀಡಿದರು.

Advertisement

ಕಳೆದ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಶೂ ನೀಡಲಾಗಿತ್ತು. 15 ದಿನಗಳಲ್ಲಿ ಶೂ ಕಿತ್ತು ಹೋಗಿದ್ದವು.
ಶೂ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾತುಗಳಿವೆ. ಈ ಬಾರಿ ಅಧಿಕಾರಿಗಳು ಯಾವುದೇ ಜನಪ್ರತಿನಿಧಿಗಳಒತ್ತಡಕ್ಕೆ ಮಣಿಯದೆ ಗುಣಮಟ್ಟದ  ಶೂ ವಿತರಿಸಲು ಶಾಲಾಭಿವೃದ್ಧಿ ಸಮಿತಿ ಮತ್ತು ಮುಖ್ಯಶಿಕ್ಷಕರಿಗೆ ಸುತ್ತೋಲೆ ಕಳಿಸಬೇಕು ಎಂದು ಆನಗೋಡು ಜಿಲ್ಲಾ ಪಂಚಾಯತಿ ಸದಸ್ಯ ಕೆ.ಎಸ್‌. ಬಸವಂತಪ್ಪ
ಒತ್ತಾಯಿಸಿದರು. 

ಸರ್ಕಾರಿ ಸ್ವಾಮ್ಯದ ಲಿಡಕರ್‌, ಇತರೆ ಸಂಸ್ಥೆಗಳ ಮೂಲಕವೇ ಶೂ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಾರ್ಯ ನಿರ್ವಹಣಾಧಿಕಾರಿ ಎಲ್‌. ಎಸ್‌. ಪ್ರಭುದೇವ್‌ ಸಭೆಗೆ ತಿಳಿಸಿದರು. ಕಳೆದ ಎರಡು ವರ್ಷಗಳ ಹಿಂದೆ ರಾಮಗೊಂಡನಹಳ್ಳಿ ಶಾಲೆಗೆ ಕುಡಿಯುವ ನೀರಿನ ಫೀಲ್ಟರ್‌ಗೆ 86 ಸಾವಿರ ರೂ. ಅನುದಾನ ನೀಡಿದ್ದೇನೆ. ಈ ಕ್ಷಣದವರೆಗೆ ಅನುದಾನ ಏನಾಯಿತು. ಫೀರ್‌ ಕಥೆ ಏನು ಎಂಬುದರ ಬಗ್ಗೆ ಮಾಹಿತಿಯೇ ಇಲ್ಲ ಎಂದು ಜಿಲ್ಲಾ ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶೈಲಾ ಬಸವರಾಜ್‌ ಹೇಳಿದರು. 

ಹದಡಿ ಶಾಲಾ ಶೌಚಾಲಯದ ಅನುದಾನದ ಬಗ್ಗೆಯೂ ಮಾಹಿತಿ ಇಲ್ಲ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಜಿ.ಸಿ.
ನಿಂಗಪ್ಪ ಹೇಳಿದರು. ಶಿಕ್ಷಣ ಇಲಾಖೆಯ ಬಗ್ಗೆ ಸುದೀರ್ಘ‌ ಚರ್ಚೆ ನಡೆಯಿತು. ಅಂತಿಮವಾಗಿ ಶಾಸಕ ಪ್ರೊ| ಎನ್‌. ಲಿಂಗಣ್ಣ ವರದಿ ಸಲ್ಲಿಸಲು ಸೂಚನೆ ನೀಡಿದ ನಂತರ ಚರ್ಚೆ ಮುಕ್ತಾಯವಾಯಿತು.

ಸರ್ಕಾರಕ್ಕೆ ಪ್ರಸ್ತಾವನೆ: ಈಚೆಗೆ ಭಾರೀ ಮಳೆ ಮತ್ತು ಗಾಳಿಯಿಂದ ತ್ಯಾವಣಿಗೆ, ಶ್ಯಾಗಲೆ, ಹೂವಿನಮಡು ಇತರೆ ಭಾಗದಲ್ಲಿ ಭತ್ತದ ಬೆಳೆ ನೆಲಕಚ್ಚಿದ್ದರಿಂದ ರೈತರು ತೀವ್ರ ನಷ್ಟಕ್ಕೊಳಗಾಗಿದ್ದಾರೆ. ಕೃಷಿ ಇಲಾಖೆಯಿಂದ ಪರಿಹಾರ ನೀಡಿರುವ ಬಗ್ಗೆ ಮಾಹಿತಿಯೇ ಇಲ್ಲ ಎಂದು ಜಿಲ್ಲಾ ಪಂಚಾಯತಿ ಸದಸ್ಯೆ ಕೆ.ಎಚ್‌. ಓಬಳಪ್ಪ ಹೇಳಿದರು. 

423 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಹಾಳಾಗಿದೆ. ಪ್ರತಿ ಹೆಕ್ಟೇರ್‌ಗೆ 13,500 ರೂಪಾಯಿ ಪರಿಹಾರ ನೀಡಲಾಗುವುದು. ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೇ ನಡೆಸಿ, ಪರಿಹಾರಕ್ಕೆ ಕೋರಿದ್ದೇವೆ. ಆದರೆ, ಈವರೆಗೆ ಪರಿಹಾರ ಬಂದಿಲ್ಲ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿರಿಯಣ್ಣ ತಿಳಿಸಿದಾಗ, ಶೀಘ್ರ ಪರಿಹಾರ ಬಿಡುಗಡೆಗೆ ಜಂಟಿ ನಿರ್ದೇಶಕರ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಓಬಳಪ್ಪ ಒತ್ತಾಯಿಸಿದರು.

ಕೃಷಿ ಇಲಾಖೆಯಿಂದ ದೊರೆಯುವಂತಹ ಹಲವಾರು ಸೌಲಭ್ಯಗಳ ಬಗ್ಗೆ ಅನೇಕ ರೈತರಿಗೆ ಮಾಹಿತಿಯೇ ಇಲ್ಲ. ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯ ಬಗ್ಗೆ ತಿಳಿದಿಲ್ಲ. ಕೃಷಿ ಅಧಿಕಾರಿಗಳು ಇಲಾಖೆ ಸೌಲಭ್ಯಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು. ಸಕಾಲದಲ್ಲಿ ಪರಿಹಾರ ಒದಗಿಸುವಂತಾಗಬೇಕು. 

ನಾವು ರೈತರಿಗೆ ಅನುಕೂಲ ಮಾಡದೇ ಹೋದಲ್ಲಿ ಇಂತಹ ಸಭೆಗಳಿಗೆ ಅರ್ಥವೇ ಇರುವುದಿಲ್ಲ. ಏನೋ ಕಾಟಾಚಾರಕ್ಕೆ ಎನ್ನುವಂತೆ ಸಭೆ ಮಾಡಿದಂತಾಗುತ್ತದೆ. ರೈತರಿಗೆ ಪ್ರತಿ ಯೋಜನೆ, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ, ನಾನು ಸುಮ್ಮನಿರುವುದಿಲ್ಲ ಎಂದು ಶಾಸಕರು ಅಧಿಕಾರಿಗಳಿಗೆ ಎಚ್ಚರಿಸಿದರು. 

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌, ತಾಲೂಕು ಪಂಚಾಯತಿ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಉಪಾಧ್ಯಕ್ಷ ಬಿ.ಜಿ. ಸಂಗಜ್ಜಗೌಡ್ರು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್‌. ನಾಗರಾಜ್‌, ಸದಸ್ಯ ಪಿ.ಕೆ. ಅಶೋಕ್‌, ತಹಶೀಲ್ದಾರ್‌ ಜಿ. ಸಂತೋಷ್‌ಕುಮಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next