Advertisement
ತಹಶೀಲ್ದಾರ್ ಎನ್.ಎ. ಕುಂಞಿ ಅಹ್ಮದ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಾಲೂಕಿನ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯನಿರ್ವಹಣಾಧಿಕಾರಿಗಳು ಭಾಗವಹಿಸಿದ್ದರು. ತಾಲೂಕಿನಲ್ಲಿ 14,114 ಮಂದಿಯ 118.12 ಕೋಟಿ ರೂ. ಸಾಲಮನ್ನಾದ ಬಗ್ಗೆ ಸರಕಾರಕ್ಕೆ ಬೇಡಿಕೆ ಪಟ್ಟಿ ಸಲ್ಲಿಸಲಾಗಿತ್ತು. ಇದರಲ್ಲಿ 10,436 ಮಂದಿಯ 76.05 ಕೋಟಿ ರೂ. ಸಾಲಮನ್ನಾಕ್ಕೆ ಮಂಜೂರಾತಿ ದೊರೆಯಿತು. ಮಂಜೂರಾತಿ ಅನಂತರ 9,564 ಫಲಾನುಭವಿಗಳ 74.17 ಕೋಟಿ ರೂ. ಬಿಡುಗಡೆಯಾಗಿದ್ದು, 3,851 ಜನರಿಗೆ 29.84 ಕೋಟಿ ರೂ. ಜಮೆ ಆಗಿದೆ. ಫಲಾನುಭವಿಗಳಲ್ಲಿನ ಉಳಿತಾಯ ಖಾತೆಯಲ್ಲಿ ಸಮಸ್ಯೆಯಿಂದ 5,713 ಮಂದಿಗೆ ಹಣ ಜಮೆ ಆಗಿಲ್ಲ. ಹೊಸ ಸಾಫ್ಟ್ವೇರ್‌ನಲ್ಲಿ ಕೆಸಿಸಿ ಉಳಿತಾಯ ಖಾತೆಯಲ್ಲಿ ದಾಖಲೆ ಸರಿಪಡಿಸುವಿಕೆ ಆರಂಭಗೊಂಡರೂ ಕಡಿಮೆ ಕಾಲಾವಕಾಶ ದಿಂದ ಸಾವಿರದೊಳಗಿನ ಫಲಾನುಭವಿಗಳ ದಾಖಲೆ ಸರಿಪಡಿಸುವಿಕೆಯಷ್ಟೇ ಆಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ಕೇಳಿ ಬಂತು.
ಮೂರು ದಿನಗಳ ಕಾಲ ವೆಬ್‌ಸೈಟ್ ತೆರೆಯಲಾಗಿದ್ದರೂ ಶೇ. 25ರಿಂದ 30ರಷ್ಟು ಮಂದಿಯ ವಿವರಗಳನ್ನು ಮಾತ್ರ ಅಪ್‌ಲೋಡ್ ಮಾಡಲು ಸಾಧ್ಯವಾಗಿದೆ. ಸಾಲಮನ್ನಾ ರೈತರ ಪಟ್ಟಿ ತಯಾರಿಸಲಾಗಿದ್ದು, 18 ಪಟ್ಟಿಗಳಲ್ಲಿ ಈಗ 14 ಪಟ್ಟಿಯವರೆಗಿನವರ ಮಾಹಿತಿ ಮಾತ್ರ ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗಿತ್ತು. ಉಳಿದ ಪಟ್ಟಿಯಲ್ಲಿ ತಾಲೂಕಿನ ಹೆಚ್ಚು ಮಂದಿ ರೈತರ ಹೆಸರಿದ್ದು ಶೇ. 70 ಮಂದಿಯ ಮಾಹಿತಿ ಅಪ್‌ಲೋಡ್ ಮಾಡಲು ಬಾಕಿ ಇದೆ ಎಂದು ವಿವಿಧ ಸಹಕಾರಿ ಸಂಘಗಳ ಇಒಗಳು ಸಭೆಗೆ ಮಾಹಿತಿ ನೀಡಿದರು. ಹೊಸ ಸಾಫ್ಟ್ವೇರ್‌ನಲ್ಲಿ ಉಳಿತಾಯ ಖಾತೆಯ ದೋಷವನ್ನು ಸರಿಪಡಿಸಲು ಮಾತ್ರ ಅವಕಾಶವಿತ್ತು. ಆಧಾರ್, ಪಡಿತರ ಚೀಟಿ ಸಮಸ್ಯೆಯಿದ್ದವರ ದಾಖಲೆ ಸರಿಪಡಿಸಲು ಅವಕಾಶ ಸಿಕ್ಕಿಲ್ಲ. ಹೀಗಾಗಿ ಉಳಿದ ಅರ್ಹ ಫಲಾನುಭವಿಗಳು ಸಮಸ್ಯೆಗೆ ಒಳಗಾಗಿದ್ದಾರೆ. ಈ ಎಲ್ಲ ವಿವರಗಳನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿ ಸಂಬಂಧಿಸಿದ ಇಲಾಖೆ ಮೂಲಕ ಸಮಸ್ಯೆ ಸರಿಪಡಿಸಬೇಕಿದೆ ಎನ್ನುವ ಅಭಿಪ್ರಾಯ ಸಭೆಯಲ್ಲಿ ಕೇಳಿ ಬಂತು.
Related Articles
ತಾ.ಪಂ. ಸದಸ್ಯ ರಾಧಾಕೃಷ್ಣ ಬೊಳ್ಳೂರು, ಅರಂತೋಡು ಸೊಸೈಟಿ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಸಮಸ್ಯೆಯ ಬಗ್ಗೆ ವಿವರಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್, ಸಾಲಮನ್ನಾ ಸೌಲಭ್ಯ ದೊರೆಯಲು ಇರುವ ಸಮಸ್ಯೆಗಳ ಕುರಿತು ಪಟ್ಟಿ ಮಾಡಿ ಅರ್ಹರಾದ ಎಲ್ಲ ಫಲಾನುಭವಿಗಳಿಗೂ ಸಾಲಮನ್ನಾ ಸೌಲಭ್ಯ ದೊರಕಿಸಿ ಕೊಡಲು ಕ್ರಮ ಕೈಗೊಳ್ಳುವಂತೆ ರಾಜ್ಯ ಸಹಕಾರಿ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.
Advertisement
ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ಎಪಿಎಂಸಿ ಮಾಜಿ ಉಪಾಧ್ಯಕ್ಷೆ ಸುಕನ್ಯಾ, ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಣಾಧಿಕಾರಿಗಳಾದ ಚಿದಾನಂದ ರೈ ಎನ್., ನಿತ್ಯಾನಂದ ಎಂ., ವೀರೇಂದ್ರ ಕುಮಾರ್, ಕೆ. ಶೇಷಪ್ಪ ಗೌಡ, ರತನ್ ಕೆ.ಆರ್., ಪ್ರಶಾಂತ್ ಪಿ.ಎನ್., ಬಿ. ಕರುಣಾಕರ ಆಳ್ವ, ಮೋಹನ ಕುಮಾರ್, ನವೀನ್ ಕುಮಾರ್ ಕೆ.ಆರ್., ರಮೇಶ್, ಸುಬ್ರಹ್ಮಣ್ಯ ಜೋಷಿ, ನಿತ್ಯಾನಂದ, ಪುರುಷೋತ್ತಮ ಎಸ್., ಸುದರ್ಶನ್, ಲೋಹಿತ್ ಕುಮಾರ್ ಉಪಸ್ಥಿತರಿದ್ದರು.