Advertisement

ದುಗ್ಗಮ್ಮನಿಗೆ ಭಕ್ತರಿಂದ ಹರಕೆ ಸಲ್ಲಿಕೆ

06:01 PM Feb 28, 2018 | |

ದಾವಣಗೆರೆ: ಎರಡು ವರ್ಷಕ್ಕೊಮ್ಮೆ ನಡೆಯುವ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ(ದುಗ್ಗಮ್ಮ) ಜಾತ್ರೆಯ ಸಂಭ್ರಮ ಇಡೀ ದಾವಣಗೆರೆಯಲ್ಲಿ ಮನೆ ಮಾಡಿದೆ. ದುಗ್ಗಮ್ಮನ ಜಾತ್ರೆ ಮುಗಿದ ಕೆಲ ದಿನಗಳ ನಂತರದಲ್ಲಿ ಅದೇ ಗುಂಗಿನಲ್ಲೇ ಇರುವ ಜನರು ಜಾತ್ರೆಗೆ ಇನ್ನೂ ಒಂದು ವರ್ಷ ಇದೆ ಎನ್ನುತ್ತಿದ್ದಂತೆ ಸಜ್ಜಾಗುತ್ತಾರೆ ಎಂಬುದಕ್ಕೆ ದಾವಣಗೆರೆ ಪೇಟೆ, ಗಲ್ಲಿ-ಗಲ್ಲಿಯಲ್ಲಿ ಕಂಡು ಬಂದ ಜನ ಸಂದಣಿ ಸಾಕ್ಷಿಯಾಗಿತ್ತು. ಸೋಮವಾರ ರಾತ್ರಿ ಶ್ರೀ ದುರ್ಗಾಂಬಿಕಾ ದೇವಿಗೆ ಕಂಕಣಧಾರಣೆ ನಂತರ ಸಾರು ಹಾಕಿದ ಕ್ಷಣದಿಂದಲೇ
ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆತು, ಧಾರ್ಮಿಕ ಕಾರ್ಯಕ್ರಮ ಪ್ರಾರಂಭವಾಗಿವೆ. ಮಂಗಳವಾರ ಭಕ್ತರು ದೀಡು ನಮಸ್ಕಾರ, ಬೇವಿನ ಉಡುಗೆ, ಉರುಳು ಸೇವೆ ಸಲ್ಲಿಸಿದರು. 

Advertisement

ಸಾವಿರಾರು ಭಕ್ತರ ಮಧ್ಯೆಯಿಂದ ಹೊರ ಬರುತ್ತಿದ್ದಂತೆ ದುಗ್ಗಮ್ಮ ನಿನ್ನಾಲ್ಕು ಉಧೋ… ಉಧೋ… ಎಂಬ ಘೋಷಣೆ ಇಡೀ ದೇವಸ್ಥಾನದ ಸುತ್ತಲೂ ಭಕ್ತಿಯಿಂದ ಹರಕೆ ತೀರಿಸುವ ದೃಶ್ಯ ಕಾಣುತ್ತಿತ್ತು. ಬೆಳಗಿನ ಜಾವದಿಂದಲೇ ದೇವಿಯ ದರ್ಶನ, ಹರಕೆ, ಕಾಣಿಕೆ ಸಲ್ಲಿಸುವುದಕ್ಕಾಗಿ ಉದ್ದನೆಯ ಸರತಿ ಸಾಲಲ್ಲಿ ನಿಂತಿದ್ದರು. ದೇವಿಯ ದರ್ಶನಕ್ಕಾಗಿಯೇ ವಿಶೇಷ ವ್ಯವಸ್ಥೆ ಮಾಡಲಾಗಿದೆ. ದೇವಿಯ ದರ್ಶನಕ್ಕೆ ಗಂಟೆಗಟ್ಟಲೆ ಸರತಿ ಸಾಲಲ್ಲಿ ನಿಲ್ಲಬೇಕಾಗಿ ಬಂದರೂ ಭಕ್ತಾದಿಗಳು ಭಯ, ಭಕ್ತಿಯಿಂದ ಕಾಯುತ್ತಿದ್ದರು.
ಮೊದಲ ದಿನ ಹೋಳಿಗೆ ಒಳಗೊಂಡಂತೆ ಸಿಹಿ ಭಕ್ಷéಗಳು ಪ್ರಾಶ್ಯಸ್ತ. ಮನೆಗಳಲ್ಲಿ ವಿಶೇಷ ಪೂಜೆ ಮಾಡಿ, ನೈವೇದ್ಯ ಸಲ್ಲಿಸಿ, ನಂತರ ದೇವಸ್ಥಾನಕ್ಕೆ ತೆರಳಿ, ನೆಚ್ಚಿನ ದೇವತೆಗೆ ಉಡಕ್ಕಿ, ಕಾಣಿಕೆ ಸಲ್ಲಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ದಾವಣಗೆರೆ ಭೇಟಿ ಹಿನ್ನೆಲೆಯಲ್ಲಿ ಕೆಲವಾರು ಕಡೆ ಮುಕ್ತ ಸಂಚಾರಕ್ಕೆ ಅವಕಾಶ ಇಲ್ಲದ  ಕಾರಣ ಭಕ್ತಾದಿಗಳು ಸ್ವಲ್ಪ ತೊಂದರೆಯನ್ನೂ
ಅನುಭವಿಸುವಂತಾಯಿತು. ದುಗ್ಗಮ್ಮನ ದೇವಸ್ಥಾನದ ಸುತ್ತಮುತ್ತವೂ ಸಂಚಾರದ ನಿರ್ಬಂಧವೂ ಕಿರಿಕಿರಿಗೆ ಕಾರಣವಾಗಿತ್ತು.

ಹೊತ್ತೇರುತ್ತಿದ್ದಂತೆ ಹೆಚ್ಚಾದ ಬಿರು ಬಿಸಿಲು, ಬೇಗೆ, ಜನಸಂದಣಿ…ಹೀಗೆ ಏನೇ ಇದ್ದರೂ ಸಾವಿರಾರು ಸಂಖ್ಯೆಯಲ್ಲಿನ ಭಕ್ತಾದಿಗಳು ಆರಾಧ್ಯ ದೇವಿಯ ದರ್ಶನ ಮಾಡುವ ಮೂಲಕ ಧನ್ಯಭಾವದಲ್ಲಿ ಮುಳುಗಿದರು. ಏನೇ ಆದರೂ ನಮ್ಮವ್ವ ದುರ್ಗವ್ವ ಕೈ ಬಿಡೊಲ್ಲ…ಎನ್ನುತ್ತಲೇ ತಮಗೆ ಬೇಗ ದೇವಿಯ ದರ್ಶನವಾಗಿದ್ದು, ದೇವಸ್ಥಾನಕ್ಕೆ ಬರುವಾಗ ಆದಂತಹ ಕೆಲವಾರು ಸಮಸ್ಯೆ ಹಂಚಿಕೊಳ್ಳುತ್ತಲೇ ಮನೆಗೆ ತೆರಳುತ್ತಿದ್ದುದು ಸಾಮಾನ್ಯವಾಗಿತ್ತು. ದುಗ್ಗಮ್ಮನ ದೇವಸ್ಥಾನದ ಸುತ್ತಲೂ ಭಕ್ತಿಯ ಲೋಕವೇ ನಿರ್ಮಾಣವಾಗಿತ್ತು. ತಮ್ಮ ತಮ್ಮ ರೂಢಿ ಸಂಪ್ರದಾಯದಂತೆ ಹಬ್ಬದ ಆಚರಣೆ, ದೇವಿಯ ದರ್ಶನ, ಹರಕೆ ತೀರಿಸುವ ಪದ್ಧತಿ… ಸೋಜಿಗ ಉಂಟು ಮಾಡುವಂತಿತ್ತು. ರಾಜ್ಯದ ನಾನಾ ಮೂಲೆಗಳಿಂದ ಬಂದಿದ್ದ ಅಸಂಖ್ಯಾತ ಭಕ್ತರು ಪುಳಕಿತಗೊಂಡರು.
ಮಂಗಳವಾರ ಬೆಳಗ್ಗೆ ದಾಸೋಹದ ಮಹೋಪಕರಣ ಸಮಾರಂಭ ನಡೆಯಿತು.

ಕುರಿಗಳ ಖರೀದಿ ಜೋರು..
ದುಗ್ಗಮ್ಮನ ಜಾತ್ರೆ ಅತೀ ಮುಖ್ಯ ಘಟ್ಟ ಮಾಂಸದೂಟಕ್ಕೆ ಮಂಗಳವಾರವೂ ಕುರಿ ಖರೀದಿ ಭರ್ಜರಿಯಾಗಿಯೇ ಇತ್ತು. ಮಂಗಳವಾರ
ಹರಿಹರದಲ್ಲಿ ನಡೆಯುವ ಕುರಿ ಸಂತೆ, ಹರಪನಹಳ್ಳಿ, ಸುತ್ತಮುತ್ತಲ ಗ್ರಾಮಗಳಿಗೆ ತೆರಳಿ ಕುರಿ ಖರೀದಿಸಿದರು. ಬುಧವಾರದಿಂದ ಬಾಡೂಟಕ್ಕೆ ಅನುಕೂಲವಾಗುವಂತೆ ಮನೆ, ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ಶಾಮಿಯಾನ ಇತರೆ ವ್ಯವಸ್ಥೆ ಕಂಡು ಬಂದಿತು. ಬಾಡೂಟಕ್ಕಾಗಿ ಬೇಕಾದ ಮಸಾಲೆ, ತರಕಾರಿ, ಹೂವು ಹಣ್ಣು ಖರೀದಿಗೆ ಕೆ.ಆರ್‌. ಮಾರ್ಕೆಟ್‌, ಗಡಿಯಾರ ಕಂಬ, ವಿಜಯಲಕ್ಷ್ಮಿರಸ್ತೆ,
ಜಿಲ್ಲಾಧಿಕಾರಿ ಹಳೇ ಕಚೇರಿ ಸುತ್ತಮುತ್ತಲು ಜನಸಂದಣಿ ಕಂಡು ಬಂದಿತು 

ವಿನೋಬ ನಗರದಲ್ಲೂ ಸಂಭ್ರಮ…
ದುಗ್ಗಮ್ಮನ ಜಾತ್ರೆಯ ಜೊತೆಗೆ ನಡೆಯುವ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ವಿನೋಬ ನಗರದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿತು. 10ನೇ ಕ್ರಾಸ್‌ನಲ್ಲಿರುವ ದೇವಸ್ಥಾನಕ್ಕೆ ಬೆಳಗ್ಗೆಯಿಂದಲೇ ಸಾವಿರಾರು ಜನರು ಆಗಮಿಸಿ, ದೇವಿಗೆ ವಿಶೇಷ ಪೂಜೆ, ಹರಕೆ ಸಲ್ಲಿಸಿದರು. ಒಂದು ಕಡೆ ನಗರ ದೇವತೆ, ಇನ್ನೊಂದು ಕಡೆ ಮನೆಯ ಹತ್ತಿರ ದೇವಿಯ ಜಾತ್ರೆ. ಹೀಗಾಗಿ ವಿನೋಬ ನಗರದಲ್ಲಿ ಸಂಭ್ರಮವೋ ಸಂಭ್ರಮದ ವಾತಾವರಣ ಇದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next