Advertisement

ಜಿಲ್ಲಾ  ಜೀವ ವೈವಿಧ್ಯಗಳ ನಿರ್ವಹಣೆ ಸಮಿತಿ ವರದಿ ಸರಕಾರಕ್ಕೆ ಸಲ್ಲಿಕೆ

09:06 PM Sep 22, 2021 | Team Udayavani |

ಉಡುಪಿ:  ಗ್ರಾಮೀಣ ಭಾಗದ ಜೀವ ವೈವಿಧ್ಯಗಳ ರಕ್ಷಣೆ ಹಾಗೂ ನಿರ್ವಹಣೆಗೆ ದಿಟ್ಟ ಹೆಜ್ಜೆ ಇಟ್ಟಿದ್ದು, ಜಿಲ್ಲೆಯ 150 ಗ್ರಾ.ಪಂ.ಗಳಲ್ಲಿ ಜೀವವೈವಿಧ್ಯ ನಿರ್ವಹಣೆ ಸಮಿತಿಗಳು ಅಸ್ತಿತ್ವಕ್ಕೆ ಬಂದಿದ್ದು, ಈಗಾಗಲೇ ಸರ್ವೇ ಮುಗಿಸಿ ವರದಿಯನ್ನು ಸರಕಾರಕ್ಕೆ ಸಲ್ಲಿಸಿವೆ.

Advertisement

ಗ್ರಾಮೀಣ ಭಾಗದಲ್ಲಿನ  ಜೀವ ವೈವಿಧ್ಯವನ್ನು ಕಾಪಾಡಿ ಅದನ್ನು ಭವಿಷ್ಯದ ದೃಷ್ಟಿಯಿಂದ ಸಂರಕ್ಷಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ 158 ಗ್ರಾ.ಪಂ., 7 ತಾ.ಪಂ.ಗಳು, 1 ಜಿ.ಪಂ.ನಲ್ಲಿ ಜೀವವೈವಿಧ್ಯ ನಿರ್ವಹಣೆ ಸಮಿತಿ ರಚನೆಯಾಗಿದ್ದು, ಸ್ಥಳೀಯ ಸಂಪನ್ಮೂಲ ಸಂರಕ್ಷಣೆ, ಇತರ ಜವಾಬ್ದಾರಿ ನಿರ್ವಹಣೆ ಅಧಿಕಾರ ಸಮಿತಿ ವ್ಯಾಪ್ತಿಯಲ್ಲಿರುತ್ತದೆ.

ಸಮಿತಿ ಪ್ರಯೋಜನ:

ಜೀವ ವೈವಿಧ್ಯ ನಿರ್ವಹಣೆ ಸಮಿತಿ ರಚನೆಯಿಂದ ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿ ಸಿಗುವ ಪ್ರಕೃತಿ ದತ್ತ ಸಂಪತ್ತುಗಳ ಅರಿವು ಸಿಗಲಿದೆ. ಕಲೆ, ಕರಕುಶಲ ವಸ್ತುಗಳ ಬಗ್ಗೆ ಬೇರೆ ಜಿಲ್ಲೆ, ರಾಜ್ಯದವರಿಗೆ ಮಾಹಿತಿ ಲಭ್ಯವಾಗಲಿದೆ. ಜತೆಗೆ ಜನರಿಗೆ ಉತ್ತಮ ಮಾರ್ಗದರ್ಶನ, ಅಧಿಕಾರ ಲಭ್ಯವಾಗಲಿದೆ. ಕೃಷಿ, ತೋಟಗಾರಿಕೆ, ಕೋಳಿ ಸಾಕಣೆ, ಹೈನುಗಾರಿಕೆ, ಪಶುಸಂಗೋಪನೆ ಸಾಂಪ್ರದಾಯಿಕ ಚಟುವಟಿಕೆಗೆ ಸಮಿತಿ ರಕ್ಷಣೆ ನೀಡಲಿದೆ.

ಸಮಿತಿ ರಚನೆಗೆ ವೇಗ!:

Advertisement

ಜೈವಿಕ ವೈವಿಧ್ಯ ಅಧಿನಿಯಮ 2002ರ ಸೆಕ್ಷನ್‌ 41 (1), ಜೈವಿಕ ವೈವಿಧ್ಯ ನಿಯಮಗಳು- 2005ರ ನಿಯಮ 22 ಮತ್ತು ಕರ್ನಾಟಕ ಜೈವಿಕ ವೈವಿಧ್ಯ ನಿಯಮಗಳು-2005ರ ನಿಯಮ 21ರ ಪ್ರಕಾರ ಪಂಚಾಯತ್‌ಗಳಲ್ಲಿ ಜೀವವೈವಿಧ್ಯ ನಿರ್ವಹಣೆ ಸಮಿತಿಗಳ ರಚನೆ ಕಡ್ಡಾಯವಾಗಿದೆ. ಆದರೆ ಈ ಬಗ್ಗೆ ಅಷ್ಟೊಂದು ಗಮನ ಹರಿಸಲಾಗುತ್ತಿರಲಿಲ್ಲ.

2019ರಲ್ಲಿ ರಾಷ್ಟ್ರೀಯ ಹಸುರು ನ್ಯಾಯಾಧೀಕರಣ ಪಂಚಾಯತ್‌ಗಳಲ್ಲಿ ಈ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕೆಂದು ಆದೇಶ ನೀಡಿರುವುದು, ಸಮಿತಿ ಕೆಲಸಗಳಿಗೆ ವೇಗ ಸಿಕ್ಕಿತ್ತು. 2021ರಲ್ಲಿ ಸರ್ವೇ ಪೂರ್ಣಗೊಂಡು ಜಿಲ್ಲಾ ಸಮಿತಿ ವರದಿಯನ್ನು ರಾಜ್ಯಕ್ಕೆ ಸಲ್ಲಿಸಿದೆ.

ಸಮಿತಿ ಕೆಲಸವೇನು?  :

ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸಮಿತಿಗಳು ತಮ್ಮ ವ್ಯಾಪ್ತಿಗೆ ಬರುವ ಅರಣ್ಯ ಭೂಮಿ, ಕೃಷಿ ಜಮೀನು, ಸಂರಕ್ಷಿತ ಅರಣ್ಯ ಪ್ರದೇಶ, ಅರಣ್ಯ ಸಂಪತ್ತು, ಗಿಡ-ಮರ, ಹುಳು-ಜಂತು, ಪ್ರಾಣಿ-ಪಕ್ಷಿ ಇವುಗಳ ವಿವಿಧ ಪ್ರಭೇದ ಮತ್ತು ತಳಿಗಳ ಮಾಹಿತಿ, ಔಷಧೀಯ ಗಿಡಮೂಲಿಕೆಗಳ ವಿವರ, ಪಾರಂಪರಿಕ ತಾಣ, ನಾಟಿ ವೈದ್ಯರು, ಗುಡಿ-ದೈವಸ್ಥಾನ, ಇತಿಹಾಸದ ಜತೆಗೆ ಪ್ರಸಕ್ತ ಅಂಕಿ-ಅಂಶಗಳನ್ನು ದಾಖಲೆ ಹಾಗೂ ಚಿತ್ರಗಳನ್ನು ಗ್ರಾಮ, ತಾಲೂಕು ಸಮಿತಿಗೆ ಸಂಗ್ರಹಿಸಿದ ಮಾಹಿತಿಯನ್ನು ಜಿಲ್ಲಾ ಸಮಿತಿಯ ಮೂಲಕ ರಾಜ್ಯಕ್ಕೆ ಸಲ್ಲಿಕೆ ಮಾಡಲಿದೆ.

ಸರ್ವೇಗೆ ಅನುದಾನ :

ಸರ್ವೇ ನಡೆಸಲು ಪ್ರತೀ ಗ್ರಾ.ಪಂ.ಗೆ 30,000 ರೂ., ತಾ.ಪಂ., 80,000 ರೂ., ಜಿ.ಪಂ. 2 ಲ.ರೂ. ಸರಕಾರ ನೀಡಿದೆ. ಜಿಲ್ಲೆಯಲ್ಲಿ ಬೆಂಗಳೂರಿನ ಸಂಸ್ಥೆಯೊಂದು ಸ್ಥಳೀಯರನ್ನೊಳಗೊಂಡ ಸಮಿತಿ ರಚಿಸಿ ವರದಿ ತಯಾರಿಸಿದೆ.

ಗ್ರಾ.ಪಂ., ತಾ.ಪಂ. ಹಾಗೂ ಜಿ.ಪಂ. ಜೀವ ವೈವಿಧ್ಯ ಪಟ್ಟಿಯನ್ನು ಈಗಾಗಲೇ ಸರಕಾರಕ್ಕೆ ಸಲ್ಲಿಸಲಾಗಿದೆ. ವರದಿಗೆ ಸರಕಾರದಿಂದ ಅನುಮೋದನೆ ಸಿಗಬೇಕಿದೆ.ಕಿರಣ್‌ ಫ‌ಡ್ನೇಕರ್‌, ಜಿ.ಪಂ. ಉಪಕಾರ್ಯದರ್ಶಿ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next