Advertisement

ಟ್ಯಾಕ್ಸಿಗಳ ಬೆಲೆ ನಿಗದಿ ವರದಿ ಸಲ್ಲಿಕೆ

11:48 AM Mar 19, 2017 | Team Udayavani |

ಬೆಂಗಳೂರು: ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ಕನಿಷ್ಠ ದರ ನಿಗದಿಪಡಿಸುವ ಸಂಬಂಧ ರಚಿಸಿದ್ದ ತಜ್ಞರನ್ನು ಒಳಗೊಂಡ ದರ ನಿಗದಿ ಸಮಿತಿಯು ಶನಿವಾರ ಸಾರಿಗೆ ಆಯುಕ್ತರಿಗೆ ವರದಿ ಸಲ್ಲಿಸಿದೆ. 

Advertisement

ವಾಹನದ ವೆಚ್ಚ, ಡೀಸೆಲ್‌, ಗ್ರಾಹಕ ಸೂಚ್ಯಂಕ, ಚಾಲಕರ ಭತ್ಯೆ, ವಿಮೆ ಸೇರಿದಂತೆ ಎಲ್ಲವನ್ನೂ ಲೆಕ್ಕಹಾಕಿ ಕನಿಷ್ಠ ದರ ನಿಗದಿಪಡಿಸಲು ಶಿಫಾರಸು ಮಾಡಿರುವ ಸಮಿತಿಯು 10ರಿಂದ 12 ರೂ. ಕನಿಷ್ಠ ದರ ನಿಗದಿಪಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ ಎಂದು ತಿಳಿದುಬಂದಿದೆ.

ಹೆಚ್ಚುವರಿ ಸಾರಿಗೆ ಆಯುಕ್ತ ಕುಮಾರ್‌ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿತ್ತು. ಸಮಿತಿ ನೀಡಿದ ವರದಿಯನ್ನು ಆಧರಿಸಿ ಸಾರಿಗೆ ಆಯುಕ್ತರು ಕನಿಷ್ಠ ದರವನ್ನು ಅಂತಿಮಗೊಳಿಸಲಿದ್ದಾರೆ. ನಂತರ ಸರ್ಕಾರಕ್ಕೆ ಅದನ್ನು ಕಳುಹಿಸಲಾಗುವುದು. ಅನುಮೋದನೆಗೊಂಡ ಮೇಲೆ ಕನಿಷ್ಠ ದರ ನಿಗದಿಯಾಗಲಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ. 

ಇನ್ನೂ ನಿರ್ಧಾರ ಆಗಿಲ್ಲ; ಆಯುಕ್ತ: ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಸಾರಿಗೆ ಆಯುಕ್ತ ಎಂ.ಕೆ. ಅಯ್ಯಪ್ಪ, ಕನಿಷ್ಠ ದರ ಎಷ್ಟು ಎಂಬುದು ಇನ್ನೂ ನಿರ್ಧಾರ ಆಗಿಲ್ಲ. ದರ ನಿಗದಿ ಸಮಿತಿ ಶನಿವಾರ ಮಧ್ಯಾಹ್ನವಷ್ಟೇ ವರದಿ ಸಲ್ಲಿಸಿದೆ. ಅದನ್ನು ಪರಿಶೀಲಿಸಿ ಸೋಮವಾರ ಅಥವಾ ಮಂಗಳವಾರ ಸರ್ಕಾರಕ್ಕೆ ಕಳುಹಿಸಲಾಗುವುದು. ಅಲ್ಲಿ ಅನುಮೋದನೆಗೊಂಡ ನಂತರ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳಿಗೂ ಕನಿಷ್ಠ ದರ ನಿಗದಿಯಾಗಲಿದೆ ಎಂದು ಸ್ಪಷ್ಟಪಡಿಸಿದರು.   

ಇನ್ನೂ ಕೈಸೇರಿಲ್ಲ; ಸಾರಿಗೆ ಇಲಾಖೆ: “ಓಲಾ-ಉಬರ್‌ ಮತ್ತಿತರ ಆ್ಯಪ್‌ ಆಧಾರಿತ ಟ್ಯಾಕ್ಸಿಗಳಿಗೆ ಕನಿಷ್ಠ ದರ ನಿಗದಿಪಡಿಸಲು ಸೂಚಿಸಲಾಗಿತ್ತು. ಅದರಂತೆ ಸಮಿತಿ ರಚಿಸಲಾಗಿದೆ. ವರದಿ ಇನ್ನೂ ಕೈಸೇರಿಲ್ಲ’ ಎಂದು ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು ತಿಳಿಸಿದ್ದಾರೆ.  ಪ್ರಸ್ತುತ ಸಾಮಾನ್ಯ ಟ್ಯಾಕ್ಸಿಗಳಿಗೆ ಸರ್ಕಾರಿ ದರ ಕಿ.ಮೀ.ಗೆ ಕನಿಷ್ಠ (ಹವಾನಿಯಂತ್ರಿತ ರಹಿತ) 14.5 ರೂ. ಹಾಗೂ ಗರಿಷ್ಠ ದರ 19.5 ರೂ. ನಿಗದಿಪಡಿಸಲಾಗಿದೆ.

Advertisement

ಆದರೆ, ಆ್ಯಪ್‌ ಆಧಾರಿತ ಟ್ಯಾಕ್ಸಿಗಳಲ್ಲಿ ನಿರ್ದಿಷ್ಟ ಕನಿಷ್ಠ ದರ ಇಲ್ಲ. ಪೈಪೋಟಿಗೆ ಬಿದ್ದಿರುವ ಕಂಪೆನಿಗಳು 3-7 ರೂ.ಯಲ್ಲಿ ಸೇವೆ ನೀಡುತ್ತಿವೆ. ಇದರಲ್ಲಿ ಟ್ಯಾಕ್ಸಿ ಚಾಲಕರು ಕಂಪೆನಿಗಳಿಗೆ ಶೇ. 30ರಷ್ಟು ಕಮಿಷನ್‌ ಕೊಡಬೇಕು. ಉಳಿಯುವುದು ಪುಡಿಗಾಸು. ಈ ಹಿನ್ನೆಲೆಯಲ್ಲಿ ಕನಿಷ್ಠ ದರ ನಿಗದಿಪಡಿಸುವ ಸಾಧ್ಯಾಸಾಧ್ಯತೆಗಳ ಕುರಿತು ಇಲಾಖೆ ಮಟ್ಟದಲ್ಲಿ ಚರ್ಚೆ ನಡೆದಿದೆ.

ಓಲಾ-ಉಬರ್‌ ಕಂಪೆನಿಗಳು ನೀಡುತ್ತಿರುವ ಕಿರುಕುಳದಿಂದ ಬೇಸತ್ತು ಈ ಪ್ರತ್ಯೇಕ ಆ್ಯಪ್‌ ಸೇವಾ ಕಂಪೆನಿ ಆರಂಭಿಸಲು ನಿರ್ಧರಿಸಲಾಗಿದೆ. ಪ್ರಸ್ತುತ ಇರುವ ಆ್ಯಪ್‌ ಆಧಾರಿತ ಸೇವಾ ಕಂಪೆನಿಗಳೊಂದಿಗೆ ನೋಂದಣಿ ಮಾಡಿಕೊಂಡಿರುವ ಟ್ಯಾಕ್ಸಿಗಳು ಶೇ. 30ರಷ್ಟು ಕಮಿಷನ್‌ ನೀಡುತ್ತಿವೆ. ಆದರೆ, ಹೊಸ ಆ್ಯಪ್‌ನೊಂದಿಗೆ ನೋಂದಣಿ ಮಾಡಿಕೊಳ್ಳುವ ಟ್ಯಾಕ್ಸಿಗಳಿಗೆ ಕೇವಲ ಶೇ. 5ರಷ್ಟು ಕಮಿಷನ್‌ ನಿಗದಿಪಡಿಸಲಾಗುವುದು. ಆ ಹಣದಲ್ಲೇ ತಾಂತ್ರಿಕತೆ, ಕಚೇರಿ ಆಡಳಿತ ಮತ್ತಿತರ ನಿರ್ವಹಣೆ ಮಾಡಲಾಗುವುದು.  
-ತನ್ವೀರ್‌ ಪಾಷ, ಚಾಲಕರ ಸಂಘದ ಮುಖಂಡ.

ಎಚ್‌ಡಿಕೆ ಆ್ಯಪ್‌ 
ಈ ಮಧ್ಯೆ ಓಲಾ-ಉಬರ್‌ಗೆ ಪರ್ಯಾಯವಾಗಿ ಚಾಲಕರ ಅನುಕೂಲಕ್ಕಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪ್ರತ್ಯೇಕ ಆ್ಯಪ್‌ ಪ್ರಾರಂಭಿಸಲು ತೀರ್ಮಾನಿಸಿದ್ದು ಶನಿವಾರ ಚಾಲಕರ ಸಂಘದ ಜತೆ ಪೂರ್ವಭಾವಿ ಸಭೆ ನಡೆಸಿದರು. ಯುಗಾದಿ ವೇಳೆಗೆ ನೂತನ ಆ್ಯಪ್‌ ಕಾರ್ಯಾರಂಭಗೊಳ್ಳುವ ಸಾಧ್ಯತೆಯಿದೆ. ನೂತನ ಆ್ಯಪ್‌ಗೆ “ಎಚ್‌ಡಿಕೆ ಕ್ಯಾಬ್‌’ ಎಂದು ನಾಮಕರಣ ಮಾಡಲಾಗುವುದು ಎಂದು ಹೇಳಲಾಗಿದೆ.  

ಓಲಾ ಹಾಗೂ ಉಬರ್‌ ಸಂಸ್ಥೆಯ ವರ್ತನೆಯಿಂದ ಚಾಲಕರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದ್ದು ಅವರ ಕುಟುಂಬಗಳ ರಕ್ಷಣೆಗಾಗಿ ನೂತನ ಆ್ಯಪ್‌ಅನ್ನು ನನ್ನ ಸ್ವಂತ ವೆಚ್ಚದಲ್ಲಿ ಆರಂಭಿಸಿಕೊಡಲು ನಿರ್ಧರಿಸಿದ್ದೇನೆ. ನಂತರ ಚಾಲಕರ ಸಂಘವೇ ಅದನ್ನು ಮುಂದುವರಿಸಿಕೊಂಡು ಹೋಗಲಿದೆ.  
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್‌ ರಾಜ್ಯಾಧ್ಯಕ್ಷ   

Advertisement

Udayavani is now on Telegram. Click here to join our channel and stay updated with the latest news.

Next