Advertisement
ಸರ್ಕಾರಿ ನೌಕರರು ಅವರ ಇಲಾಖೆ ಮುಖ್ಯಸ್ಥರಿಗೆ ತಮ್ಮ ಆಸ್ತಿ ವಿವರ ಸಲ್ಲಿಸುತ್ತಾರೆ. ಈ ಸಂದರ್ಭದಲ್ಲಿ ಸರ್ಕಾರಿ ನೌಕರರು ತನ್ನ ಆಸ್ತಿ ವಿವರ ಮಾತ್ರ ಸಲ್ಲಿಸುತ್ತಾರೆ. ಕುಟುಂಬ ಸದಸ್ಯರು ಅಥವಾ ಅವಲಂಬಿತರ ಆಸ್ತಿ ವಿವರ ಸಲ್ಲಿಸುವುದಿಲ್ಲ. ಹೀಗಾಗಿ ಸರ್ಕಾರಿ ಸೇವಕರು ಆಸ್ತಿ ವಿವರ ಸಲ್ಲಿಸುವ ಕುರಿತಂತೆ ಇದ್ದ “ಕರ್ನಾಟಕ ಲೋಕಾಯುಕ್ತ ನಿಯಮಗಳು-1985ರ ನಿಯಮ 7ರಡಿ ನಿಗದಿಪಡಿಸಿರುವ ನಮೂನೆ-4ಕ್ಕೆ ತಿದ್ದುಪಡಿ’ಯಲ್ಲಿ ಸರ್ಕಾರಿ ನೌಕರರು ಕೂಡ ಸರ್ಕಾರಿ ಸೇವಕರು ಎಂದು ಪರಿಗಣಿಸಿ ಅವರನ್ನು ಸೇರ್ಪಡೆ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇದೀಗ ಹೊಸ ತಿದ್ದುಪಡಿಯಂತೆ ಶಾಸಕರು ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಸುವಂತೆ ಸರ್ಕಾರಿ ನೌಕರರು ಕೂಡ ತಮ್ಮ ಆಸ್ತಿ ವಿವರ ಸಲ್ಲಿಸುವಾಗ ಜತೆಗೆ ಪತಿ/ಪತ್ನಿ, ಮಕ್ಕಳು, ತಂದೆ-ತಾಯಿಯರ ಆಸ್ತಿ ವಿವರವನ್ನೂ ಇಲಾಖಾ ಮುಖ್ಯಸ್ಥರಿಗೆ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ಆಸ್ತಿ ವಿವರ ಸಲ್ಲಿಸುವ ನಮೂನೆ ನಾಲ್ಕರಲ್ಲಿ ಸರ್ಕಾರಿ ನೌಕರರ ಜತೆಗೆ ಪತಿ/ಪತ್ನಿ, ಮಕ್ಕಳು, ತಂದೆ-ತಾಯಿಯರ ಕಲಂಗಳನ್ನೂ ಸೇರಿಸಲಾಗಿದೆ. ಯಾವಾಗ ಉಪಯೋಗಕ್ಕೆ ಬರುತ್ತದೆ?:
ಸರ್ಕಾರಿ ನೌಕರರು ಪ್ರತಿ ವರ್ಷ ಆಸ್ತಿ ವಿವರ ಸಲ್ಲಿಸುತ್ತಾರಾದರೂ ಅದರಲ್ಲಿ ಆಗುವ ಹೆಚ್ಚಳ ಮತ್ತಿತರೆ ಅಂಶಗಳನ್ನು ಯಾರೂ ಗಮನಿಸುವುದಿಲ್ಲ. ಆದರೆ, ಲೋಕಾಯುಕ್ತ ಅಥವಾ ಎಸಿಬಿ ಅಧಿಕಾರಿಗಳು ಸರ್ಕಾರಿ ನೌಕರರ ಮನೆ ಮೇಲೆ ದಾಳಿ ನಡೆಸಿದಾಗ ಸಿಗುವ ಆಸ್ತಿಯಲ್ಲಿ ಅಕ್ರಮ ಆಸ್ತಿ ಎಷ್ಟು ಎಂಬುದನ್ನು ತಿಳಿದುಕೊಳ್ಳಲು ಆ ನೌಕರ ಇಲಾಖೆ ಮುಖ್ಯಸ್ಥರಿಗೆ ನೀಡಿದ ಆಸ್ತಿ ವಿವರ ತರಿಸಿಕೊಂಡು ಪರಿಶೀಲಿಸುತ್ತಾರೆ. ಅದರಲ್ಲಿರುವ ಆಸ್ತಿ ವಿವರಕ್ಕಿಂತ ಹೆಚ್ಚಿನ ಆಸ್ತಿ ಪತ್ತೆಯಾದರೆ ಅದನ್ನು ಅಕ್ರಮ ಎಂದು ಪರಿಗಣಿಸುತ್ತಾರೆ. ಹೀಗಾಗಿ ನೌಕರರ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಮಾತ್ರ ಅದು ಅನುಕೂಲಕ್ಕೆ ಬರುತ್ತದೆ.