Advertisement
ರಾಜ್ಯ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಜಿಲ್ಲಾವಾರು ವರದಿ ಸಲ್ಲಿಕೆಯಾಗಿದ್ದು, ಸುಮಾರು ನಾಲ್ಕು ಗಂಟೆಗೂ ಹೆಚ್ಚು ಹೊತ್ತು ಸುದೀರ್ಘ ಚರ್ಚೆ ನಡೆಯಿತು. ಮುನ್ನಡೆ, ಯಶಸ್ವಿ ಪ್ರಯತ್ನ, ಕೈಹಿಡಿದ ಅಂಶಗಳು, ಹಿನ್ನಡೆ, ಕೊನೆಯ ಕ್ಷಣದ ಲೋಪಗಳು ಇತರೆ ವಿಚಾರಗಳ ಬಗ್ಗೆ ವಿವರವಾಗಿ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.
Related Articles
Advertisement
ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರ ವಹಿಸುವುದು ಒಳಿತು ಎಂಬುದಾಗಿಯೂ ವರದಿ ಸಲ್ಲಿಕೆಯಾಗಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೂ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಯಿತು. ಜತೆಗೆ ಹಲವು ಪ್ರಮುಖ ನಾಯಕರು ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸದಿದ್ದುದು ಸಹ ತುಸು ಹಿನ್ನಡೆಗೆ ಕಾರಣವಾಯಿತು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ ಎಂದು ಮೂಲಗಳು ಹೇಳಿವೆ.
ಮಂಡ್ಯದಲ್ಲಿ ಗೆಲುವು: ಮಂಡ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಮಲತಾ ಅವರು 45,000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಗಳಿಸುತ್ತಾರೆ ಎಂಬುದಾಗಿ ಜಿಲ್ಲಾಧ್ಯಕ್ಷ ನಾಗನಗೌಡ ವರದಿ ಸಲ್ಲಿಸಿದ್ದಾರೆ. ಮೇಲುಕೋಟೆ ಕ್ಷೇತ್ರದಲ್ಲಷ್ಟೇ ಜೆಡಿಎಸ್ ಮುನ್ನಡೆ ಪಡೆಯಲಿದ್ದು, ಉಳಿದೆಡೆ ಅಭ್ಯರ್ಥಿಯು ಸಮಬಲದ ಪೈಪೋಟಿ ನೀಡುವ ವಿಶ್ವಾಸವಿದೆ ಎಂದು ವರದಿಯಲ್ಲಿದೆ ಎನ್ನಲಾಗಿದೆ.
ಗೆಲ್ಲುವ ಸಾಧ್ಯತೆ 50: 50: ರಾಜ್ಯದ 28 ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಹೊರತುಪಡಿಸಿದರೆ ಬಹುತೇಕ ಎಲ್ಲ ಕ್ಷೇತ್ರಗಳ ವರದಿಯಲ್ಲೂ ಧನಾತ್ಮಕ ವಿವರಗಳನ್ನೇ ಪ್ರಸ್ತಾಪಿಸಿದ್ದು, ಎಲ್ಲ ವರದಿಗಳಲ್ಲೂ ಗೆಲ್ಲುವ ವಿಶ್ವಾಸವನ್ನು ಸ್ಥಳೀಯ ಮುಖಂಡರು ವ್ಯಕ್ತಪಡಿಸಿದ್ದಾರೆ. ಸಭೆಯಲ್ಲಿ ಪ್ರಸ್ತಾಪವಾದ ವಿಚಾರ, ಅಂಕಿಸಂಖ್ಯೆ, ಮತದಾನ ಪ್ರಮಾಣ ಇತರೆ ಅಂಶಗಳ ಆಧಾರದಲ್ಲಿ 17ರಿಂದ 18 ಸ್ಥಾನ ಗೆಲ್ಲುವುದು ಖಚಿತವಾಗಿದೆ.
ಏಳೆಂಟು ಕ್ಷೇತ್ರಗಳಲ್ಲಿ ಗೆಲುವು ಸಾಧ್ಯತೆ 50: 50ರಷ್ಟಿದೆ. ಮೈಸೂರು- ಕೊಡಗು, ಕಲಬುರಗಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೀದರ್, ಕೊಪ್ಪಳ, ಚಿಕ್ಕೋಡಿ ಕ್ಷೇತ್ರಗಳಲ್ಲಿ ಪ್ರಬಲ ಸ್ಪರ್ಧೆಯಿದ್ದು, ಗೆಲುವಿನ ಅಂತರ ಬಹಳ ಕಡಿಮೆ ಇರುವಂತಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.