Advertisement

ಭಾಷಾ ಸಾಮರಸ್ಯ ಸಾರುವ ದೈವದ ನೇಮ ಇಂದು

11:42 AM Apr 01, 2019 | Naveen |

ಸುಬ್ರಹ್ಮಣ್ಯ : ಕರಾವಳಿ ತುಳುವ ನಾಡು. ಅನನ್ಯ ಸಂಸ್ಕೃತಿಯ ತವರು ನೆಲ. ಇಲ್ಲಿ ಭೂತಾರಾಧನೆ ಪ್ರಸಿದ್ಧಿ ಪಡೆದಿದೆ. ಧಾರ್ಮಿಕವಾಗಿ ಪ್ರಾಧಾನ್ಯ ಪಡೆದ ದೈವಾರಾಧನೆ ಭಾಷಾ ಸಾಮರಸ್ಯವನ್ನು ಎತ್ತಿ ಹಿಡಿಯುತ್ತದೆ. ಇದಕ್ಕೆ ನಿದರ್ಶನ ಕನ್ನಡ ಮಾತನಾಡುವ ಯೇನೆಕಲ್ಲಿನ ಬಚ್ಚನಾಯಕ ದೈವ.

Advertisement

ತುಳುನಾಡಿನ ಕೆಲವು ಭೂತಗಳು ತುಳುವಿನಲ್ಲಿ ನುಡಿಗಟ್ಟು ಹೇಳುತ್ತವೆ. ಇಲ್ಲಿನ ಬಚ್ಚನಾಯಕ ದೈವ ಕನ್ನಡದಲ್ಲೆ ಮಾತನಾಡುತ್ತದೆ. ನೇಮದ ವೇಳೆ ದೈವಜ್ಞ ಕನ್ನಡ ಭಾಷೆಯಲ್ಲಿ ನುಡಿ ಹೇಳಿ ಭಕ್ತರಿಗೆ ಅಭಯ ನೀಡುವುದು ದೈವದ ವಿಶೇಷ.

ಸುಳ್ಯ ತಾ| ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಉಳ್ಳಾಕುಲು ಉಳ್ಳಾಲ್ತಿ ಬಚ್ಚನಾಯಕ ದೈವಸ್ಥಾನದಲ್ಲಿ ಪ್ರತಿ ವರ್ಷ ನೇಮ ನಡೆಯುತ್ತದೆ. ಮಾ. 27ರಿಂದ ಜಾತ್ರೆ ಆರಂಭಗೊಂಡಿದ್ದು ಎ. 1ರಂದು ಬಚ್ಚನಾಯಕ ನೇಮ ನಡೆಯುತ್ತದೆ.

ದಾಯಾದಿ ಕಲಹ, ಭೂಮಿಯ ಪಾಲು ಪಟ್ಟಿ, ವಾಕ್‌ ದೋಷ, ದಾಂಪತ್ಯ ಕಲಹ, ನಂಬಿಸಿ ವಂಚನೆ, ಕಚೇರಿ, ಜಾಗದ ತಕರಾರು, ವ್ಯಾಜ್ಯ, ಉದ್ಯೋಗ ಹೀಗೆ ನ್ಯಾಯಕ್ಕೆ ಸಂಬಂಧಿಸಿ ಇಲ್ಲಿ ಹೆಚ್ಚು ಹರಕೆ ಸಂದಾಯವಾಗುತ್ತದೆ. ಬೆಳ್ಳಿ ರೂಪದ ಮೀಸೆ ಹರಕೆ ಒಪ್ಪಿಸುವುದು ಇಲ್ಲಿಯ ವಿಶೇಷತೆ.

ನೇಮದ ವೇಳೆ ಬಚ್ಚನಾಯಕ ದೈವ ನುಡಿಯುವ ಮಾತು ಗಮನ ಸೆಳೆಯುತ್ತದೆ. ದೈವವು ಒಡೆಯರ ಭಂಡಾರವನ್ನು ಅಂದ ಮತ್ತು ಚೆಂದದಿಂದ ತುಂಬಿಸಿ ಕೊಡುತ್ತೇನೆ ಎಂದು ಹೇಳುತ್ತದೆ. ನನ್ನ ನಂಬಿದವರಿಗೆ ಈ ಹಿಂದೆ ತೊಂದರೆ ನೀಡಿಲ್ಲ, ಮುಂದೆ ನೀಡುವುದೂ ಇಲ್ಲ ಎನ್ನುವುದು ಈ ನುಡಿಗಟ್ಟಿನ ಸಾರಾಂಶ.

Advertisement

ಬಚ್ಚನಾಯಕ ಅಚ್ಚಕನ್ನಡದಲ್ಲಿ ನುಡಿಗಟ್ಟು ಹೇಳುವುದು ಕಂಡುಬರುತ್ತದೆ. ದಶಕಗಳ ಕಾಲ ಅರಸರ ಆಡಳಿತಕ್ಕೆ ಒಳಪಟ್ಟ ಯೇನೆಕಲ್ಲಿನ ಗ್ರಾಮ ದೇವರಾಗಿ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿಯನ್ನು ಗ್ರಾಮಸ್ಥರು ಆರಾಧಿಸುತ್ತಾರೆ.

ಇಕ್ಕೇರಿ ಸಂಸ್ಥಾನಕ್ಕೆ ಒಳಪಟ್ಟ ಬಿಸಿಲೆ-ಐಗೂರು ಸೀಮೆಯ ಕಾಗೆನೂರು ಕೋಟಿ ದಳವಾಯಿ ಮಲ್ಲಾನ ಗೌಡನ ಮೂರು ಮಕ್ಕಳ ಪೈಕಿ ಕೋಟಿ-ನಾಯಕ-ಬಚ್ಚನಾಯಕ ಇಬ್ಬರು ಗಂಡು ಮಕ್ಕಳು. ಬಚ್ಚನಾಯಕ ಧೀರನೂ ಶೂರನೂ ಆಗಿದ್ದ. ಪಂಜ-ಕಡಬದರಸರು ಬಚ್ಚನಾಯಕನ ಸಹಾಯ ಪಡೆದು ಯೇನೆಕಲ್ಲು ಗ್ರಾಮವನ್ನು ಸೂರೆಗೈಯುವ ಪ್ರಯತ್ನ ನಡೆಸಿದ್ದರು. ಬಚ್ಚನಾಯಕ ಘಟ್ಟದಿಂದ ತುಳುನಾಡಿಗೆ ಯುದ್ಧಕ್ಕೆ ಹೊರಟು ನಿಂತಿದ್ದ. ಆಗ ಜನಕ ದಳವಾಯಿ ಬಲ್ಲಾಳನ ಗೌಡನು ತುಳುನಾಡಿಗೆ ಹೋಗಕೂಡದು ಎಂದು ಅಂಗಲಾಚಿದ್ದ.

ಅಣ್ಣ ನೀನು ಹೋಗಕೂಡದು
ತಾಯಿ ಲೀಲಾವತಿ ಕೂಡ ಮಗನನ್ನು ತಡೆಯುವ ಯತ್ನ ನಡೆಸಿದಳು. ತುಂಬು ಬಸುರಿಯಾಗಿದ್ದ ತಂಗಿಯೂ ತನ್ನನ್ನು ಬಿಟ್ಟು ಹೋಗದಂತೆ ಬೇಡಿಕೊಂಡಳು. ಕೊಟ್ಟ ಮಾತಿಗೆ ತಪ್ಪಿ ನಡೆಯಲಾರೆ ಎಂದಿದ್ದ ಬಚ್ಚನಾಯಕ ತುಳುವ ನಾಡಿಗೆ ಹೊರಟು ನಿಂತಿದ್ದ. ಬೇಡ ಅಣ್ಣ ನೀನು ಹೋದರೆ ಮತ್ತೆ ತಲೆ ಎತ್ತಿ ಬರಲಾರೆ. ಖಂಡಿತ ಸೋಲುವೆ. ಗೌಡಿ ಚೌಡಮ್ಮನ ಆಣೆ ಎಂದ ತಂಗಿಯನ್ನು ಕಾಲಿನಿಂದ ತುಳಿದ. ಆಕೆಗೆ ಗರ್ಭಪಾತವೂ ಆಯಿತು.

ಬಚ್ಚನಾಯಕ ಶಸ್ತ್ರಾಸ್ತ್ರಗಳೊಂದಿಗೆ ಕುದುರೆ ಏರಿ ಐಗೂರು ಸೀಮೆ ಬಿಟ್ಟು ಶಿರಾಡಿ ದಾರಿ ಮೂಲಕ ಗಡಿ ಚೌಡಮ್ಮನಲ್ಲಿ ಪ್ರಾರ್ಥಿಸಿ ತುಳುನಾಡಿನಲ್ಲಿ ತನಗೆ ಜಯ ಸಿಗಬಹುದೇ ಎಂದು ಸತ್ಯಶೋಧನೆ ನಡೆಸಿ ಸತ್ತರೂ ತುಳುನಾಡಿನಲ್ಲೆ ಎಂದು ದೃಢ ನಿರ್ಧಾರಕ್ಕೆ ಬಚ್ಚನಾಯಕ ಬಂದಿದ್ದ.

ಪಂಜದ ಬಲ್ಲಾಳರ ಸೇನೆ ಹಾಗೂ ಮುಖ್ಯಸ್ಥರನ್ನು ಸೇರಿಕೊಂಡು ಯುದ್ಧ ಸಾರಿದ. ಯುದ್ಧದಲ್ಲಿ ಯೇನೆಕಲ್ಲಿನ ಸಬ್ಬ ಗೌಡ ಪಾಳಯದ ಪಗರಿಗೆ ಬಲಿಯಾದ. ಸೈನಿಕನಿಲ್ಲದ ಕುದುರೆ ಕಂಡು ಬಚ್ಚನಾಯಕನ ಸೈನಿಕರೆಲ್ಲರೂ ಓಡಿ ಹೋದರು. ಸಂಜೆ ವೇಳೆ ಗೌಡರ ಹೆಂಡತಿಯರಿಬ್ಬರು ಹುಲ್ಲು ತರಲೆಂದು ಮದುವಗದ್ದೆ ಸಮೀಪ ಬದುವಿನಲ್ಲಿ ಹೋಗುವಾಗ ನರಳುವ ಶಬ್ದ ಕೇಳಿಸಿತು. ಈತ ವಿರೋಧಿ ಎಂದು ಮನಗಂಡ ಅಕ್ಕ ವೈರಿಯ ಕುತ್ತಿಗೆಯನ್ನು, ತಂಗಿ ನಾಲಗೆಯನ್ನು ಕೊಯ್ದರು. ತಮ್ಮನ ಸಾವಿನ ಸುದ್ದಿ ತಿಳಿದು ಕೋಟಿ ನಾಯಕನು ಯುದ್ಧ ಸಾರಿದನು. ಅವನೂ ಯುದ್ಧದಲ್ಲಿ ತೀರಿಕೊಂಡ. ಬಳಿಕ ಬಾನಡ್ಕದ ಮೇಲಿನ ಮನೆಯವರು ಇವರಿಬ್ಬರನ್ನು ಪ್ರತಿಮಾ ಶಕ್ತಿಗಳಾಗಿ ದೈವತ್ವಕ್ಕೇರಿಸಿ ನಂಬಿದರು. ಉಳ್ಳಾಕುಲು ದೈವದ ಪಟ್ಟದ ಪ್ರಧಾನಿಯಾಗಿ ಬಚ್ಚನಾಯಕ ಸ್ಥಾಪಿತಗೊಂಡನು.

ಘಟ್ಟದ ಮೇಲಿನ ದೈವ
ಘಟ್ಟದ ಮೇಲಿನಿಂದ ತುಳು ನಾಡಿಗೆ ಯುದ್ಧಸಾರಲು ಬಂದ ಬಚ್ಚನಾಯಕನನ್ನು ಇಲ್ಲಿ ಪ್ರತಿಮಾ ರೂಪವಾಗಿ ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತದೆ. ಘಟ್ಟದ ಮೇಲಿನ ದೈವವಾದ್ದರಿಂದ ಕನ್ನಡದಲ್ಲಿ ನುಡಿ ಹೇಳುತ್ತದೆ.
ಹರೀಶ್‌ ಬಾನಡ್ಕ
ಅಧ್ಯಕ್ಷ. ವ್ಯವಸ್ಥಾಪನ ಸಮಿತಿ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next