Advertisement
1939ರಲ್ಲಿ ಎರಡನೆಯ ಮಹಾಯುದ್ಧ ಆರಂಭ ವಾದಾಗ ಜರ್ಮನಿ, ಇಟಲಿ, ಜಪಾನ್ ಒಂದು ಕಡೆಯಾದರೆ, ಇಂಗ್ಲೆಂಡ್, ಫ್ರಾನ್ಸ್, ರಷ್ಯಾಗಳು ಇನ್ನೊಂದು ಗುಂಪಿನಲ್ಲಿದ್ದವು. ಬೇರೆ ಬೇರೆ ದೇಶಗಳು ಬೇರೆ ಬೇರೆ ಕಡೆ ದಾಳಿ ನಡೆಸುತ್ತಿದ್ದರೆ ಜಪಾನ್ ಏಷ್ಯಾದ ಸಣ್ಣ ಪುಟ್ಟ ದೇಶಗಳನ್ನು ವಶಪಡಿಸಿಕೊಂಡಿತು, ನೇತಾಜಿ ಸುಭಾಶ್ಚಂದ್ರ ಬೋಸ್ ನಾಯಕತ್ವದ ಇಂಡಿಯನ್ ನ್ಯಾಶನಲ್ ಆರ್ಮಿ (ಐಎನ್‌ಎ) ಕೂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು. ಇದೇ ಸಂದರ್ಭ ಭಾರತದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಮಣಿಪುರ ಭಾಗಗಳನ್ನು ಜಪಾನ್ 1942ರ ಮಾರ್ಚ್ ನಲ್ಲಿ ತನ್ನ ವಶಕ್ಕೆ ಪಡೆದುಕೊಂಡಿತು.
Related Articles
Advertisement
ಬಂಗಾಲದ ಕೆಲವು ಭಾಗಗಳನ್ನು ಐಎನ್‌ಎ ಸೈನಿಕರು ಗೆದ್ದು ವಿಜಯೋತ್ಸವ ಆಚರಿಸಿದರು. ಮಣಿಪುರ, ಇಂಫಾಲ ಮೊದ ಲಾದ ಪ್ರದೇಶಗಳನ್ನೂ ಗೆದ್ದು ಕೊಂಡರು. ಆದರೆ 1945ರ ಎ. 25ರಂದು ಬೋಸರಿಗೆ ಕೂಡಲೇ ಬರ್ಮಾ ಬಿಟ್ಟು ಹೊರಡುವಂತೆ ಸಲಹೆ ಬಂತು. ನೇತಾಜಿ ಅವರು 1945ರ ಆ. 18ರಂದು ತೈವಾನ್ ಬಳಿ ವಿಮಾನ ಅಪಘಾತದಲ್ಲಿ ನಿಧನ ಹೊಂದಿದರು ಎಂದು ನಂಬಲಾಗಿದೆ.
ಬೋಸ್ ಅವರ ಪ್ರಾಮಾಣಿಕತೆ, ನಾಯಕತ್ವ, ಸರಳತೆ, ಬ್ರಿಟಿಷರು ಭಾರತ ಬಿಟ್ಟುಹೋಗಲು ಅವರ ಕೊಡುಗೆಯನ್ನು ಸ್ವಾತಂತ್ರಾéನಂತರ ಪರಿಗಣಿಸಿಲ್ಲ ಎಂದು ಐಎನ್‌ಎಯಲ್ಲಿ ಕರ್ನಲ್ ಆಗಿದ್ದ ಮೂಲತಃ ಉತ್ತರಾಖಂಡದ ಉದಂಪುರ ನಗರದವರಾದ ದಿ| ಅಮರ್ ಬಹದೂರ್ ಸಿಂಗ್ ಅವರ ಪುತ್ರಿ, ಉಡುಪಿಯಲ್ಲಿ ನೆಲೆಸಿದ ಆಶಾ ರಘುವಂಶಿ ಆಕ್ರೋಶ ವ್ಯಕ್ತಪಡಿಸುತ್ತಾರೆ. ಬೋಸ್ ಕುರಿತಾಗಿ ಏನೂ ತಿಳಿವಳಿಕೆ ಇಲ್ಲ ಎಂಬ ಖೇದ ವ್ಯಕ್ತಪಡಿಸುವ ಆಶಾ ರಘುವಂಶಿ ಶಾಲೆಗಳಿಗೆ ಹೋಗಿ ಬೋಸ್, ಐಎನ್‌ಎ ಕೊಡುಗೆಗಳ ಬಗೆಗೆ ತಿಳಿವಳಿಕೆ ಕೊಡಲು ಇಳಿವಯಸ್ಸಿನಲ್ಲಿಯೂ ಹುಮ್ಮಸ್ಸು ತೋರುತ್ತಾರೆ.
ಬ್ರಿಟಿಷರು ತೊಲಗಲು ಬೋಸ್ ಕಾರಣರೆ? :
ದ್ವಿತೀಯ ವಿಶ್ವ ಯುದ್ಧದ ಸಮಯ ಸಿಂಗಾಪುರ, ಮಲಯ, ಬರ್ಮಾ ಮೊದಲಾದೆಡೆ ಜಪಾನೀಯರ ವಿರುದ್ಧ ಹೋರಾಟದಲ್ಲಿ ಬ್ರಿಟಿಷ್ ಭಾರತೀಯ ಸೈನಿಕರು ಯುದ್ಧ ಕೈದಿಗಳಾ ದರು. ಆಗ ಬೋಸ್ ಭಾರತೀಯ ಸೈನಿಕರನ್ನು ಜಪಾನೀಯರಿಂದ ಮುಕ್ತಗೊಳಿಸಿ ಐಎನ್‌ಎಯಲ್ಲಿ ಸೇರಿಸಿಕೊಂಡರು. ಅಲ್ಲಿ ನೆಲೆಸಿದ್ದ ಭಾರತೀಯ ಮೂಲದವರೂ ಸೇರಿದ್ದರು. 1943ರ ಅ. 21ರಂದು ಆಜಾದ್ ಹಿಂದ್ ಸರಕಾರವನ್ನು ಸಿಂಗಾಪುರದಲ್ಲಿ ಸ್ಥಾಪಿಸಿದರು. 1944ರ ಜ. 7ರಂದು ಬರ್ಮಾದ ರಂಗೂನಿಗೆ ಸ್ಥಳಾಂತರಿಸಿದರು. ದಿಲ್ಲಿಯ ಕೆಂಪುಕೋಟೆ ಮೇಲೆ ಭಾರತದ ಧ್ವಜ ಹಾರಿಸುವ ಉದ್ದೇಶದಿಂದ ದಿಲ್ಲಿ ಚಲೋ ಕರೆ ಕೊಟ್ಟಿದ್ದರು. 1943ರ ಅ. 23ರಂದು ಐಎನ್‌ಎ ಬ್ರಿಟಿಷರ ವಿರುದ್ಧ ಯುದ್ಧ ಘೋಷಿಸಿತು. ಆಗಲೇ ಅಂಡಮಾನ್ ನಿಕೋಬಾರ್ ದ್ವೀಪಗಳು ಐಎನ್‌ಎ ವಶವಾದದ್ದು. 1945ರಲ್ಲಿ ಜಪಾನೀಯರು ಸೋತ ಪರಿಣಾಮ ಬರ್ಮಾ ಬ್ರಿಟಿಷರ ವಶವಾಯಿತು. ಅನಿವಾರ್ಯವಾಗಿ ಐಎನ್‌ಎಯನ್ನು ಸಿಂಗಾಪುರಕ್ಕೆ ಸ್ಥಳಾಂತರಿಸಬೇಕಾಯಿತು. ಆಗ ಯುದ್ಧ ಕೈದಿಗಳಾದ ಸಾವಿರಾರು ಐಎನ್‌ಎ ಸೈನಿಕರನ್ನು ದಿಲ್ಲಿಯಲ್ಲಿ ವಿಚಾರಣೆಗೊಳಪಡಿಸುವಾಗಲೇ ಭಾರತಾದ್ಯಂತ ಪ್ರತಿಭಟನೆಗಳು ನಡೆದವು, ಎಲ್ಲ ಪಕ್ಷಗಳೂ ವಿರೋಧಿಸಿವು. ಬ್ರಿಟಿಷ್ ಅಧಿಪತ್ಯದ ವಾಯುಸೇನೆ, ನೌಕಾಸೇನೆಗಳಲ್ಲಿದ್ದ ಭಾರತೀಯ ಸೈನಿಕರು ಬ್ರಿಟಿಷ್ ಆಡಳಿತದ ವಿರುದ್ಧ ತಿರುಗಿ ಬೀಳುವ ಸ್ಥಿತಿ ಎದುರಾದಾಗ ಬ್ರಿಟಿಷರು ಕಂಗೆಟ್ಟಿದ್ದರು. ಬ್ರಿಟಿಷರು ಭಾರತವನ್ನು ಬಿಟ್ಟು ಹೋಗಲು ಇದೂ ಒಂದು ರೀತಿಯಲ್ಲಿ ಕಾರಣವಾಯಿತು ಎನ್ನುತ್ತಾರೆ ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ ಯು. ವಿನೀತ್ ರಾವ್.
-ಮಟಪಾಡಿ ಕುಮಾರಸ್ವಾಮಿ