ಧಾರವಾಡ: ನೇತಾಜಿ ಸುಭಾಸ್‌ಚಂದ್ರ ಬೋಸ್ ಅವರ 123ನೇ ಜಯಂತಿ ಅಂಗವಾಗಿ ಎಐಡಿಎಸ್‌ಒ, ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ನಗರದ ಕಡಪಾ ಮೈದಾನದಲ್ಲಿ ಸಭೆ ಕೈಗೊಂಡು ವಿದ್ಯಾರ್ಥಿಗಳ ಮೆರವಣಿಗೆ ನಡೆಸಲಾಯಿತು.
ಎಐಡಿವೈಒ ಅಖೀಲ ಭಾರತ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಒಂದು ಕ್ರಾಂತಿಯ ಮೂಲಕ ಸಮಾನತೆಯ ಸಮಾಜವಾದಿ ಸಮಾಜ ಬರಬೇಕು ಎನ್ನುವ ನೇತಾಜಿ ಅವರ ಕನಸು ನನಸಾಗಲೇ ಇಲ್ಲ. 70 ವರ್ಷಗಳ ನಂತರ ಇವತ್ತು ಮತ್ತೆ ಧರ್ಮ ಮತ್ತು ಜಾತಿ ಆಧಾರಿತ ರಾಜಕೀಯ ವಿಜೃಂಭಿಸುತ್ತಿದೆ. ಇಡೀ ದೇಶದಲ್ಲಿ ಕಿತ್ತು ತಿನ್ನುತ್ತಿರುವ ಸಮಸ್ಯೆಗಳನ್ನು ಅಧಿಕಾರಕ್ಕೆ ಬಂದಂತಹ ಯಾವ ಪಕ್ಷಗಳು ಕೂಡ ಪರಿಹರಿಸಿಲ್ಲ. ಶೋಷಣೆ ಆಧಾರದ ಮೇಲೆ ವ್ಯವಸ್ಥೆ ಸ್ಥಾಪಿಸಲ್ಪಟ್ಟಿದೆ. ಈ ನಿಟ್ಟಿನಲ್ಲಿ ನೇತಾಜಿ ಹೋರಾಟದ ಸ್ಫೂರ್ತಿ ನಮಗಿಂದು ಬೇಕಾಗಿದೆ ಎಂದರು.
ನಮ್ಮ ಮಧ್ಯೆ ಇರುವ ಕೇವಲ ಒಬ್ಬ ವ್ಯಕ್ತಿ ನೇತೃತ್ವ ಕೊಟ್ಟರೆ ಹೋರಾಟ ಗುರಿ ಮುಟ್ಟುವುದಿಲ್ಲ. ಅದಕ್ಕೆ ಒಂದು ವೈಚಾರಿಕ ಸ್ಪಷ್ಟತೆ ಬೇಕಾಗುತ್ತದೆ. ಕ್ರಾಂತಿಕಾರಿ ಚಿಂತನೆ ಇಟ್ಟುಕೊಂಡು ಒಂದು ಸಂಘಟಿತ ಹೋರಾಟ ಬೆಳೆದಾಗ ಮಾತ್ರ ಒಂದು ಆಮೂಲಾಗ್ರ ಬದಲಾವಣೆ ಬರುತ್ತದೆ. ನೇತಾಜಿಯವರಂತಹ ಆದರ್ಶ ಜೀವನ, ಚಿಂತನೆ ಮಾರ್ಗದರ್ಶನದಲ್ಲಿ ಯುವಕರು ಅದಕ್ಕೆ ಅಣಿಯಾದಾಗ ಮಾತ್ರ ಇಂದಿನ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಎಐಡಿಎಸ್‌ಒನ ಜಿಲ್ಲಾಧ್ಯಕ್ಷ ಮಹಾಂತೇಶ ಬಿಳೂರ ಮಾತನಾಡಿದರು. ಮಹಾನಗರ ಪಾಲಿಕೆ ಆವರಣದಲ್ಲಿರುವ ನೇತಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಹಣಮೇಶ ಹುಡೇದ, ಉಪಾಧ್ಯಕ್ಷ ಕೊಟ್ರೆಶ್ ಹುಬ್ಬಳ್ಳಿ, ಶರಣು ಪಾಟೀಲ, ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ರಣಜೀತ ಧೂಪದ, ಜಂಟಿ ಕಾರ್ಯದರ್ಶಿ ಶಶಿಕಲಾ ಮೇಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿಂಧೂ, ಬೀಸಪ್ಪ, ಸಹನಾ, ವಿದ್ಯಾರ್ಥಿಗಳಾದ ಅರುಣ, ನಿಂಗರಾಜ, ಅಕ್ಷತಾ ಇನ್ನಿತರರಿದ್ದರು.