ಮಧುಗಿರಿ: 1937ರಲ್ಲೇ ಉಪವಿಭಾಗ ಕೇಂದ್ರವಾದ ಮಧುಗಿರಿಯಲ್ಲಿ ನೆಲಗಡಲೆ, ರಾಗಿ ಮುಖ್ಯವಾಗಿ ಬೆಳೆಯಲಾಗುತ್ತದೆ. ಸುಮಾರು 2 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳಿದ್ದು, ಅಂದಾಜು 25ರಿಂದ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯುವ ರೈತರಿದ್ದರೂ ರಾಗಿ ಖರೀದಿ ಕೇಂದ್ರ ಇಲ್ಲ. ಹೀಗಾಗಿ ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಅನ್ಯಾಯವಾಗುತ್ತಿದೆ. ರಾಗಿ ಖರೀದಿ ಕೇಂದ್ರ ತೆರೆಯಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆಹಾರ ಪೂರೈಕೆ ಇಲಾಖೆ ಜಂಟಿ ನಿರ್ದೇಶಕರು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.
ಉಪ ವಿಭಾಗದ ವ್ಯಾಪ್ತಿಯ ಮಧುಗಿರಿ, ಶಿರಾ, ಕೊರಟಗೆರೆ ಹಾಗೂ ಪಾವಗಡ ಹಿಂದುಳಿದ ಹಾಗೂ ಬರಪೀಡಿತ ಪ್ರದೇಶವಾಗಿದೆ. ಬೆಳೆಗೆ ಯೋಗ್ಯ ಬೆಲೆ ಸಿಗದೆ ಹಾಗೂ ಪ್ರಕೃತಿ ವಿಕೋಪಕ್ಕೆ ಸಿಲುಕಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಈ ಪ್ರದೇಶದಲ್ಲಿ ಹಿಂದೆ ಮುಖ್ಯವಾಗಿ ರಾಗಿ, ಶೇಂಗಾ, ಜೋಳ, ಭತ್ತ, ಕಬ್ಬು ಹಾಗೂ ತೊಗರಿ ಹೆಚ್ಚಾಗಿ ಬೆಳೆ ಯುತ್ತಿದ್ದರು. ಅದರಲ್ಲಿ ರಾಗಿ ಹಾಗೂ ಶೇಂಗಾ ಪ್ರಮುಖ ವಾದವು. ಆದರೆ ದಶಕಗಳಿಂದ ಈ ಬೆಳೆಗೂ ನೀರಿಲ್ಲ. ಪ್ರಸ್ತುತ ಕೃಷಿ ಇಲಾಖೆ ಮಾರ್ಗದರ್ಶನದಂತೆ ಮಳೆಗೆ ಅನುಗುಣವಾದ ಬೆಳೆ ಬೆಳೆಯಲು ಮುಂದಾಗಿದ್ದಾರೆ.
ವರ್ಷವಾರು ಅಂಕಿ-ಅಂಶ: 2013-14ರಲ್ಲಿ 2725 ಹೆಕ್ಟೇರ್, 2014-15ರಲ್ಲಿ 4132 ಹೆಕ್ಟೇರ್, 2015-16 ರಲ್ಲಿ 4104 ಹೆಕ್ಟೇರ್, 2016-17ರಲ್ಲಿ 5857 ಹೆಕ್ಟೇರ್, 2017-18 ರಲ್ಲಿ 2870 ಹೆಕ್ಟೇರ್, 2018-19 ರಲ್ಲಿ 2912 ಹೆ, 2019-20 ರಲ್ಲಿ 5000 ಹೆಕ್ಟೇರ್ ಭೂಮಿಯಲ್ಲಿ ರಾಗಿ ಬೆಳೆಯಲಾಗಿದ್ದು, ಮಳೆ ಕಣ್ಣಾಮುಚ್ಚಾಲೆ ಅನುಗುಣವಾಗಿ ಬೆಳೆದ ಭೂಪ್ರದೇ ಶದ ಗಾತ್ರ ಬದಲಾವಣೆಯಾಗಿದ್ದು, ಇಳುವರಿಯಲ್ಲಿ ಹೆಕ್ಟೇರ್‌ಗೆ 1700 ಕೆ.ಜಿ. ಇದ್ದ ಬೆಳೆ 800ಕ್ಕೆ ಇಳಿದಿದೆ. ಭೂಮಿಯಲ್ಲಿ ಹೆಚ್ಚಿದ ರಾಸಾಯನಿಕ ಅಂಶ, ಭೀಕರ ಬರಗಾಲ ಇದಕ್ಕೆ ಕಾರಣವಾಗಿದೆ. ಅಂತರ್ಜಲ ಕುಸಿದು ಕುಡಿಯುವ ನೀರಿಗೂ ತಾತ್ವಾರವಾಗಿದೆ.
ಇಂತಹ ಸಂದರ್ಭ ಉಪವಿಭಾಗಕ್ಕೆ ಎತ್ತಿನಹೊಳೆ ಅಥವಾ ಭದ್ರ ಮೇಲ್ಡಂಡೆ ಯೋಜನೆಗಳು ಸಾಕಾರ ಗೊಂಡರೆ ಹಿಂದಿನ ರಾಗಿ ಬೆಳೆಯ ಗತವೈಭವ ಮತ್ತೆ ಮರುಕಳಿಸಲಿದೆ. ರೈತರಿಗೂ ನೆಮ್ಮದಿ ಸಿಗಲಿದೆ.
ದಲ್ಲಾಳಿಗಳ ಕಾಟ: ಉಪವಿಭಾಗದ ಎಲ್ಲ ಕ್ಷೇತ್ರಗಳ ಎಪಿಎಂಸಿಗಳಲ್ಲಿ ಇರುವ ಮಾರುಕಟ್ಟೆಯಲ್ಲಿ ಕೃತಕ ಹೆಚ್ಚುವರಿ ರಾಗಿ ಇದೆ. ಬೆಲೆ ಇಳಿದಿದೆ ಎಂದು ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ರಾಗಿ ಪಡೆಯುತ್ತಾರೆ. ಮಾಡಿದ ಸಾಲಕ್ಕೆ ಹೆದರಿ ಕನಿಷ್ಠ ಬೆಲೆಗೆ ರಾಗಿ ಮಾರಿ ಉಳಿದ ರಾಗಿ ಸ್ವಂತಕ್ಕೆ ಬಳಸಿಕೊಳ್ಳುವುದು ರೈತರ ಪ್ರತಿವರ್ಷದ ಗೋಳು. ಈ ಗೋಳು ತಪ್ಪಲು ಸರ್ಕಾರ ಕ್ವಿಂಟಲ್‌ಗೆ 3150 ರೂ.ನಂತೆ ಖರೀದಿಸಿದರೆ ರೈತರು ನಿಟ್ಟುಸಿರು ಬಿಡಲಿದ್ದು, ಆಹಾರ ಇಲಾಖೆಗೂ ಸಾಕಷ್ಟು ರಾಗಿ ಲಭ್ಯವಾಗಲಿದೆ. ಈಗಾಗಲೇ ಗುಬ್ಬಿ, ಕುಣಿಗಲ್, ತುರುವೇಕೆರೆ, ತಿಪಟೂರುಗಳಲ್ಲಿ ಖರೀದಿ ಕೇಂದ್ರ ತೆರೆದಿದ್ದು, ಚಿಕ್ಕನಾಯ್ಕನಹಳ್ಳಿ ಕ್ಷೇತ್ರದಲ್ಲಿ ಹುಳಿಯಾರು ಸೇರಿ 2 ಖರೀದಿ ಕೇಂದ್ರ ತೆರೆಯಲಾಗಿದೆ. ಈಗ ಮಧುಗಿರಿ ಉಪವಿಭಾಗಕ್ಕೂ ಈ ಸೌಲಭ್ಯ ನೀಡಿದರೆ ರೈತರಿಗೆ ನೆರವಾಗಲಿದೆ. ಖರೀದಿ ಕೇಂದ್ರ ನಿರ್ಮಾಣಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
-ಮಧುಗಿರಿ ಸತೀಶ್