Advertisement

ಜರ್ಮನ್‌ ಪಠ್ಯ ಸೇರಿದ “ಸುಬ್ಬಣ್ಣ”

11:45 PM Jul 21, 2023 | Team Udayavani |

1850-1920ರ ನಡುವಿನ ಘಟನೆ.

Advertisement

ಮೈಸೂರು ಅರಮನೆಯಲ್ಲಿ ಪುರಾಣ ಹೇಳುತ್ತಿದ್ದ ನಾರಾಯಣ ಶಾಸ್ತ್ರಿಗಳು ಮಗ ಶಾಮಣ್ಣನನ್ನು ವಿದ್ವಾಂಸನನ್ನಾಗಿ ಮಾಡಬೇಕೆಂದಿದ್ದರು. ಒಮ್ಮೆ ಅರಮನೆಗೆ ಕರೆದುಕೊಂಡು ಹೋದಾಗ ಸಂಗೀತದ ಹುಚ್ಚಿದ್ದ ಮಗ‌, “ನಾನು ಹಾಡುತ್ತೇನೆ’ ಎಂದ. ಹಾಡಿಗೆ ತಲೆದೂಗಿದ ದೊರೆ “ಸಾಧಕನಾಗಿ ಪಾರಿತೋಷಕ ಪಡೆಯಬೇಕು’ ಎಂದರು.

ಮಗ ಇದೇ ಗುಂಗಿನಲ್ಲಿದ್ದ. ಆಗ ಸಂಗೀತವೆಂದರೆ ದೇವದಾಸಿಯರ ಕಲೆ. ಶಾಮಣ್ಣ ದೇವದಾಸಿಯೊಬ್ಬಳ ಮನೆಗೆ ಕದ್ದು ಹೋಗಿ ಕಲಿಯುತ್ತಿದ್ದ. ಮಾತ್ಸರ್ಯಕ್ಕೆ ಆ ಊರು, ಈ ಊರು ಎಂಬುದುಂಟೆ? ಶಾಮಣ್ಣನಿಗೂ ಇದರ ಬಿಸಿ ತಗುಲಿ ಅರಮನೆ ಪಾರಿತೋಷಕ ಕೈತಪ್ಪಿತು. ಸಂಗೀತ ಕೈಹಿಡಿದರೂ ಆದಾಯ ಕೈಹಿಡಿಯಲಿಲ್ಲ. ದೊರೆಯೂ ನಿಧನ ಹೊಂದಿದರು, ಶಾಸ್ತ್ರಿಗಳ ಜೀವನವೂ ದುರ್ಭರವಾಯಿತು. 18 ವರ್ಷವಾಗುತ್ತಲೇ ಮಗನಿಗೆ ಲಲಿತೆಯ ಜತೆ ಮದುವೆಯಾಯಿತು. ವೃದ್ಧ ತಂದೆ ಮಗನ ಸಂಸಾರ ನಿಭಾಯಿಸಬೇಕಾಯಿತು.

ಮಗನಿಗೆ ಮಗುವಾಯಿತು. ಅನಂತರವೂ ಗರ್ಭ ಅಂಕುರಿಸಿದಾಗ, “ಇದ್ದವರಿಗೇ ಊಟವಿಲ್ಲ. ಇನ್ನೊಂದು ಗರ್ಭವೇಕೆ?’ ಎಂಬ ಮಾತೂ ತೇಲಿಬಂತು. ಶಾಸ್ತ್ರಿಗಳ ಮಗಳೂ ಹೆರಿಗೆಗಾಗಿ  ಬಂದಾಗ, ಮೊದಲೇ ಬಡತನ, ಸಾಲದ್ದಕ್ಕೆ ತಾಯಿಗೆ ಸಹಜವಾಗಿ ಸೊಸೆಗಿಂತ ಮಗಳ ಮೇಲಿನ ಮಮತೆ, ಇವೆಲ್ಲ ಹುಟ್ಟಿಸಿದ “ಜುಜುಬಿ’ ಮನೆವಾರ್ತೆ ಮನಸ್ತಾಪಗಳಿಂದ ಬೃಹತ್ಕಥಾನಕ ಸೃಷ್ಟಿಯಾಯಿತು, ಎಲ್ಲರ ಮನೆಯಲ್ಲಿ ನಡೆಯುವಂತೆ. ಭೋರ್ಗರೆದು ಹರಿಯುವ ನದಿ ಹುಟ್ಟುವುದು ಸಣ್ಣ ತೊರೆಯಲ್ಲಿ ಎಂಬಂತೆ, ಈ ಪುಟುಗೋಸಿ ತಕರಾರು ಮಗ, ಗರ್ಭಿಣಿ ಸೊಸೆ, ಮಗುವನ್ನು ದೂರಕ್ಕೆ ಒಯ್ದಿತು. ಎಲ್ಲಿಗೆ? ಕೋಲ್ಕತಾದವರೆಗೆ. ಹೇಗೆ? ಸಂಗೀತ ಕಲಿಸಿದ ದೇವದಾಸಿ ಮನೆಗೆ ಹಿಂದಿನ ದಿನ ಹೋಗಿ 100 ರೂ. ಕೇಳಿದ್ದ. ಆಕೆಗೋ ಈತ ದೇವರಂತೆ. ಆಕೆ ಇನ್ನೂ 50 ರೂ. ಕೊಟ್ಟಿದ್ದಳು.

ಕೋಲ್ಕತಾದಲ್ಲಿ ಸಂಗೀತ ಕಲಿಸಿ ಸಂಸಾರಕ್ಕೂ ಹೆಗಲು ಕೊಡುವಷ್ಟು ಆದ. ಈ ಆದಾಯದಿಂದ ದೇವದಾಸಿಗೆ ಸ್ವವಿಳಾಸವಿಲ್ಲದೆ 150 ರೂ. ತಲುಪಿಸಿದ. ಇದು ಗೊತ್ತಾಗಿ ತಮ್ಮ ನೆನಪಾಗದಿದ್ದರೂ ದೇವದಾಸಿಯ ನೆನಪಾಯಿತಲ್ಲ ಎಂದು ತಾಯಿ ಹೇಳಿದರಂತೆ. ಗರ್ಭಿಣಿ ಲಲಿತೆ ಮಗಳಿಗೆ ಜನ್ಮಕೊಟ್ಟಳು. ಹರಿದ್ವಾರದಲ್ಲಿ ಒಮ್ಮೆ ಸಂಗೀತ ಸಮ್ಮೇಳನ ನಡೆದಾಗ ಶಾಸ್ತ್ರಿಗಳು ಮಗನಿಗಾಗಿ ಹೋದರು. ಮಗನಿಗೆ ಇದು ಗೊತ್ತಾಗಿ ಅಲ್ಲಿಂದಲೂ ಕಾಲ್ಕಿತ್ತ.

Advertisement

ಚಿಂತಾಗ್ರಸ್ತ ತಂದೆ ಮೈಸೂರಿಗೆ ಬಂದರು. ಜತೆಗೂಡಿ ಪ್ರಯಾಣಿಸುವವರು ಅವರವರ  ನಿಲ್ದಾಣ  ಬಂದಾ ಕ್ಷಣ  ನಿರ್ದಾಕ್ಷಿಣ್ಯವಾಗಿ ಇಳಿದು ಹೋಗುವಂತೆ ಶಾಮ ಣ್ಣನ  ತಂದೆ,  ತಾಯಿ ಮಗನ ದುಃಖದಲ್ಲಿಯೂ, ಶಾಮಣ್ಣನ ಮಗ ಅನಾರೋಗ್ಯದಿಂದಲೂ, ಮಗಳು ನೀರಿಗೆ ಸಿಲುಕಿಯೂ, ಪತ್ನಿ ಅನಾರೋಗ್ಯದಿಂದಲೂ ಕ್ರಮವಾಗಿ  ಲೋಕ  ಬಿಟ್ಟು ತೆರಳಿದರು. ಮಗ ಸತ್ತಾಗ, “ಇರುವವರನ್ನಾದರೂ ಕಾಪಾಡು’ ಎಂದು ಲಲಿತೆ ಬೇಡಿಕೊಳ್ಳುತ್ತಿದ್ದರೆ, “ಇದ್ದೊಬ್ಬ ಮಗನನ್ನು ದೇವರು ಕರೆದೊಯ್ದನಲ್ಲ’ ಎಂದು ಶಾಮಣ್ಣ ಗುನುಗುತ್ತಿದ್ದ.

ದೇವರ ಬಗ್ಗೆ ಅಷ್ಟು ತಲೆಕೆಡಿಸಿಕೊಳ್ಳದ ಶಾಮಣ್ಣ, ಆಕೆ ಅಷ್ಟು ನಂಬಿಕೆಯನ್ನಿಟ್ಟುಕೊಂಡಿದ್ದ ದೇವರಲ್ಲಿ ತನಗೂ ಭಕ್ತಿ ಉಂಟಾಗುವುದಾದರೆ ಆಗಲಿ ಎಂದು ತೀರ್ಥಕ್ಷೇತ್ರ ಯಾತ್ರೆ ಮಾಡಿ ಹಿಂದಿರುಗಿದ. ಮನೆಯಲ್ಲಿದ್ದ ಬಟ್ಟೆ, ಆಟಿಕೆ, ಬಂಗಾರಗಳನ್ನು ಕೊಟ್ಟ. ಯಾರಿಗೆ? ಬೇಕೆಂದವರಿಗೆ- ಬೇಕೆನ್ನುವವರೇ ಅಲ್ಲವೆ ಬಡವರು? ಪಿಟೀಲು, ನೂರು ರೂ. ಹಿಡಿದು ಹೊರಟ. ರೈಲ್ವೇ ಸ್ಟೇಶನ್‌ ಮಾಸ್ಟರರಿಗೆ ನೂರು ರೂ. ಕೊಟ್ಟು ಟಿಕೆಟ್‌ ಕೊಡಿರೆಂದ. ಎಲ್ಲಿಗೆಂದು ಕೇಳಿದರೆ ರೈಲು ಹೋಗುವವರೆಗೆಂದ.

ರೈಲು ತಲುಪಿದಾಗ ಅದು ಮುಂಬಯಿ. ಹೋದ ಜಾಗವೆಲ್ಲ ಊರೇ ಅಂದುಕೊಂಡ. ಬೀದಿ ಬದಿ ಮಿಠಾಯಿ ಮಾರುವವಳ ಬಳಿ ಹೋಗಿ ಪಿಟೀಲು ನುಡಿಸಿದ. ಅದೆಂಥ ಬಾನಿ, ದನಿ? ಇದರಿಂದ ಆಕೆಗೂ ಗಿರಾಕಿಗಳು ಹೆಚ್ಚಾದರು.

ಹೊರಟಾಗ ಲಾಭಾಂಶದಲ್ಲಿ ಮಿಠಾಯಿ ಕೊಟ್ಟಳು. ಇದು ಸ್ವಲ್ಪ ಕಾಲ ನಡೆಯಿತು. ಸಿರಿವಂತನೊಬ್ಬ ಕಾರು ನಿಲ್ಲಿಸಿ ಪಿಟೀಲು ಧ್ವನಿ ಆಲಿಸಿ ತಲ್ಲೀನನಾದ. ಆ ಸಿರಿವಂತನೆಲ್ಲಿ?  ಈ ಬಡಪಾಯಿ ಎಲ್ಲಿ? ಆತನಿಗೆ ಮನಃಶಾಂತಿ ಈತನಿಂದ! ಇದೇ ಪ್ರಕೃತಿ ಗುಟ್ಟು. ಮನೆಗೆ ಕರೆದ, ಮನೆಯವರಿಗೂ ಪಿಟೀಲು ಧ್ವನಿಯ ಸಮಾರಾಧನೆ ಉಣಬಡಿಸಿದ. ಎಲ್ಲೋ ಮಲಗುತ್ತಿದ್ದವನಿಗೀಗ ಊರು, ತಂದೆ, ತಾಯಿಗಳ ನೆನಪು… ಮೈಸೂರಿಗೆ ಹೊರಟ, ರೈಲಿನಲ್ಲಿ…

ಈಗ 60ರ ಹರೆಯ. ಬೆಳ್ಳಂಬೆಳಗ್ಗೆ. ಎಲ್ಲ ಬದಲಾವಣೆಯಾಗಿದೆಯಲ್ಲ ಎಂದುಕೊಂಡ. ತಂದೆ, ತಾಯಿಗಳಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡರೆ ತನ್ನನ್ನು ಸ್ವೀಕರಿಸಬಹುದೆಂದು ಕನಸು ಕಂಡ. ತನ್ನ ಮಕ್ಕಳು ಅಗಲಿದಾಗ ತನಗಾದ ದುಃಖವೇ ತಾನು ಊರು ಬಿಟ್ಟಾಗ ತಂದೆತಾಯಿಗೂ… ಸ್ಮರಣೆಗೆ ಬಂತು. ಮನೆಯನ್ನು ಗುರುತಿಸುವುದು ಕಷ್ಟವಾಗಿ ಒಂದು ಮನೆಯ ಜಗುಲಿಯಲ್ಲಿ ಕುಳಿತ. ಮನೆಯವರು, “ಯಾರು?’ ಎಂದಾಗ “ಪರಸ್ಥಳ’ ಎಂದ.

ಕೂಡಲೇ ದೇವರ ಸಾನ್ನಿಧ್ಯದಿಂದ ಬಂದವರು ವಾಪಸು ಹೋದಾಗ ದ್ವಾರಪಾಲಕರು “ಯಾರು’ ಎಂದು ಕೇಳಿದರೆ… “ಪರಸ್ಥಳ’ ಎಂದರೆ… “ಸ್ವಸ್ಥಳ’ಕ್ಕೆ (ಭೂಲೋಕಕ್ಕೆ) ವಾಪಸು ನಡೆ ಎಂದರೆ ಏನು ಮಾಡುವುದು ಎಂದು ಭಯವಾಯಿತು. ಮುಂದೆ “ನಾರಾಯಣ ಶಾಸ್ತ್ರಿಗಳ ಮನೆ ಯಾವುದು?’ ಎಂದು ಕೇಳಿದ. ಅವರು ಸತ್ತು ಹೋಗಿ, ಮಗಳು, ಅಳಿಯ ಮನೆ ಮಾರಿ ಹೋಗಿದ್ದಾರೆಂಬ ಉತ್ತರ ಸಿಕ್ಕಿದಾಗ… ಗುರುತಿಸುವವರು ಇಲ್ಲದ್ದು ಪರಸ್ಥಳ ಎಂದು ಟಿ. ನರಸಿಪುರದತ್ತ ನಡೆದ. ದೇವಸ್ಥಾನಗಳ ಜಗುಲಿಯಲ್ಲಿ ಮಲಗಿ ಅಂತರಾತ್ಮನಲ್ಲಿ ಆತ್ಮಾರಾಮನನ್ನು ಕಾಣುವಂತಿದ್ದ.

ಒಬ್ಬ ಬಾಲಕ ಮಕ್ಕಳಾಟಿಕೆಗಾಗಿ ಪಿಟೀಲು ಹೇಳಿ ಕೊಡಿ ಎಂದು ಬೇಡಿದ. ಶಾಮಣ್ಣನಿಗೆ ಪಿಟೀಲೇ ಭಾರವಾಯಿತು, ನದಿಗೆ ಎಸೆದ. ರಾತ್ರಿ ನಿಶ್ಚಿಂತೆಯಿಂದ ಮಲಗಿದ್ದ. ಬೆಳಗ್ಗೆ ಪಕ್ಕದಲ್ಲಿಯೇ ಇತ್ತು ಪಿಟೀಲು. ಬಾಲಕ ಬಂದು ತಾನು ಕದ್ದು  ನೋಡಿ  ಪಿಟೀಲನ್ನು  ಎತ್ತಿ ತಂದಿರುವುದಾಗಿ ಹೇಳಿದ. “ಪಿಟೀಲು ಹೇಳಿಕೊಡಿ’ ಎಂದು ಅಂಗಲಾಚಿದ. ಹೀಗೆ ಪಾಠ ಹೇಳಿಸಿಕೊಂಡವನೇ ಹಿಂದಿನ “ಅಮೃತಬಳ್ಳಿ’ ಸಂಚಿಕೆಯಲ್ಲಿ ಬಣ್ಣಿತನಾದ ಶ್ಯಾನುಭೋಗ ವೆಂಕಟಸುಬ್ಬಯ್ಯ.

ಮಾಸ್ತಿ ವೆಂಕಟೇಶ ಅಯ್ಯಂಗಾರರ ಲೇಖನಿ ಯಿಂದ  1928ರಲ್ಲಿ (21 ಆವೃತ್ತಿ ಕಂಡ) ಮೂಡಿಬಂದ “ಸುಬ್ಬಣ್ಣ’ (ಶಾಮಣ್ಣನ ಕಥೆ) ಮಿನಿ ಕಾದಂಬರಿಯನ್ನು ಭಾಷಾಂತರ ಪರಿಣತ ಮಣಿಪಾಲದ ಡಾ| ಎನ್‌. ತಿರುಮಲೇಶ್ವರ ಭಟ್ಟರು ಜರ್ಮನ್‌ ಭಾಷೆಗೆ ಅನುವಾದಿಸಿದ್ದು 1970ರಲ್ಲಿ ಜರ್ಮನ್‌ ಭಾಷೆ ಕಲಿಯುವಾಗ. ಇಂಡೋ ಜರ್ಮನ್‌ ಸೊಸೈಟಿ ಕೃತಿಯನ್ನು ಹೊರತಂದ ಕೃತಿ ಜರ್ಮನಿಯಲ್ಲಿ ಭಾರತೀಯ ಸಾಹಿತ್ಯ ಪಠ್ಯದಲ್ಲಿ ಸೇರಿತು ಎಂಬ ವಾರ್ತೆ ಡಾ| ಭಟ್ಟರಿಗೇ ಗೊತ್ತಿಲ್ಲ. ಪ್ರತಿಯೂ ಇಲ್ಲದಷ್ಟು ನಿರ್ಲಿಪ್ತರು, ಅದೆಷ್ಟು ಬರೆದಿದ್ದಾರೋ ದೇವರಿಗೇ ಗೊತ್ತು, ಒಂಥರ ವೆಂಕಟಸುಬ್ಬಯ್ಯನಂತೆ… ಎಲ್ಲೆಡೆ ಇರುವ ವೆಂಕಟಸುಬ್ಬಯ್ಯ, ಶಾಮಣ್ಣನಂತಹ ವರನ್ನು ಹೊರತೆಗೆಯುವವರು ಬೇಕು, ಹೊರತೆಗೆಯುವವರು ಯಾರು?

Advertisement

Udayavani is now on Telegram. Click here to join our channel and stay updated with the latest news.

Next