ಬೆಂಗಳೂರು: ಬಹಳ ಕಾಲದಿಂದ ನನೆಗುದಿಗೆ ಬಿದ್ದಿರುವ ಬೆಂಗಳೂರಿನ ಸಬ್‌ಅರ್ಬನ್ ರೈಲು ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಕ್ರಮ ಕೈಗೊಂಡು ಪ್ರಸಕ್ತ ವರ್ಷದಲ್ಲೇ ಅನುಷ್ಠಾನಗೊಳಿಬೇಕು ಎಂದು ಸಂಸದ ಪಿ.ಸಿ.ಮೋಹನ್, ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.
ದೆಹಲಿಯಲ್ಲಿ ಶುಕ್ರವಾರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿಯವರೊಂದಿಗೆ ಭೇಟಿ ಮಾಡಿದ ಪಿ.ಸಿ.ಮೋಹನ್, ಬೆಂಗಳೂರಿನ ಸಬ್‌ಅರ್ಬನ್ ರೈಲು ಯೋಜನೆಯನ್ನು ಶೀಘ್ರ ಅನುಷ್ಠಾನಗೊಳಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು 2018-19ನೇ ಸಾಲಿನ ಬಜೆಟ್‌ನಲ್ಲಿ ಸಬ್ ಅರ್ಬನ್ ರೈಲು ಯೋಜನೆಗೆ 17,050 ಕೋಟಿ ರೂ. ಅನುದಾನ ನೀಡಿದ್ದರು. ಜತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರವು ಕ್ರಮವಾಗಿ 49:51ರ ಅನುಪಾತದ ಪಾಲುದಾರಿಕೆಯಲ್ಲಿ ಕೈಗೊಳ್ಳಲು ಒಪ್ಪಿಗೆಯನ್ನು ಕೇಂದ್ರ ನೀಡಿತ್ತು. ಪ್ರಸಕ್ತ ಬಜೆಟ್‌ನಲ್ಲಿ ಯೋಜನೆ ಆರಂಭಿಸಲು 10 ಕೋಟಿ ರೂ. ಆರಂಭಿಕ ಅನುದಾನ ಬಿಡುಗಡೆ ಮಾಡಿದೆ. ಇಷ್ಟಾದರೂ ಯೋಜನೆ ಜಾರಿ ವಿಳಂಬವಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಖುದ್ದಾಗಿ ರೈಲ್ವೆ ಸಚಿವರ ನೇತೃತ್ವದ ನಿಯೋಗವೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಕಳೆದ ಫೆಬ್ರುವರಿಯಲ್ಲಿ ಭೇಟಿಯಾಗಿ ಚರ್ಚಿಸಿ ನೂತನ ಷರತ್ತುಗಳ ಬಗ್ಗೆಯೂ ಚರ್ಚಿಸಿ ಒಮ್ಮತಕ್ಕೆ ಬರಲಾಗಿತ್ತು. ಯೋಜನೆ ಉದ್ಘಾಟನೆಗೆ ಪ್ರಧಾನಿಯವರನ್ನು ಆಹ್ವಾನಿಸುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ ರಾಜ್ಯ ಸರ್ಕಾರ ಯೋಜನೆ ಜಾರಿಗೆ ಅಗತ್ಯವಿರುವ ವಿಶೇಷ ಉದ್ದೇಶ ವಾಹಕ ಸ್ಥಾಪನೆ ವಿಳಂಬ ಮಾಡಿದ್ದರಿಂದ ಯೋಜನೆ ಜಾರಿ ಮತ್ತೆ ವಿಳಂಬವಾಯಿತು ಎಂದು ಉಲ್ಲೇಖೀಸಿದ್ದಾರೆ.
ಕಳೆದ ಏ.19ರಂದು ಪ್ರಧಾನಿಯವರ ಕಾರ್ಯಾಲಯವು ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪೆನಿ (ಕೆ-ಆರ್‌ಐಡಿಇ)ಗೆ ಪತ್ರ ಬರೆದು ಉಪನಗರ ಯೋಜನೆಗೆ ಸಂಬಂಧಪಟ್ಟಂತೆ ನಗರದ ಮಿತಿಯಲ್ಲಿ ನಿಲ್ದಾಣಗಳನ್ನು ಕಡಿತಗೊಳಿಸುವುದು ಸೇರಿದಂತೆ ಕೆಲ ವಿಷಯಗಳ ಬಗ್ಗೆ ಸಮಗ್ರ ಯೋಜನಾ ವರದಿಯನ್ನು ಮರುಪರಿಶೀಲಿಸುವಂತೆ ತಿಳಿಸಿದೆ.
ಈ ಬೆಳವಣಿಗೆಯಿಂದಾಗಿ ಯೋಜನೆಯ ಅನುಷ್ಠಾನ ಮತ್ತಷ್ಟು ವಿಳಂಬವಾಗಬಹುದೆಂಬ ಆತಂಕ ನಗರದ ಜನರಲ್ಲಿ ಮೂಡಿದೆ. ಕೂಡಲೇ ತಾವು ಯೋಜನೆ ಜಾರಿಗೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಂಡು ಪ್ರಸಕ್ತ ವರ್ಷದಲ್ಲೇ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯದ ಹಲವು ರೈಲ್ವೆ ಯೋಜನೆಗಳ ಬಗ್ಗೆಯೂ ಚರ್ಚೆ ನಡೆದಿದೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರು ಸಬ್‌ಅರ್ಬನ್ ರೈಲು ಯೋಜನೆಯ ತುರ್ತು ಅನುಷ್ಠಾನಕ್ಕೆ ಅಗತ್ಯ ನೆರವು, ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.