ಕಾನ್ಪುರ: ಇಲ್ಲಿ ನಡೆಯುತ್ತಿರುವ ನ್ಯೂಜಿಲ್ಯಾಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಕೆಎಸ್ ಭರತ್ ಬದಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದು ಗಮನ ಸೆಳೆದರು. ತಂಡದಲ್ಲಿ ಸ್ಥಾನ ಪಡೆದಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾಗೆ ಕುತ್ತಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭರತ್ ಗೆ ಅವಕಾಶ ಲಭಿಸಿದೆ.
ಬದಲಿ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯುವ ಅವಕಾಶವನ್ನು ಭರತ್ ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಮೊದಲ ವಿಕೆಟ್ ಪಡೆಯಲು ಪರದಾಡುತ್ತಿದ್ದ ತಂಡಕ್ಕೆ ಭರತ್ ಹಿಡಿದ ಲೋ ಕ್ಯಾಚ್ ಸಹಕಾರಿಯಾಯಿತು. ಅಶ್ವಿನ್ ಎಸೆತದಲ್ಲಿ ವಿಲ್ ಯಂಗ್ ಅವರು ಭರತ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಶತಕದತ್ತ ಮುನ್ನುಗ್ಗುತ್ತಿದ್ದ ಟಾಮ್ ಲ್ಯಾಥಂ (95 ರನ್) ರನ್ನು ಭರತ್ ಸ್ಪಂಪ್ ಔಟ್ ಮಾಡಿದರು. ಅನುಭವಿ ಆಟಗಾರ ರಾಸ್ ಟೇಲರ್ ಕ್ಯಾಚ್ ಕೂಡಾ ಭರತ್ ಭದ್ರ ಬೊಗಸೆ ಸೇರಿತು.
ಇದನ್ನೂ ಓದಿ:ಅಕ್ಷರ್, ಅಶ್ವಿನ್ ಸ್ಪಿನ್ ಜಾದೂ: ಆಲೌಟಾದ ನ್ಯೂಜಿಲ್ಯಾಂಡ್, ಭಾರತಕ್ಕೆ 49 ರನ್ ಮುನ್ನಡೆ
ಇದೇ ವೇಳೆ ಬದಲಿ ಕೀಪರ್ ಆಗಿ ಆಡಿ ಸ್ಟಂಪ್ ಮಾಡಿದ ಭಾರತದ ಮೊದಲ ಮತ್ತು ವಿಶ್ವದ ಕೇವಲ ಮೂರನೇ ಆಟಗಾರ ಎಂಬ ದಾಖಲೆಯನ್ನು ಕೆ.ಎಸ್.ಭರತ್ ಬರೆದರು.
ಕೆಎಸ್ ಭರತ್ ವಿಕೆಟ್ ಕೀಪಿಂಗ್ ಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ. ಮುಂದಿನ ಪಂದ್ಯದಲ್ಲಿ ಸಾಹಾರನ್ನು ಕೈಬಿಟ್ಟು, ಕೆಎಸ್ ಭರತ್ ಗೆ ಅವಕಾಶ ನೀಡಬೇಕು ಎಂದಿದ್ದಾರೆ.