Advertisement

ಮಹಾಮಸ್ತಕಾಭಿಷೇಕಕ್ಕೆ ಉಪ ನಗರಗಳು ಸಜ್ಜು

06:15 AM Feb 01, 2018 | |

ಹಾಸನ: ಶ್ರವಣಬೆಳಗೊಳದ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಉಪ ನಗರಗಳ ನಿರ್ಮಾಣ ಮತ್ತು ಅಟ್ಟಣಿಗೆ ನಿರ್ಮಾಣ ಪ್ರಮುಖ ವ್ಯವಸ್ಥೆಗಳಲ್ಲಿ ಒಂದಾಗಿದೆ. ಆ ಪೈಕಿ ಉಪ ನಗರಗಳ ನಿರ್ಮಾಣ ಬಹುತೇಕ ಪೂರ್ಣಗೊಂಡಿದ್ದು, 12 ಉಪ ನಗರಗಳ ಪೈಕಿ ಈಗಾಗಲೇ 3 ಉಪ ನಗರಗಳನ್ನು ಶ್ರವಣಬೆಳಗೊಳದ ಜೈನ ಮಠಕ್ಕೆ ಹಸ್ತಾಂತರಿಸಲಾಗಿದೆ.

Advertisement

12 ತಾತ್ಕಾಲಿಕ ಉಪ ನಗರಗಳ ನಿರ್ಮಾಣಕ್ಕೆ 75 ಕೋಟಿ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಶ್ರವಣಬೆಳಗೊಳದ ಸುತ್ತಮುತ್ತಲಿನ ವಿವಿಧ ಗ್ರಾಮಗಳ ರೈತರ 476 ಎಕರೆ ಜಮೀನನ್ನು ಎಕರೆಗೆ 50 ಸಾವಿರ ರೂ. ಪರಿಹಾರ ನೀಡಿ ತಾತ್ಕಾಲಿಕವಾಗಿ ಸ್ವಾಧೀನಪಡಿಸಿಕೊಂಡಿದ್ದು, ಆ ಪ್ರದೇಶದಲ್ಲಿ ಉಪ ನಗರಗಳನ್ನು ನಿರ್ಮಿಸಲಾಗಿದೆ.

ಉಪ ನಗರಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗಿದ್ದು, ಆಯಾಯ ಉಪ ನಗರಗಳಲ್ಲಿಯೇ ಭೋಜನಾಲಯ, ಅಡುಗೆ ತಯಾರು ಮಾಡುವ ಕೋಣೆಗಳನ್ನೂ ನಿರ್ಮಿಸಲಾಗಿದೆ.

12 ಉಪನಗರಗಳು ಪ್ರತ್ಯೇಕ ಸ್ಥಳಗಳಲ್ಲಿ ನಿರ್ಮಾಣವಾಗಿದ್ದು ಮುಖ್ಯ ರಸ್ತೆಗೆ ಗಣ್ಯರನ್ನು ತರಲು ಮತ್ತು ಅಲ್ಲಿಗೆ ಕಳುಹಿಸಲು ಈಗಾಗಲೆ ಚೆನ್ನೈ, ಗುಜರಾತ್‌ ಹಾಗೂ ಬೆಂಗಳೂರಿನಿಂದ 19ಕ್ಕೂ ಹೆಚ್ಚು ವಿದ್ಯುತ್‌ ಬ್ಯಾಟರಿ ಚಾಲಿತ ವಾಹನಗಳು ಶ್ರವಣಬೆಳಗೊಳಕ್ಕೆ ಬಂದಿವೆ. ಒಂದಕ್ಕೆ 3.50 ಲಕ್ಷ ರೂ. ಬೆಲೆಯ ವಿದ್ಯುತ್‌ ಬ್ಯಾಟರಿ ಚಾಲಿತ ವಾಹನಗಳನ್ನು ಉದ್ಯಮಿಯೋರ್ವ ಜೈನಮಠದ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ಉಪನಗರಗಳ ವರ್ಗೀಕರಣ
ಮಹಾಮಸ್ತಕಾಭಿಷೇಕಕ್ಕೆ ಬರುವ ಜೈನಮುನಿಗಳಿಗೆ ತ್ಯಾಗಿನಗರ, ಮಹಾಮಸ್ತಕಾಭಿಷೇಕದ ಕಳಶ ಖರೀದಿಸುವವರಿಗೆ ಕಳಶ ನಗರ, ವಿವಿಧ ರಾಜ್ಯಗಳಿಂದ ಬರುವ ಅತಿ ಗಣ್ಯರಿಗೆ ನಿರ್ಮಿಸಿರುವ ಗಣ್ಯಾತಿಗಣ್ಯರ ನಗರಗಳನ್ನು ಜೈನ ಮಠ ವಹಿಸಿಕೊಂಡು ಅಲ್ಲಿನ ಊಟೋಪಚಾರ ಸಹಿತ ಎಲ್ಲಾ ವ್ಯವಸ್ಥೆಯನ್ನೂ ಕಲ್ಪಿಸಲಿದೆ. ಆಯಾಯ ಇಲಾಖೆಗೆ ಸಂಬಂಧಿಸಿದಂತೆ ಸೇವಾ ನಗರ, ( ಸ್ವಯಂ ಸೇವಕರಿಗೆ), ಪೊಲೀಸ್‌ ನಗರ (ಭದ್ರತೆಗಾಗಿ ಆಗಮಿಸುವ ಪೊಲೀಸರಿಗೆ), ಅಧಿಕಾರಿಗಳ ನಗರ (ಜವಾಬ್ದಾರಿಯುತ ಅಧಿಕಾರಿಗಳಿಗೆ), ಯಾತ್ರಿ ನಗರ (ಪ್ರವಾಸಿಗರು ಮತ್ತು ಯಾತ್ರಾರ್ಥಿಗಳಿಗೆ), ಮಾಧ್ಯಮ ನಗರ (ಸುದ್ದಿಗಾರರು, ಛಾಯಾಗ್ರಾಹಕರು) ಹೀಗೆ ಉಪ ನಗರಗಳ ನಿರ್ಮಾಣ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next