Advertisement

ʼಚರಿತ್ರೆಯ ಪುಟ’ಗಳಿರುವ ಮೂಡುಬಿದಿರೆ ಉಪನೋಂದಣಾಧಿಕಾರಿ ಕಚೇರಿ ಉಳಿಸಬೇಡವೇ?

11:51 AM Sep 16, 2022 | Team Udayavani |

ಮೂಡುಬಿದಿರೆ: ಶತಮಾನದ ಹಿಂದೆ ಸ್ಥಾಪನೆಯಾಗಿದ್ದ ಮೂಡುಬಿದಿರೆ ಉಪ ನೋಂದಣಾಧಿಕಾರಿ ಕಚೇರಿ ಕಳೆದ ಎಪ್ರಿಲ್‌ನಲ್ಲಿ ತೆರೆದುಕೊಂಡ ಮೂಡುಬಿದಿರೆ ತಾಲೂಕು ಆಡಳಿತ ಸೌಧದಲ್ಲಿ ಬಿಡಾರ ಹೂಡಿದೆ. ನೆಮ್ಮದಿಯ ನೆಲೆ ಕಂಡಿದೆ ಎಂಬುದು ಸ್ವಾಗತಾರ್ಹ ಬೆಳವಣಿಗೆ.

Advertisement

ಆದರೆ, ಚಾರಿತ್ರಿಕ ನಗರಿ ಮೂಡು ಬಿದಿರೆಯ ಪರಂಪರೆಯಲ್ಲಿ ಪುರಾತತ್ವ ಮಹತ್ವದ 18 ದೇವಸ್ಥಾನ, 18 ಬಸದಿ, 18 ಕೆರೆಗಳ ಆಸ್ತಿತ್ವಕ್ಕೆ ಎಷ್ಟು ಪ್ರಾಮುಖ್ಯವಿದೆಯೋ ಆಷ್ಟೇ ಮಹತ್ವ ಇಲ್ಲಿನ ಉಪನೋಂದಣಾಧಿಕಾರಿಗಳ ಕಚೇರಿಗೂ ಇದೆ.

ಕೆಂಪುಕಲ್ಲಿನ ಸುಂದರ ರಚನೆಯ ಕಚೇರಿ ಇದು. ಮೂಡುಬಿದಿರೆಗೆ ತಿಲಕಪ್ರಾಯದಂತಿದೆ. ಇದರೊಳಗಿನ ಸರಂಜಾಮು, ದಾಖಲೆಗಳು, ಅಧಿಕಾರಿ, ಸಿಬಂದಿಗಳೂ ಆಡಳಿತ ಸೌಧಕ್ಕೆ ತೆರಳಿರಬಹುದು. ಈ ಸುಂದರ ಕಟ್ಟಡಕ್ಕೆ ಸದ್ಯಕ್ಕೆ ಬೀಗ ಜಡಿಯಲಾಗಿದೆ. ಮುಂದೇನಾದೀತು ಎಂಬ ಕುತೂಹಲ ಇಲ್ಲಿನ ಜನರಿಗಿದೆ.

ಏನಿದರ ಚಾರಿತ್ರಿಕ ಮಹತ್ವ

ಇದು ಬರೇ ಉಪನೋಂದಣಾ ಧಿಕಾರಿಗಳ ಕಚೇರಿ ಎಂಬುದಷ್ಟೇ ಇದರ ವಿಶೇಷತೆ ಅಲ್ಲವೇ ಅಲ್ಲ.

Advertisement

ಹಿಂದೊಮ್ಮೆ ಮೂಡುಬಿದಿರೆ ತಾಲೂಕು ಆಗಿದ್ದ ಸಂದರ್ಭ ತಾಲೂಕು ಕಚೇರಿಯೂ ಆಗಿತ್ತು. ಕೋರ್ಟು ಕೂಡ ಆಗಿತ್ತು. ಮೂಡುಬಿದಿರೆಗೆ ವಿದ್ಯುತ್‌ ಬರುವ (ಅಂದರೆ 1959ಕ್ಕಿಂತ) ಮೊದಲು ಇಲ್ಲಿ ನ್ಯಾಯಾಧೀಶರಿಗೆ ಗಾಳಿ ಬೀಸುವ ಪಂಖಾದ ವ್ಯವಸ್ಥೆ ಇಲ್ಲಿತ್ತು. ಈ ಪಂಖಾವನ್ನು ಚಲಾಯಿಸಲು ಓರ್ವ ಜವಾನ ಇದ್ದರಂತೆ. ಅದನ್ನು ನೇತು ಹಾಕಲು ಹಾಕಿದ್ದ ಕೊಂಡಿಗಳು ಇನ್ನೂ ಈ ಕಟ್ಟಡದಲ್ಲಿವೆ ಎಂಬುದನ್ನು ಗಮನಿಸಬೇಕಾಗಿದೆ. ಕಾರಣಾಂತರದಿಂದ ತಾಲೂಕು ಕಚೇರಿ ಕಾರ್ಕಳಕ್ಕೆ ವರ್ಗಾಯಿಸಲ್ಪಟ್ಟಿತು. (ಬಳಿಕ ಮೂಡುಬಿದಿರೆ ಹೋಬಳಿ ಎಂದಷ್ಟೇ ಆಗಿ ಬಹುಕಾಲ ಸರಿದು ಸುದೀರ್ಘ‌ ಕಾಲದ ಹೋರಾಟದ ಬಳಿಕ ತಾಲೂಕಾಗಿರುವುದು ಸುದೈವ.)

ಈ ಸುಂದರ ಕಟ್ಟಡವನ್ನು ಏನು ಮಾಡಬಹುದು. ಖಂಡಿತಕ್ಕೂ ಇದನ್ನು ಕೆಡವಿ ಇನ್ನೇನೋ ಕಟ್ಟುವುದು ತರವಲ್ಲ, 1907ರಲ್ಲಿ ಕಟ್ಟಿದ ಪ್ರವಾಸಿ ಬಂಗಲೆಗೆ ಪುರಾತತ್ವ ಮಹತ್ವವಿದೆಯೋ ಅದಕ್ಕೂ ಮೊದಲೇ ಕಟ್ಟಿರುವ ಮೂಡುಬಿದಿರೆಯ ಉಪ ನೋಂದಣಾಧಿಕಾರಿ ಕಚೇರಿಯ ನೆಲೆವೀಡಾಗಿದ್ದ ಈ ಸುಂದರ ಕಟ್ಟಡಕ್ಕೆ ಅದರಷ್ಟೇ ಅಥವಾ ಅದಕ್ಕಿಂತ ಹೆಚ್ಚು ಮಹತ್ವವಿದೆ. ಇದನ್ನು ಉಳಿಸಲೇ ಬೇಕಾಗಿದೆ. ಸದ್ಯ ತೆರವಾಗಿರುವ ಈ ಕಟ್ಟಡ ತಕ್ಕಮಟ್ಟಿಗೆ ಸದೃಢವಾಗಿಯೇ ಇದೆ. ಒಂದಿಷ್ಟು ಕಾಯಕಲ್ಪ ನಡೆಸಿದರೆ ಇದನ್ನು ಮತ್ತೂ ಒಂದು ಶತಮಾನ ಕಾಲ ಉಳಿಸಬಹುದು.

ಸಾಧ್ಯತೆಗಳು

1.ಇದರಲ್ಲೊಂದು ಪೊಲೀಸ್‌ ಔಟ್‌ ಪೋಸ್ಟ್‌ ಸ್ಥಾಪಿಸಬಹುದು.

2. ಮೂಡುಬಿದಿರೆ ಪರಿಸರದ ಪ್ರವಾಸಿ ತಾಣಗಳನ್ನು ಪರಿಚಯಿಸುವ, ಮಾಹಿತಿ ನೀಡುವ ಕಚೇರಿಯನ್ನಾಗಿಸಬಹುದು.

3. ಪುಟ್ಟ ಗ್ರಂಥಾಲಯ ರೂಪಿಸಬಹುದು.

4. ಪುಟ್ಟ ಸ್ವರೂಪದ ಸ್ವ ಉದ್ಯೋಗ ತರಬೇತಿ ಕೇಂದ್ರ ಸ್ಥಾಪಿಸಬಹುದು.

5. ಹತ್ತಿರದ ಅಂಗನವಾಡಿಯನ್ನು ಇಲ್ಲಿಗೆ ವರ್ಗಾಯಿಸಬಹುದು.

  • ಒಟ್ಟಿನಲ್ಲಿ ಸಾರ್ವಜನಿಕ ಅಭಿಪ್ರಾಯ ರೂಢಿಸಿ, ಸಾರ್ವಜನಿಕ ಉಪಯೋಗಕ್ಕಾಗಿ ಈ ಕಟ್ಟಡವನ್ನು ಬಳಸುವುದು ಸೂಕ್ತ.
  • ಒಂದು ವೇಳೆ ಅದಾವುದಕ್ಕೂ ಅವಕಾಶ ಇಲ್ಲ ಎಂದಾದರೆ ಇದ್ದುದನ್ನು ಇದ್ದ ಹಾಗೇ ಉಳಿಸಿಕೊಳ್ಳಬೇಕಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next