Advertisement

ಉಪ ಚುನಾವಣೆ: ಅಭ್ಯರ್ಥಿಗಳ ಆಯ್ಕೆ ಕಸರತ್ತು

12:31 AM Apr 26, 2019 | Team Udayavani |

ಬೆಂಗಳೂರು: ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಎರಡೂ ಕ್ಷೇತ್ರಗಳ ಜಿಲ್ಲಾ ಮುಖಂಡರೊಂದಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿದ್ದಾರೆ.

Advertisement

ಎರಡೂ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದು, ಎಲ್ಲರ ಅಭಿಪ್ರಾಯ ಪಡೆದಿರುವ ರಾಜ್ಯಾಧ್ಯಕ್ಷರು, ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಚಿಂಚೋಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಭಿಪ್ರಾಯ ಪಡೆದು ಹೈಕಮಾಂಡ್‌ಗೆ ಸಂಭಾವ್ಯರ ಪಟ್ಟಿ ಕಳುಹಿಸಿಕೊಡಲು ತೀರ್ಮಾನಿಸಿದ್ದಾರೆ.

ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಅಕಾಲಿಕ ನಿಧನ ಹೊಂದಿರುವ ಮಾಜಿ ಸಚಿವ ಸಿ.ಎಸ್‌. ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ಟಿಕೆಟ್‌ ನೀಡುವ ವಿಚಾರದಲ್ಲಿ ಸ್ಥಳೀಯ ಮುಖಂಡರು ಹಾಗೂ ಟಿಕೆಟ್‌ ಆಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿದ್ದಾರೆಂದು ತಿಳಿದು ಬಂದಿದೆ.

2018ರ ವಿಧಾನಸಭೆ ಚುನಾವಣೆಯಲ್ಲಿ ಸಿ.ಎಸ್‌. ಶಿವಳ್ಳಿ ಅವರು ಅತಿ ಕಡಿಮೆ ಅಂತರದಿಂದ ಗೆಲುವು ಪಡೆದುಕೊಂಡಿದ್ದರು. ಅಲ್ಲದೇ ಅವರ ವಿರುದಟಛಿ ಬಿಜೆಪಿಯಿಂದ ಎಸ್‌.ಐ.ಚಿಕ್ಕನಗೌಡರ್‌ ಅವರು ಎರಡು ಬಾರಿ ಸೋತಿರುವ ಅನುಕಂಪ ಅವರ ಮೇಲೂ ಇರುವುದರಿಂದ ಈ ಚುನಾವಣೆಯಲ್ಲಿ ಅನುಕಂಪದ ಆಧಾರದಲ್ಲಿ ಮತ ಪಡೆಯಲು ಕಷ್ಟವಾಗಲಿದ್ದು, ಅವರ ಬದಲು ಬೇರೆ ಪ್ರಬಲ ವ್ಯಕ್ತಿಗೆ ಟಿಕೆಟ್‌ ನೀಡುವಂತೆ ಆಕಾಂಕ್ಷಿಗಳು ನಾಯಕರ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಶಿವಳ್ಳಿ ಪತ್ನಿ ಕುಸುಮಾ ಬದಲು ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ಮನವಿ ಮಾಡಿಕೊಂಡಿದ್ದಾರೆ.ಪ್ರಮುಖವಾಗಿ ಹಳೇ ಧಾರವಾಡ ಜಿಲ್ಲೆ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್‌ ಸವಣೂರು, ಯುವ ಮುಖಂಡ ಶಿವಾನಂದ ಬೆಂಥೂರ್‌ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಅಲ್ಲದೇ ಅಲ್ಪ ಸಂಖ್ಯಾತ ಕೋಟಾದಡಿ ಎಚ್‌.ಎಲ್‌. ನಧಾಪ್‌ ಟಿಕೆಟ್‌ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.ಆರು ಮಾಜಿ ಶಾಸಕರ ಪುತ್ರರ ಬೇಡಿಕೆ: ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖವಾಗಿ ಆರು ಜನ ಮಾಜಿ ಶಾಸಕರ ಪುತ್ರರು ಈ ಉಪ ಚುನಾವಣೆಯಲ್ಲಿ ಟಿಕೆಟ್‌ ನೀಡುವಂತೆ ಮನವಿ ಮಾಡಿರುವುದು ವಿಶೇಷ.

Advertisement

ಮಾಜಿ ಶಾಸಕ ಗೋವಿಂದಪ್ಪ ಜುಟ್ಟಲ್‌ ಅವರ ಪುತ್ರ ಚಂದ್ರಶೇಖರ್‌ ಜುಟ್ಟಲ್‌, ಎಂ.ಎಸ್‌. ಕಟಗಿ ಅವರ ಪುತ್ರ ಅರವಿಂದ ಕಟಗಿ, ಬಸಪ್ಪ ಉಪ್ಪಿನ್‌ ಪುತ್ರ ಮುತ್ತಣ್ಣ
ಉಪ್ಪೀನ್‌, ತಿಮ್ಮಣ್ಣ ಕಂಬಳಿ ಪುತ್ರ ಮಹಾಂತೇಶ ಕಂಬಳಿ, ವೀರಪ್ಪ ಕೂಬಿಹಾಳ್‌ ಪುತ್ರ ವಿಶ್ವನಾಥ ಕೂಬಿಹಾಳ,ಪಿ.ಸಿ. ಸಿದ್ದನಗೌಡರ ಪುತ್ರ ಜಗನ್ನಾಥ ಸಿದ್ದನಗೌಡರ್‌
ಟಿಕೆಟ್‌ ನೀಡುವಂತೆ ಪಕ್ಷದ ನಾಯಕರಲ್ಲಿ ಮನವಿ ಮಾಡಿದ್ದಾರೆ.

ಕುಸುಮಾ ಪರ ರಾಜ್ಯ ನಾಯಕರ ಒಲವು: ಸಿ.ಎಸ್‌. ಶಿವಳ್ಳಿ ಪತ್ನಿ ಕುಸುಮಾ ಅವರಿಗೆ ಟಿಕೆಟ್‌ ನೀಡಬೇಕೆನ್ನುವುದು ಬಹುತೇಕ ರಾಜ್ಯ ನಾಯಕರ ಅಭಿಪ್ರಾಯ. ಶಿವಳ್ಳಿ ಅವರ ಅಕಾಲಿಕ ನಿಧನದಿಂದ ಅವರ ಕುಟುಂಬ ಆಘಾತಕ್ಕೊಳಗಾಗಿದ್ದು, ಅವರ ಪತ್ನಿಗೆಟಿಕೆಟ್‌ ನೀಡಿದರೆ, ಅನುಕಂಪದ ಅಲೆಯ ಮೇಲೆ ಕ್ಷೇತ್ರವನ್ನು ಉಳಿಸಿಕೊಳ್ಳಬಹುದು ಎನ್ನುವುದು ರಾಜ್ಯ ನಾಯಕರ ಅಭಿಪ್ರಾಯ. ಅಲ್ಲದೇ, ಅವರಿಗೆ ಟಿಕೆಟ್‌ ನೀಡದೇ ಬೇರೆಯವರಿಗೆ ನೀಡಿದರೆ, ತಪ್ಪು ಸಂದೇಶ ರವಾನೆಯಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.
ಅಲ್ಲದೇ ಕುಂದಗೋಳ ಕ್ಷೇತ್ರದಲ್ಲಿ ಕುರುಬರು ಮತ್ತು ಲಿಂಗಾಯತರ ನಡುವೆ ನೇರ ಸ್ಪರ್ಧೆ ಏರ್ಪಡುವುದರಿಂದ ಹಾಗೂ ಬಿಜೆಪಿ ಲಿಂಗಾಯತ ಸಮುದಾಯದವರಿಗೆ ಟಿಕೆಟ್‌ ನೀಡುವುದರಿಂದ ಕುರುಬ ಸಮುದಾಯಕ್ಕೆ ಟಿಕೆಟ್‌ ನೀಡಿದರೆ ಅನುಕೂಲ ಎನ್ನುವ ಲೆಕ್ಕಾಚಾರವೂ ಇದರಲ್ಲಿ ಅಡಗಿದೆ.

ಖರ್ಗೆ ತೀರ್ಮಾನವೇ ಅಂತಿಮ: ಇದೇ ವೇಳೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕುರಿತಂತೆಯೂ ರಾಜ್ಯ ನಾಯಕರು ಸಭೆ ನಡೆಸಿದರು. ಚಿಂಚೋಳಿ ಕ್ಷೇತ್ರದಲ್ಲಿ ಪ್ರಮುಖವಾಗಿ ಲಂಬಾಣಿ ಸಮುದಾಯದವರಿಗೆ ಟಿಕೆಟ್‌ ನೀಡಬೇಕೆಂಬ ಬೇಡಿಕೆ ಇದ್ದು, ಬಾಬುರಾವ್‌ ಚೌಹಾಣ್‌, ಸುಭಾಷ್‌ ರಾಠೊಡ್‌ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ. ಅವರಲ್ಲದೇ ಗೋಪಾಲರಾವ್‌ ಕಟ್ಟಿಮನಿ ಹಾಗೂ ಟಿ.ಜೆ ಭೀಮರಾವ್‌ ಅವರ ಹೆಸರೂ ಪ್ರಸ್ತಾಪವಾಗಿದ್ದು, ಜಿಲ್ಲೆಯ ಮುಖಂಡರು ಹಾಗೂ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಅಭಿಪ್ರಾಯ ಪಡೆದು ಅಭ್ಯರ್ಥಿಯನ್ನು ಅಂತಿಮಗೊಳಿಸಲು ಕೆಪಿಸಿಸಿ ಅಧ್ಯಕ್ಷರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಎರಡೂ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಅವರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದು, ಶುಕ್ರವಾರ ಅಭ್ಯರ್ಥಿ ಆಯ್ಕೆ ಅಂತಿಮಗೊಳ್ಳುತ್ತದೆ.
– ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next