Advertisement

ಶಾಲೆ ಬಿಡಿಸಿ ಮಕ್ಕಳೊಂದಿಗೆ ಗುಳೆ ಬಂದ ಕೂಲಿಕಾರರು!

09:34 PM Jul 17, 2019 | Lakshmi GovindaRaj |

ಹುಣಸೂರು: ಸರ್ಕಾರ 14 ವರ್ಷದ ವರೆಗಿನ ಮಕ್ಕಳಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಕಡ್ಡಾಯಗೊಳಿಸಿ, ಅಗತ್ಯ ಸವಲತ್ತುಗಳನ್ನು ಉಚಿತವಾಗಿ ನೀಡುತ್ತಿದೆ. ಆದರೆ, ಬಡ ಕುಟುಂಬಗಳು ಜೀವನದ ಬಂಡಿ ಸಾಗಿಸಲು ತಮ್ಮ ಮಕ್ಕಳೊಂದಿಗೆ ದೂರದ ನಗರ, ಪಟ್ಟಣಗಳಿಗೆ ವಲಸೆ ಬರುತ್ತಿರುವುದರಿಂದ‌ ಆ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ರೀತಿ ತುತ್ತು ಕೂಳಿಗಾಗಿ ಕೂಲಿ ಅರಸಿ ಬಂದಿರುವ ಕುಟುಂಬಗಳ ಸುಮಾರು 29 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಬೆಳಕಿಗೆ ಬಂದಿದೆ.

Advertisement

ಮನೆ ಕಾಮಗಾರಿ: ನಗರದ ಸರಸ್ವತಿಪುರಂ ಹಾಗೂ ಪೌರಕಾರ್ಮಿಕರ ಕಾಲೋನಿಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ನಿರ್ಮಿಸಲಾಗುತ್ತಿರುವ 400 ಮನೆಗಳ ಕಾಮಗಾರಿಗಾಗಿ 50ಕ್ಕೂ ಹೆಚ್ಚು ಕುಟುಂಬಗಳನ್ನು ಕರೆತರಲಾಗಿದೆ. ತಂದೆ-ತಾಯಿಯರೊಂದಿಗೆ 6-14 ವರ್ಷದ 29 ಮಕ್ಕಳು ಕೂಡ ಆಗಮಿಸಿದ್ದಾರೆ.

ಈ ಮಕ್ಕಳು ಶಾಲೆಯಿಂದ ಹೊರಗುಳಿದು, ಆಟವಾಡಿಕೊಂಡು ಪೋಷಕರೊಂದಿಗಿದ್ದಾರೆ. ಇವರ ಗುತ್ತಿಗೆ ಅವಧಿಯೇ ಮುಂದಿನ ಎರಡು ವರ್ಷ ಇರುವುದರಿಂದ ಅಲ್ಲಿಯವರೆಗೂ ಈ ಮಕ್ಕಳು ಶಾಲೆ ಕಡೆ ಮುಖ ಮಾಡದಂತಾಗಿದೆ. ರಾಯಚೂರು, ಕೊಪ್ಪಳ ಜಿಲ್ಲೆಗಳಿಂದ ಹುಣಸೂರಿಗೆ ತಮ್ಮ ಮಕ್ಕಳೊಂದಿಗೆ ಆಗಮಿಸಿರುವ ಕೂಲಿ ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ತಾವೇ ಎರವಾಗಿದ್ದಾರೆ.

ವಲಸೆ: ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಂದ ಆಗಮಿಸಿರುವ ಕೂಲಿಕಾರರ ಮಕ್ಕಳು ಆಯಾ ಗ್ರಾಮಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇದೀಗ ಈ ವಿದ್ಯಾರ್ಥಿಗಳು ಶಾಲೆಯಿಂದಲೇ ದೂರವಾಗಿದ್ದು, ಬಾಲ್ಯದಲ್ಲಿ ಕಡ್ಡಾಯ ಶಿಕ್ಷಣ ಪಡೆಯಬೇಕಾದ ಈ ಮಕ್ಕಳು ತಮ್ಮ ತಂದೆ-ತಾಯಿಯರೊಂದಿಗೆ ಆಗಮಿಸಿ, ಆಟದತ್ತ ಗಮನ ಹರಿಸಿದ್ದು, ಶಿಕ್ಷಣ ಇವರಿಗೆ ಮರಿಚಿಕೆಯಾಗಿದೆ.

1-7ನೇ ತರಗತಿ ಮಕ್ಕಳು: ರಾಯಚೂರು-ಕೊಪ್ಪಳ ಜಿಲ್ಲೆಯ ಮಾನ್ವಿ, ಸಿರಿವಾರ, ಲಿಂಗಸುರು, ದೇವದುರ್ಗ, ರಾಯಚೂರು, ಮತ್ತಿತರೆಡೆಗಳಿಂದ 6 ರಿಂದ 14 ವರ್ಷದೊಳಗಿನ 29 ಮಕ್ಕಳು ನಗರಕ್ಕೆ ಆಗಮಿಸಿದ್ದಾರೆ. ತಿಮ್ಮನಗೌಡ(10), ಅಕ್ಷತಾ (8), ಮಲ್ಲಿಕಾರ್ಜುನ (7), ಚಿದಾನಂದ (7), ಅಂಬಿಕಾ (10), ಜ್ಯೋತಿ (6), ಮಂಜುನಾಥ (7) ಬಸಮ್ಮ (9), ಈರಮ್ಮ (6), ಸುಮಂಗಲ(13), ಚನ್ನಮ್ಮ (12), ಚಂದ್ರಕಲಾ (7), ಶ್ರೀದೇವಿ (12), ಮಲ್ಲಿಕಾರ್ಜುನ(6), ಹನುಮೇಶ (8), ರೇಣುಕಾ (12), ಅನಿತಾ (9), ಅಕ್ಷತಾ (7), ಪ್ರಜ್ವಲ್‌(11), ಮಲ್ಲಿಕಾರ್ಜುನ (6),ಅನಿತಾ (8), ನರಸಮ್ಮ (10), ಮಾಯಾ (12), ಬಸಮ್ಮ (6), ಬಸವ (11), ಶಿವ (9), ಮಲ್ಲಿಕಾ (7), ನಾಗರತ್ನ (9), ಹುಲಿಗಮ್ಮ (6) ಶಿಕ್ಷಣದಿಂದ ವಂಚಿತರಾಗಿರುವುದು ಪತ್ತೆಯಾಗಿದೆ.

Advertisement

ಸರ್ವೆ ನಡೆಸಿದ ತಂಡ: ಹುಣಸೂರು ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿ ಟಿ.ಸಂತೋಷ್‌ಕುಮಾರ್‌, ಸಿಆರ್‌ಪಿ ಸತೀಶ್‌ ನೇತೃತ್ವದ ತಂಡ ಸರಸ್ವತಿಪುರಂ ಹಾಗೂ ಇತರೆಡೆಗಳಲ್ಲಿ ಸರ್ವೆ ನಡೆಸಿ ಶಾಲೆಯಿಂದ ಹೊರಗುಳಿದ 29 ಮಕ್ಕಳನ್ನು ಪತ್ತೆ ಹಚ್ಚಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅದೇ ಬಡಾವಣೆಯಲ್ಲಿ ಟೆಂಟ್‌ ಶಾಲೆ ಆರಂಭಿಸುವ ಚಿಂತನೆ ಇದೆ.

ಶಾಲೆಯಿಂದ ಹೊರಗುಳಿದ ಮಕ್ಕಳ ಸರ್ವೆ ನಡೆಸಿದ ವೇಳೆ ವಿವಿಧ ಹಂತದ 29 ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಇವರಿಗಾಗಿ ಪ್ರತ್ಯೇಕ ಟೆಂಟ್‌ ಶಾಲೆ ತೆರೆದು, ಸರಕಾರದಿಂದ ದೊರೆಯುವ ಬಿಸಿಯೂಟ, ಸಮವಸ್ತ್ರ, ಪಠ್ಯಪುಸ್ತಕ ಮತ್ತಿತರ ಸೌಲಭ್ಯ ಕಲ್ಪಿಸಲು ಹಾಗೂ ಇವರಿಗೆ ಬೋಧನೆ ಮಾಡಲು ಶಿಕ್ಷಕರನ್ನು ನಿಯೋಜಿಸಲು ಉದ್ದೇಶಿಸಲಾಗಿದೆ.
-ಟಿ.ಸಂತೋಷ್‌ ಕುಮಾರ್‌, ಕ್ಷೇತ್ರ ಸಮನ್ವಯಾಧಿಕಾರಿ

ಈ ಮಕ್ಕಳ ವೈಯಕ್ತಿಕ ಕಡತವನ್ನು ಪರಿಶೀಲಿಸಿ ವಿವಿಧ ವಯೋಮಾನದ ಮಕ್ಕಳನ್ನು ವಿವಿಧ ತರಗತಿಗಳಿಗೆ ದಾಖಲಿಸಲು ಹಾಗೂ ಇವರಿಗೆ ಎಲ್ಲ ಸೌಲಭ್ಯ ಕಲ್ಪಿಸಿ, ಪಾಠ ಕಲಿಯುವ ಮುಕ್ತ ವಾತಾವರಣ ನಿರ್ಮಿಸಿಕೊಡಲು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
-ನಾಗರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ

* ಸಂಪತ್‌ ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next