ಗದಗ: ಶಿಸ್ತು, ಸಮಯ ಪ್ರಜ್ಞೆ, ಪ್ರಾಮಾಣಿಕತೆ ರೂಢಿಸಿಕೊಳ್ಳುವ ಜೊತೆಗೆ ಏಕಾಗ್ರತೆಯಿಂದ ಗುಣಮಟ್ಟದ ಶಿಕ್ಷಣ ಪಡೆದು ಯುವ ವಿದ್ಯಾರ್ಥಿಗಳು ಅತ್ಯುತ್ತಮ ನರ್ಸ್‌ಗಳಾಗಿ ಹೊರಹೊಮ್ಮುವ ಮೂಲಕ ಸಂಸ್ಥೆಗೆ ಹೆಸರು ತರಬೇಕೆಂದು ಜಿಮ್ಸ್ ನಿರ್ದೇಶಕ ಡಾ|ಬಸವರಾಜ ಬೊಮ್ಮನಹಳ್ಳಿ ಹೇಳಿದರು.
ನಗರದ ಸಂಭಾಪೂರ ರಸ್ತೆಯಲ್ಲಿರುವ ಸಂಕನೂರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಬುಧವಾರ ಸಂಕನೂರ ಇನ್ ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಕಾಲೇಜನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಜ್ಞ ವೈದ್ಯರೇ ಇಲ್ಲಿ ಶಿಕ್ಷಣದ ಪಾಠ ಬೋಧಿಸುತ್ತಿರುವುದು ಇಲ್ಲಿನ ವಿದ್ಯಾರ್ಥಿಗಳ ಸುದೈವ. ವೃತ್ತಿಪರ ಶಿಕ್ಷಣವಾದ ಬಿಎಸ್‌ಸಿ ನರ್ಸಿಂಗ್ ನಾಲ್ಕು ವರ್ಷದ ಶಿಕ್ಷಣವಾಗಿದ್ದು, ಅಂದಿನ ಅಭ್ಯಾಸವನ್ನು ಅಂದೇ ಪೂರ್ಣಗೊಳಿಸಬೇಕು. ವ್ಯಸನಗಳಿಂದ ದೂರವಿದ್ದು, ಆರೋಗ್ಯ ಕಾಯ್ದುಕೊಂಡು ಮಾನವೀಯತೆ, ಸೇವಾ ಮನೋಭಾವನೆಯಿಂದ ಆರೋಗ್ಯ ಸೇವೆ ಮಾಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಭವಿಷ್ಯ ಉಜ್ವಲ ಗೊಳಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಕಾಲೇಜು ಸಂಸ್ಥಾಪಕ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ನೈಪುಣ್ಯತೆ, ಕೌಶಲ್ಯಯುಕ್ತ ನಸ್ ìಗಳ ಕೊರತೆ ಇದ್ದು, ಯುವ ವಿದ್ಯಾರ್ಥಿಗಳಿಗೆ ಗುಣಮಟ್ಟದ ನರ್ಸಿಂಗ್ ಶಿಕ್ಷಣ ಹಾಗೂ ತರಬೇತಿ ನೀಡಿ ವೃತ್ತಿಗೆ ಸಜ್ಜುಗೊಳಿಸುವ ಉದ್ದೇಶ ಸಂಸ್ಥೆಯದ್ದಾಗಿದೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ನಿತ್ಯ ಅಭ್ಯಾಸ ಮಾಡಿ ಬಿಎಸ್‌ಸಿ ನರ್ಸಿಂಗ್ ಪದವಿ ಪೂರ್ಣಗೊಳಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾಗಿ ಮೊದಲ ಬಾರಿಗೆ ಆಯ್ಕೆಯಾದಾಗ ಪದವೀಧರರಿಗೆ ಉದ್ಯೋಗ ಮಾಹಿತಿ ಕೇಂದ್ರ ಆರಂಭಿಸಿ ತಮ್ಮ ಕ್ಷೇತ್ರದ ಎಲ್ಲ ಜಿಲ್ಲೆಗಳಲ್ಲಿ ಉದ್ಯೋಗ ಮೇಳಗಳನ್ನು ಮಾಡಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲಾಗಿದೆ. ನಸಿಂಗ್ ಕಾಲೇಜು ಕಟ್ಟಡ ಹಾಗೂ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಈಗಾಗಲೇ ಜಮೀನು ಖರೀದಿಸಲಾಗಿದೆ. ಅಲ್ಲಿ ನರ್ಸಿಂಗ್ ಕಾಲೇಜು ಸ್ಥಾಪಿಸಲಾಗುವುದು. ಪಾಠ ಬೋಧನೆ ಕೊಠಡಿ, ಅತ್ಯುತ್ತಮ ಗ್ರಂಥಾಲಯ, ನುರಿತ ಶಿಕ್ಷಕ ವರ್ಗವಿದ್ದು, ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಈಗಾಗಲೇ ಎರಡು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಸಮಸ್ಯೆ ಎದುರಾದರೂ ವಿದ್ಯಾರ್ಥಿಗಳು ತಮ್ಮನ್ನು
ಸಂಪರ್ಕಿಸಬೇಕೆಂದು ಹೇಳಿದರು.
ಡಾ| ಸಂಜಯ ಪೀರಾಪೂರ ಮಾತನಾಡಿ, ನರ್ಸಿಂಗ್ ಶಿಕ್ಷಣದಲ್ಲಿ ನೈಪುಣ್ಯತೆ ನೀಡಲು ಕಾಲೇಜು ಸಜ್ಜುಗೊಂಡಿದ್ದು, ಇಲ್ಲಿ ನಾಲ್ಕು ವರ್ಷಗಳ ಕಾಲ ತರಬೇತಿ ಹೊಂದುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ ಎಂದರು.
ಡಾ|ಶ್ವೇತಾ ಸಂಕನೂರ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಪ್ರಾಮಾಣಿಕತೆ, ದೂರದೃಷ್ಟಿಯ ಮೂಲಕ ನರ್ಸಿಂಗ್ ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕೆಂದರು. ಪ್ರಾಚಾರ್ಯೆ ಮೀನಾಕ್ಷಿ ದೇವಾಂಗಮಠ ಮಾತನಾಡಿದರು. ಡಾ| ಪ್ರಕಾಶ ಸಂಕನೂರ, ಸುಭಾಸ ಸಂಕನೂರ, ಅಂದಪ್ಪ ಸಂಕನೂರ, ಡಾ| ಗುರುಪ್ರಸಾದ, ಎನ್.ವಿ. ಜೋಶಿ, ವಿ.ಎಂ. ಹಿರೇಮಠ ಬಿ.ವೈ. ಸೋಮಣ್ಣವರ, ಬಿ.ಎಲ್. ಚೌಹಾಣ್, ಜಗದೀಶ ನರಗುಂದ ಪಿ.ಬಿ. ಬಂಡಿ, ಡಾ|ಆದಿತ್ಯ ಗೋಡಕಿಂಡಿ, ಡಾ|ಸಂದೀಪ ಕವಳಿಕಾಯಿ, ಡಾ|ವಿದ್ಯಾ ಚಿಂತಾಮಣಿ, ಡಾ| ಸತ್ತರಖಾನ್, ಶಿಕ್ಷಕರ ಸಂಘಟನೆ ಅಧ್ಯಕ್ಷರು, ವಿವಿಧ ಕಾಲೇಜುಗಳ ಪ್ರಾಚಾರ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿನ್ಸೆಂಟ್ ಪಾಟೀಲ ಸ್ವಾಗತಿಸಿದರು.