Advertisement

Study: ಅಡಿಕೆ ಕುರಿತು ವೈಜ್ಞಾನಿಕ ಅಧ್ಯಯನ ಉತ್ತಮ ನಿರ್ಧಾರ: ಸೀತಾರಾಮ ರೈ

03:36 AM Dec 14, 2024 | Team Udayavani |

ಪುತ್ತೂರು: ಅಡಿಕೆಯು ಔಷಧೀಯ ಗುಣಗಳನ್ನು ಹೊಂದಿದೆ ಎನ್ನುವುದನ್ನು ಹಲವು ವರ್ಷಗಳಿಂದ ಕ್ಯಾಂಪ್ಕೋ ಸಂಸ್ಥೆಯು ಪುರಾವೆಗಳೊಂದಿಗೆ ಕೇಂದ್ರ ಸರಕಾರ ಹಾಗೂ  ಸುಪ್ರೀಂ ಕೋರ್ಟ್‌ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಇದಕ್ಕೆ ಪೂರಕವಾಗಿ, ಅಡಿಕೆ ಬೆಳೆಯುವ ಪ್ರದೇಶದ ಸಂಸದರ ಪ್ರಯತ್ನದ ಫಲವಾಗಿ ಅಡಿಕೆ ಮತ್ತು ಮಾನವರ ಆರೋಗ್ಯದ ಕುರಿತು ಪುರಾವೆ ಆಧಾರಿತ ಸಂಶೋಧನೆ ನಡೆಸಲು ಕೇಂದ್ರ ಸರಕಾರ ಮುಂದಾಗಿರುವುದು ಉತ್ತಮ ನಿರ್ಧಾರ ಎಂದು ಮಾಸ್‌ ಸಂಸ್ಥೆ ಅಧ್ಯಕ್ಷ ಸೀತಾರಾಮ ರೈ ಸವಣೂರು ಹೇಳಿದ್ದಾರೆ.

Advertisement

ಅಡಿಕೆಯನ್ನು ತಂಬಾಕು ಹಾಗೂ ಇತರ ಪದಾರ್ಥಗಳೊಂದಿಗೆ ಮಿಶ್ರಣ ಮಾಡಿ ಗುಟ್ಕಾದಂತಹ ಉತ್ಪನ್ನಗಳ ಸಂಶೋಧನ ವರದಿಗಳನ್ನು ಗಣನೆಗೆ ತೆಗೆದುಕೊಂಡು ವಿಶ್ವ ಆರೋಗ್ಯ ಸಂಸ್ಥೆ ಅಡಿಕೆಯನ್ನು ಕ್ಯಾನ್ಸರ್‌ಕಾರಕವೆಂದು ಹೇಳಿತ್ತು. ಅಡಿಕೆ ಕೃಷಿಯನ್ನೇ ಅವಲಂಬಿತ ಪ್ರದೇಶಗಳ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಗಡಿ ರಾಜ್ಯಗಳಾದ ಕೇರಳ, ತಮಿಳುನಾಡು, ಆಂದ್ರಪ್ರದೇಶಗಳ ಬೆಳೆಗಾರರಲ್ಲಿ ಆತಂಕ ಮೂಡಿಸಿತ್ತು. ಆದರೆ ಕೇಂದ್ರ ಸರಕಾರ ಸಂಶೋಧನೆಗೆ ಮುಂದಾಗಿರುವ ಪರಿಣಾಮ ಬೆಳೆಗಾರರಿಗೆ ಧೈರ್ಯ ಬಂದಂತಾಗಿದೆ ಎಂದರು.

ಅಡಿಕೆ ಆರೋಗ್ಯಕ್ಕೆ ಹಾನಿಕಾರಕವೆಂಬ ವರದಿಗಳು ಹಲವು ವರ್ಷಗಳಿಂದ ಆಗಾಗ್ಗೆ ಪ್ರಕಟವಾಗುತ್ತಲೇ ಇದ್ದು ಇದಕ್ಕೆ ಪ್ರತಿರೋಧಕ ಪ್ರಯತ್ನಗಳು ನಡೆಯುತ್ತಲೇ ಬಂದಿದೆ. ಈ ನಿಟ್ಟಿನಲ್ಲಿ ದೇಶದ ಎಐಐಎಂಎಸ್‌, ಸಿಎಸ್‌ಐಆರ್‌- ಸಿಸಿಎಂಬಿ, ಐಐಎಸ್‌ಸಿ ಗಳಂತಹ ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳನ್ನು ಆ ಸಲುವಾಗಿ ಕೇಂದ್ರ ಸರಕಾರವು ಬಳಸಿಕೊಳ್ಳಲಿದೆ ಎಂದರು.

ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್‌, ದ.ಕ. ಸಂಸದ ಬ್ರಿಜೇಶ್‌ ಚೌಟ ಅವರು ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾವಿಸಿದ್ದರು. ಕೃಷಿ ಸಚಿವಾಲಯವು ಇದಕ್ಕೆ ಲಿಖಿತ ಉತ್ತರ ನೀಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಸಹ ಸಂಸ್ಥೆ ನಡೆಸಿದ ಸಂಶೋಧನ ವರದಿಯ ಮಾಹಿತಿ ಇದೆ. ಭಾರತೀಯ ಪರಂಪರೆ, ಸಂಸ್ಕೃತಿಯ ಭಾಗವಾಗಿರುವ ಅಡಿಕೆಯ ಔಷಧೀಯ ಗುಣಗಳ ಬಗ್ಗೆ ಸಂಶೋಧನೆ ನಡೆಸಲಾಗುವುದು ಎಂದು ಹೇಳಿದೆ. ಹೀಗಾಗಿ ಅಡಿಕೆ ಕೃಷಿಕರ ಹಿತರಕ್ಷಣೆಗೆ ಪಣತೊಟ್ಟಿರುವ ಕೇಂದ್ರ ಕೃಷಿ ಸಚಿವಾಲಯಕ್ಕೆ, ಕ್ಯಾಂಪ್ಕೋ ಸಂಸ್ಥೆಗೆ, ಅಡಿಕೆ ಬೆಳೆಯುವ ಪ್ರದೇಶದ ಸಂಸದರಿಗೆ ಮಾಸ್‌ ಸಂಸ್ಥೆ ಅಭಿನಂದನೆ ಸಲ್ಲಿಸುತ್ತಿದೆ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.