ಬೆಂಗಳೂರು: ಸನಾತನ ಧರ್ಮ ಹಾಗೂ ಧರ್ಮ ಗ್ರಂಥಗಳು ಮನುಷ್ಯನ ಆತ್ಮಸ್ಥೈರ್ಯ ಇಮ್ಮಡಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಸುರಾನ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ “ಬೆಳ್ಳಿ ಹಬ್ಬ ಆಚರಣೆ ಹಾಗೂ “2ನೇ ಪಾರದರ್ಶಕ ನಾಯಕತ್ವ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ’ ಉದ್ಘಾಟಿಸಿ ಮಾತನಾಡಿದರು.
ಸನಾತನ ಧರ್ಮ ರಾಮಾಯಣ, ಮಹಾಭಾರತ, ವೇದ, ಉಪನಿಷತ್ತುಗಳ ಮಾರ್ಗದಂತೆ ನಡೆಯುತ್ತಿದೆ. ಇವುಗಳ ಅಧ್ಯಯನದಿಂದ ಮನುಷ್ಯನ ಆತ್ಮಶಕ್ತಿ ಹಾಗೂ ಚಿಂತನೆಗಳನ್ನು ಇಮ್ಮಡಿಗೊಳಿಸುತ್ತವೆ ಎಂದರು.
ದೈನಂದಿನ ನಿರ್ವಹಣೆಯಲ್ಲಿ ಯೋಗ, ಆಧ್ಯಾತ್ಮಿಕತೆ, ರಾಜನೀತಿ, ಶಿಕ್ಷಣ ನೀತಿ, ಅರ್ಥಶಾಸ್ತ್ರ, ಸತ್ಯ ಧರ್ಮ ಪಾಲನೆ, ಆಸ್ತಿಕ ಭಾವ, ತಾಳ್ಮೆ ಅಗತ್ಯತೆ ಹೆಚ್ಚಾಗಬೇಕಿದೆ. ಪ್ರತಿಯೊಬ್ಬರಿಗೆ ತನ್ನದೇ ಆದ ಕರ್ತವ್ಯಗಳಿರುತ್ತವೆ.
ಬದುಕಿನಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಳ್ಳುವ ಮೂಲಕ ಆ ಕರ್ತವ್ಯಗಳನ್ನು ಯಶಸ್ವಿಯಾಗಿ ಪೂರೈಸಬಹುದು. ಇನ್ನು ಪ್ರಸ್ತುತ ದಿನಗಳಲ್ಲಿ ಯುವಕರಲ್ಲಿರುವ ಸೃಜನಾತ್ಮಕತೆ ಹಾಗೂ ಅವರಲ್ಲಿರುವ ಹೊಸ ಆಲೋಚನೆಗಳನ್ನು ಸದುಪಯೋಗಪಡಿಸಿಕೊಳ್ಳುತ್ತಿಲ್ಲ ಎಂದು ಬೇಸರಿಸಿದರು.
ಇದೇ ವೇಳೆ ಬೆಳ್ಳೆ ಹಬ್ಬ ಆಚರಣೆ ಅಂಗವಾಗಿ ಕಾಫಿ ಟೇಬಲ್ ಪುಸ್ತಕ ಬಿಡುಗಡೆಗೊಳಿಸಲಾಯಿತು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರಿಗೆ ಜಿ.ಸಿ.ಸುರಾನಾ ಪ್ರಶಸ್ತಿ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್‌ರಿಗೆ ಜಿ.ಸಿ.ಸುರಾನಾ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.