ಬೆಂಗಳೂರು: ಕರ್ನಾಟಕ ಲಲಿತ ಕಲಾ ಅಕಾಡೆಮಿ ಹೊಸ ಆಲೋಚನೆಗೆ ಕೈ ಹಾಕಿದ್ದು ವೃತ್ತಿಪರ ಕಲಾವಿದರಿಗಾಗಿಯೇ “ಸ್ಟುಡಿಯೋ ಕ್ವಾರಂಟೈನ್ ಕಲಾಶಿಬಿರ”ಕ್ಕೆ ಮುಂದಾಗಿದೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ವೃತ್ತಿಪರ ಕಲಾವಿದರಿಗೆ ಚಿತ್ರಕಲಾ ಶಿಬಿರವನ್ನು ಆಯೋಜಿಸಲು ತೀರ್ಮಾನಿಸಿದೆ. ಈಗಾಗಲೇ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಡಿ.ಮಹೇಂದ್ರ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸ್ಥಾಯಿ ಸಮಿತಿಯ ಸಭೆ ನಡೆಸಿದ್ದು ಈ ಬಗ್ಗೆ ಅಕಾಡಮಿ ಸದಸ್ಯರುಗಳಲ್ಲಿ ವಿಸ್ತೃತ ಚರ್ಚೆ ನಡೆಸಿದ್ದಾರೆ.
ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದು, ಸಮ್ಮತಿಸಿದರೆ ಶೀಘ್ರದಲ್ಲೇ ಕಲಾಶಿಬಿರ ನಡೆಯಲಿದೆ. ಸ್ಟುಡಿಯೋ ಕ್ವಾರೆಂಟೈನ್ ಕಲಾಶಿಬಿರದ ಆಯೋಜನೆ ಹಾಗೂ ಕಾರ್ಯಕ್ರಮಕ್ಕೆ ಬೇಕಾಗುವ ಅನುದಾನ ಸೇರಿದಂತೆ ಹಲವು ವಿಷಯಗಳ ಕುರಿತಂತೆ ಸಮಾಲೋಚನೆ ನಡೆಸಿದ್ದಾರೆ. ಸ್ಥಾಯಿ ಸಮಿತಿಯಲ್ಲೂ ಈ ಬಗ್ಗೆ ಒಪ್ಪಿಗೆ ದೊರೆತಿದ್ದು ಇದರ ಜತಗೆ ಯುವ ಕಲಾವಿದರಿಗಾಗಿಯೇ ಹೊಸ ಕಾರ್ಯಕ್ರಮ ರೂಪಿಸುವ ಕುರಿತಂತೆ ಸಮಾಲೋಚನೆಯೂ ನಡೆದಿದೆ.
ರಾಜ್ಯದ ನಾನಾ ಭಾಗಗಳಲ್ಲಿ ಮೂವತ್ತೆ„ದು ವರ್ಷ ಮೇಲ್ಪಟ್ಟ ವೃತ್ತಿಪರ ಕಲಾವಿದರಿದ್ದಾರೆ. ಅವರಲ್ಲಿ ಕೆಲವರನ್ನು ಮಾತ್ರ ಕಲಾಶಿಬಿರಕ್ಕೆ ಆಯ್ಕೆ ಮಾಡಲಾಗುವುದು. ಜಿಲ್ಲಾಮಟ್ಟದಲ್ಲಿ ಕಲಾವಿದರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಶಿಬಿರಕ್ಕೆ ಆಯ್ದೆಯಾದವರು ಮನೆಯಲ್ಲಿಯೇ ಚಿತ್ರವನ್ನು ಬಿಡಿಸಬೇಕಾಗುತ್ತದೆ. ಸಾಮಾನ್ಯವಾಗಿ ಅಕಾಡೆಮಿ ಹಮ್ಮಿಕೊಳ್ಳುವ ಕಲಾಶಿಬಿರಗಳು 4-5 ದಿನಗಳು ನಡೆಯುತ್ತವೆ. ಈ ಶಿಬಿರ ಭಿನ್ನವಾಗಿದ್ದು, ಒಂದುವಾರ ನಡೆಯಲಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಡಿ.ಮಹೇಂದ್ರ ಹೇಳಿದ್ದಾರೆ.
ಶಿಬಿರಕ್ಕೆ ಆಯ್ಕೆಯಾದ ಕಲಾವಿದರಿಗೆ ಆರಂಭ ದಲ್ಲಿಯೇ ಅರ್ಧದಷ್ಟು ಗೌರವ ಧನ ನೀಡಲಾಗುವುದು. ಉತ್ತಮ ಚಿತ್ರಬಿಡಿಸಿದ ಕಲಾವಿದರಿಗೆ ನಗದು ನೀಡುವ ಆಲೋಚನೆ ಇದೆ. ಜಿಲ್ಲೆಗೆ ಇಬ್ಬರು ವೃತ್ತಿ ಪರ ಕಲಾವಿದರನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಕರ್ನಾಟಕ ಲಲಿತ ಕಲಾ ಅಕಾಡೆಮಿಯ ಬಳಕೆ ಆಗದೆ ಇರುವ ಅನುದಾನ ಈ ಕಲಾಶಿಬಿರಕ್ಕೆ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಿದ್ದು ಸರ್ಕಾರದ ನಿರ್ಧಾರಕ್ಕಾಗಿ ಕಾಯಲಾಗುತ್ತಿದೆ ಎಂದು ಅಕಾಡೆಮಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಲಾಕ್‌ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ಲಲಿತಕಲಾ ಅಕಾಡೆಮಿ ಹೊಸ ರೂಪದ ಯೋಜನೆಗಳನ್ನು ರೂಪಿಸುತ್ತಿದೆ. ವೃತ್ತಿಪರ ಕಲಾವಿದರಿಗಾಗಿಯೇ ಸ್ಟುಡಿಯೋ ಕ್ವಾರಂಟೈನ್ ಕಲಾ ಶಿಬಿರ ಆಯೋಜಿಸಿದ್ದು, ಕಲಾವಿದರು ಅವರ ಮನೆಯಲ್ಲಿಯೇ ಚಿತ್ರ ಬರೆಯುವ ಶಿಬಿರ ಇದಾಗಿದೆ.
-ಡಿ.ಮಹೇಂದ್ರ, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ
* ದೇವೇಶ ಸೂರಗುಪ್ಪ