Advertisement

ರೆಸ್ಟೋರೆಂಟ್‌ಗಳಲ್ಲಿ ನಿಗಾ; ಬ್ಯಾಕ್ಟೀರಿಯಾ ಹರಡುವಿಕೆ ಎಚ್ಚರ ಅಗತ್ಯ

10:09 AM May 06, 2022 | Team Udayavani |

ಮಹಾನಗರ: ಶವರ್ಮ ಸೇವಿಸಿದ ಪರಿಣಾಮ ನೆರೆಯ ಕಾಸರಗೋಡು ಜಿಲ್ಲೆಯ ವಿದ್ಯಾರ್ಥಿ ಮೃತಪಟ್ಟು, 50 ಕ್ಕೂ ಹೆಚ್ಚಿನ ಮಂದಿ ಅಸ್ವಸ್ಥಗೊಂಡ ಬೆನ್ನಲ್ಲೇ ನಗರದ ಶವರ್ಮ ತಯಾರಿಕಾ ರೆಸ್ಟೋರೆಂಟ್‌ಗಳಲ್ಲಿಯೂ ವಿಶೇಷ ನಿಗಾ ವಹಿಸಲು ಮಹಾನಗರ ಪಾಲಿಕೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಮುಂದಾಗಿದೆ.

Advertisement

ನಗರದಲ್ಲಿಯೂ ಅನೇಕ ಮಾಂಸಾಹಾರಿ ರೆಸ್ಟೋರೆಂಟ್‌ಗಳಲ್ಲಿ ಶವರ್ಮ ದೊರೆ ಯುತ್ತದೆ. ಅಲ್ಲದೇ ಕೇವಲ ಶವರ್ಮಕ್ಕೆ ಮೀಸಲಿಟ್ಟ ಕೆಲವೊಂದು ಅಂಗಡಿಗಳಿವೆ. ಇಲ್ಲಿ ಆಹಾರ ಸುರಕ್ಷತೆಗೆ ಯಾವ ರೀತಿಯಲ್ಲಿ ಮಹತ್ವ ನೀಡಲಾಗುತ್ತದೆ ಎಂಬ ಬಗ್ಗೆ ಪಾಲಿಕೆ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ. ಪರವಾನಿಗೆ ಪಡೆಯದೆ ಕಾರ್ಯಾಚರಿಸುವ ಅಂಗಡಿಗಳು, ಗುಣಮಟ್ಟದ ಆಹಾರ ನೀಡದ ಶಾಪ್‌ಗಳಿಗೆ ಎಚ್ಚರಿಕೆ ನೀಡಿ, ಅಂತಹ ಅಂಗಡಿಗಳ ವಿರುದ್ಧ ಕಠಿನ ಕ್ರಮಕ್ಕೆ ನಿರ್ಧರಿಸಲಾಗಿದೆ. ಕಾಸರಗೋಡಿನಲ್ಲಿ ಶವರ್ಮ ಸೇವಿಸಿದ ವಿದ್ಯಾರ್ಥಿನಿ ಸಾವಿಗೆ ವಿಷ ಪದಾರ್ಥ ಸೇವನೆಯೇ ಕಾರಣ ಎಂದು ಪರಿಯಾರಂ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಪೋಸ್ಟ್‌ಮಾರ್ಟಂ ವರದಿಯಲ್ಲಿ ಈಗಾಗಲೇ ತಿಳಿಸಲಾಗಿದೆ. ನಾಲ್ವರು ಮಕ್ಕಳಿಗೆ ಶಿಗೆಲ್ಲಾ ಸೋಂಕು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಕ್ಟೀರಿಯಾ ಮುಕ್ತ ಆಹಾರ ಸೇವೆನೆ ಕುರಿತಂತೆಯೂ ಸಾರ್ವಜನಿಕರಲ್ಲಿ ಅರಿವು ಮೂಡುವ ಅಗತ್ಯವಿದೆ.

ಬ್ಯಾಕ್ಟೀರಿಯಾ ಕುರಿತು ಎಚ್ಚರ ಇರಲಿ

ಕರಾವಳಿಯಲ್ಲಿ ಮಳೆ ಬಿರುಸು ಪಡೆಯು ತ್ತಿದ್ದು, ನಾವು ತಿನ್ನುವಂತಹ ಆಹಾರದಲ್ಲಿ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗುವ ಸಂಭವ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿಕೊಳ್ಳುವುದು ಅತೀ ಮುಖ್ಯ. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಮೈಕ್ರೋಬಯೋಲಜಿ ವಿಭಾಗದ ಮುಖ್ಯಸ್ಥೆ ಡಾ| ಸುಚಿತ್ರಾ ಶೆಣೈ ಅವರು ‘ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ನೀರಿನಲ್ಲಿ ಹೆಚ್ಚಾಗಿ ಬ್ಯಾಕ್ಟೀರಿಯಾಗಳು ಹರಡುತ್ತದೆ. ಮಲ, ಮೂತ್ರದಿಂದ ಬ್ಯಾಕ್ಟೀರಿಯಾ ಪ್ರಸರಣ ಹೆಚ್ಚಾಗಿರುವ ಹಿನ್ನೆಲೆಯ ವಿಸರ್ಜನೆಯ ಬಳಿಕ ಸಾಬೂನಿನಿಂದ ಚೆನ್ನಾಗಿ ಕೈ ತೊಳೆಯಬೇಕು. ತಂಪಾದ ನೀರು, ಪಾನೀಯ ಸೇವನೆಯಿಂದ ದೂರವಿದ್ದು, ಬಿಸಿ ನೀರಿಗೆ ಆದ್ಯತೆ ನೀಡಬೇಕು. ಬೇಯಿಸಿದ ಬಿಸಿಯಾದ ಆಹಾರ ಸೇವೆನೆ ಮಾಡುವುದರಿಂದ ಬ್ಯಾಕ್ಟೀರಿಯಾ ಹರಡುವುದನ್ನು ಕಡಿಮೆ ಮಾಡಲು ಸಾಧ್ಯ. ಜ್ವರ, ರಕ್ತ ಸಿಕ್ತ ಮಲಬದ್ಧತೆ, ಹೊಟ್ಟೆನೋವು, ವಾಂತಿ ಬೇಧಿ, ಆಯಾಸ ಕಂಡುಬಂದರೆ ತತ್‌ಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು. ಹಣ್ಣು-ತರಕಾರಿಗಳನ್ನು ಚೆನ್ನಾಗಿ ತೊಳೆದು ತಿನ್ನಬೇಕು ಎನ್ನುತ್ತಾರೆ.

ಬೇಸಗೆ ಎಂದಾಕ್ಷಣ ತಂಪು ಪಾನೀಯ ಸೇವನೆ ಸಾಮಾನ್ಯವಾಗಿದೆ. ಕೆಲವೊಂದು ಬಾರಿ ಅತಿಯಾದ ತಂಪು ಪಾನೀಯ ಸೇವನೆ ದೇಹದ ಅನಾರೋಗ್ಯಕ್ಕೆ ಕಾರಣವಾಗಬಹುದು.

Advertisement

ಈ ಹಿನ್ನೆಲೆಯಲ್ಲಿ ಎಚ್ಚರಿಕೆ ಅಗತ್ಯ. ಹೆಚ್ಚಾಗಿ ತಂಪು ಪಾನೀಯ ಸೇವನೆಯು ಫ್ರಕ್ಟೋಸ್‌ ಮತ್ತು ಗ್ಲುಕೋಸ್‌ ಮಟ್ಟವನ್ನು ಹೆಚ್ಚಿಸುತ್ತದೆ. ಸಕ್ಕರೆ ಅಂಶ ದೇಹದಲ್ಲಿ ಹೆಚ್ಚಾಗಿ ಟೈಪ್‌-2 ಮಧುಮೇಹ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇದೆ. ಇನ್ನು, ಸಿಹಿ ಅಂಶದಿಂದ ಬಾಯಿಯಲ್ಲಿ ಬಹುಬೇಗ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು.

ಆಹಾರ ಸುರಕ್ಷತೆ ಅರಿವು

ಕಾಸರಗೋಡು ಜಿಲ್ಲೆಯಲ್ಲಿ ಶವರ್ಮ ಸೇವಿಸಿ ವಿದ್ಯಾರ್ಥಿ ಮೃತಪಟ್ಟ ಪರಿಣಾಮ, ನಗರದ ಶವರ್ಮ ತಯಾರಿಕೆ ಶಾಪ್‌ಗಳಲ್ಲಿಯೂ ನಿಗಾ ಇರಿಸಲಾಗಿದೆ. ಅಲ್ಲಿನ ನೌಕರರಿಗೆ ಆಹಾರ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಗುಣಮಟ್ಟದ ಆಹಾರ ನೀಡದ ಶಾಪ್‌ಗಳಿಗೆ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ತೆರಳಿ ದಂಡ ವಿಧಿಸಲು ನಿರ್ಧರಿಸಲಾಗಿದೆ. – ಅಕ್ಷಯ್‌ ಶ್ರೀಧರ್‌, ಪಾಲಿಕೆ ಆಯುಕ್ತರು.

Advertisement

Udayavani is now on Telegram. Click here to join our channel and stay updated with the latest news.

Next