ಚಿಕ್ಕೋಡಿ: ಕೋವಿಡ್ ಲಾಕಡೌನ್ ಮುಗಿದು ಎಳೆಂಟು ತಿಂಗಳು ಕಳೆದರೂ ಸಾರಿಗೆ ಸಂಸ್ಥೆಯ ಬಸ್‌ಗಳು ಪೂರ್ನ ಪ್ರಮಾಣದಲ್ಲಿ ಸಂಚರಿಸುತ್ತಿಲ್ಲ. ಗ್ರಾಮೀಣ ಭಾಗದ ಜನರಿಗೆ ಬಸ್ ಸೇವೆ ಮರಿಚಿಕೆಯಾಗುತ್ತಿದೆ. ಶಾಲಾ-ಕಾಲೇಜು ಆರಂಭವಾದರೂ ಸಮರ್ಪಕ ಬಸ್ ಸೇವೆ ಇಲ್ಲದೇ ಇರುವುದರಿಂದ ಚಿಕ್ಕೋಡಿ ಭಾಗದಲ್ಲಿವಿದ್ಯಾರ್ಥಿಗಳು, ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಯಬಾಗ ಘಟಕದಿಂದ ಕಳೆದ ಏಳೆಂಟು ವರ್ಷಗಳಿಂದ ಪ್ರತಿನಿತ್ಯ ಬೆಳಿಗ್ಗೆ ಹಾಗೂ ಸಾಯಂಕಾಲಸಂಚರಿಸುವ ರಾಯಬಾಗ-ಭೋಜ ಬಸ್‌ನ್ನು ಕಳೆದಕೆಲವು ದಿನಗಳಿಂದ ಇಲ್ಲಿನ ಘಟಕದ ವ್ಯವಸ್ಥಾಪಕರುಆದಾಯದ ನೆಪವೊಡ್ಡಿ ಸ್ಥಗಿತಗೊಳಿಸಿದ್ದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಿದ್ಯಾರ್ಥಿಗಳು, ನೌಕರರಿಗೆ ಹಾಗೂ ಗ್ರಾಮೀಣ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ.
ರಾಯಬಾಗ-ಭೋಜ ಬಸ್ ರಾಯಬಾಗದಿಂದ್ ಯಡ್ರಾಂವ, ನಸಲಾಪೂರ, ಅಂಕಲಿ, ನನದಿ ಫ್ಯಾಕ್ಟರಿ,ಮಲಿಕವಾಡ, ಯಕ್ಸಂಬಾ, ಸದಲಗಾ, ಶಮನೇವಾಡಿ, ಬೇಡಿಕಿಹಾಳ, ಮಾರ್ಗವಾಗಿ ಭೋಜ ಗ್ರಾಮಕ್ಕೆ ಸಂಚರಿಸುವ ಏಕೈಕ ಬಸ್ ಆಗಿದೆ. ಮಾಂಗೂರ, ಕಾರದಗಾ, ಬಾರವಾಡ, ಕುನ್ನೂರ ಹಾಗೂ ಚಿಕ್ಕೋಡಿ, ನಿಪ್ಪಾಣಿ ಭಾಗದ ಗ್ರಾಮೀಣ ಪ್ರಯಾಣಿಕರಿಗೆ ರಾಯಬಾಗಕ್ಕೆ ಬರಲು ಈ ಬಸ್ ಅತ್ಯಂತ ಅನುಕೂಲವಾಗಿದೆ. ಅಲ್ಲದೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ನೌಕರರಿಗೆ ಸರಿಯಾದ ಸಮಯಕ್ಕೆತಲುಪಲು ಇದೇ ಬಸ್‌ನಿಂದ ಅನುಕೂಲವಾಗಿದೆ. ಸಾರಿಗೆ ಅಧಿಕಾರಿಗಳು ಗಮನ ಹರಿಸಿ ರಾಯಬಾಗ ಘಟಕದಿಂದ ರಾಯಬಾಗ-ಭೋಜ ಬಸ್ ಸೇವೆ ಎಂದಿನಂತೆ ಮತ್ತೆ ಆರಂಭಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಯಕ್ಸಂಬಾಗೆ ವಿಶೇಷ ಬಸ್ ಬಿಡಲು ಒತ್ತಾಯ:
ಚಿಕ್ಕೋಡಿ ತಾಲೂಕಿನ ದೊಡ್ಡ ಪಟ್ಟಣ ಯಕ್ಸಂಬಾ. ಪ್ರತಿ ನಿತ್ಯ ನೂರಾರು ವಿದ್ಯಾರ್ಥಿಗಳು ಯಕ್ಸಂಬಾದಿಂದ ಚಿಕ್ಕೋಡಿ ನಗರಕ್ಕೆ ಶಾಲಾ-ಕಾಲೇಜಿಗೆ ಬರುತ್ತಾರೆ.ಬೆಳಗ್ಗೆ ಯಾವುದೇ ಬಸ್ ಸೇವೆ ಇಲ್ಲದೇ ಇರುವುದರಿಂದ ಯಕ್ಸಂಬಾ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪರದಾಡುವಂತಾಗಿದೆ.ಚಿಕ್ಕೋಡಿ-ಸದಲಗಾ ಬಸ್ ಇದ್ದರೂ ಸಹ ಸದಲಗಾ ಪಟ್ಟಣದಿಂದ ಬಸ್ ತುಂಬಿ ಬರುತ್ತದೆ. ಯಕ್ಸಂಬಾ ವಿದ್ಯಾರ್ಥಿಗಳಿಗೆ ಬಸ್ ಏರಲು ಸ್ಥಳವೇ ಇರುವುದಿಲ್ಲ.ಹುಡುಗರು ಹೇಗಾದರೂ ಮಾಡಿ ಬಸ್ ಬಾಗಿಲಲ್ಲಿ ನಿಂತು ಬರುತ್ತಾರೆ. ಆದರೆ ವಿದ್ಯಾರ್ಥಿನಿಯರಿಗೆ ಭಾರಿಕಷ್ಟವಾಗುತ್ತಿದೆ. ಹೀಗಾಗಿ ಯಕ್ಸಂಬಾ ಪಟ್ಟಣಕ್ಕೆ ಪ್ರತಿನಿತ್ಯ ಬೆಳಿಗ್ಗೆ ವಿಶೇಷ ಬಸ್ ಆರಂಭಿಸಬೇಕೆಂದು ಯಕ್ಸಂಬಾ ಪಟ್ಟಣದ ಸಾರ್ವಜನಿಕರು ಆಗ್ರಹಿಸಿದರು.
ರಾಯಬಾಗ-ಭೋಜ ಮಾರ್ಗದ ಬಸ್ ಕೆಲವು ದಿನಗಳಿಂದ ಬಂದ್ ಆಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ವಿದ್ಯಾರ್ಥಿಗಳು, ನೌಕರರು ಮತ್ತು ಪ್ರಯಾಣಿಕರಿಗೆ ತುಂಬಾತೊಂದರೆ ಆಗಿದೆ. ಸಾರಿಗೆ ಅಧಿಕಾರಿಗಳು ಗಮನ ಹರಿಸಿ ಬಸ್ ಸೇವೆ ಆರಂಭಿಸಬೇಕು. –
ಬಂಟು ಮಕಾನದಾರ, ಭೋಜ ಗ್ರಾಮಸ್ಥ
ಸದಲಗಾ ಕಡೆಯಿಂದ ಬಸ್ ತುಂಬಿಕೊಂಡು ಬರುವುದರಿಂದ ಯಕ್ಸಂಬಾ ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ. ಎಷ್ಟೋ ಸಲ ಬಸ್ ಹತ್ತಯಲು ಸಿಗದೇ ಮರಳಿ ಮನೆಗೆ ಹೋಗಿದ್ದಾರೆ. ಯಕ್ಸಂಬಾ ಪಟ್ಟಣಕ್ಕೆ ಬೆಳಿಗ್ಗೆ ವಿಶೇಷ ಬಸ್ ಆರಂಭಿಸಿ ವಿದ್ಯಾರ್ಥಿಗಳ ಕಷ್ಟ ತಪ್ಪಿಸಬೇಕು.
-ಸರೋಜನಿ, ವಿದ್ಯಾರ್ಥಿನಿ
ರಾಯಬಾಗ-ಭೋಜ ಬಸ್ ಸೇವೆ ಆರಂಭಿಸಬೇಕೆಂದು ಸಾರ್ವಜನಿಕರಿಂದ ಬೇಡಿಕೆ ಬಂದಿದೆ. ಶೀಘ್ರವಾಗಿ ಬಸ್ ಸೇವೆ ಆರಂಭಿಸಲಾಗುತ್ತದೆ.-
ಶಶಿಧರ ವಿ.ಎಂ., ವಿಭಾಗೀಯ ನಿಯಂತ್ರಣಾಧಿಕಾರಿ, ವಾ.ಕ.ರ.ಸಾ.ಸಂಸ್ಥೆ, ಚಿಕ್ಕೋಡಿ
-ಮಹಾದೇವ ಪೂಜೇರಿ