ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ದೂರಶಿಕ್ಷಣ ವಿಭಾಗಕ್ಕೆ ಪ್ರವೇಶ ಪಡೆಯುವವರ ಪ್ರಮಾಣ ಕಳೆದೆರಡು ವರ್ಷಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ಪ್ರತಿ ವರ್ಷ ಅಧಿಸೂಚನೆ ಹೊರಡಿಸಿದ ಮೊದಲ ವಾರದಲ್ಲಿ ಕನಿಷ್ಠ ಒಂದು ಸಾವಿರ ಅರ್ಜಿಗಳನ್ನು ಸ್ವೀಕರಿಸುತಿದ್ದ ವಿವಿ ದೂರಶಿಕ್ಷಣ ವಿಭಾಗ, ಈ ಬಾರಿ ಸ್ವೀಕರಿಸಿರುವುದು ಕೇವಲ 20-25 ಅರ್ಜಿ!
2018 -19ನೇ ಸಾಲಿನಲ್ಲಿ ಯುಜಿಸಿ (ವಿಶ್ವವಿದ್ಯಾಲಯ ಧನಸಹಾಯ ಆಯೋಗ) ಮರು ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ಎರಡನೇ ವರ್ಷ 5 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಯಾಗಿವೆ. ಆದರೆ 2017- 18ನೇ ಸಾಲಿನಿಂದ ಆರಂಭವಾಗಿರುವ ಬೆಂಗಳೂರು ವಿವಿ ದೂರಶಿಕ್ಷಣ ವಿಭಾಗಕ್ಕೆ ಸಲ್ಲಿಕೆಯಾಗುತ್ತಿದ್ದ ಅರ್ಜಿಗಳ ಸಂಖ್ಯೆಯಲ್ಲಿ ಈ ಬಾರಿ ಮೂರು
ಸಾವಿರಕ್ಕೂ ಅಧಿಕ ಕುಸಿತ ಕಂಡುಬಂದಿದೆ. ದೂರ ಶಿಕ್ಷಣ ವಿಭಾಗ ಯುಜಿಸಿಯಿಂದ ಮಾನ್ಯತೆ ಪಡೆದ ಮೊದಲ ವರ್ಷ 4,500,
ಎರಡನೇ ವರ್ಷ ಐದು ಸಾವಿರ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ, ಪ್ರಸಕ್ತ ಸಾಲಿನಲ್ಲಿ ಅರ್ಜಿಗಳ ಸಂಖ್ಯೆ ಒಂದು ಸಾವಿರಕ್ಕೆ ಕುಸಿಯುವ ಲಕ್ಷಣಗಳಿವೆ. ವಿಭಾಗ ಆರಂಭವಾಗಿ ಮೂರು ವರ್ಷ ಕಳೆದರೂ ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಪಠ್ಯ ಪುಸ್ತಕಗಳು ಪೂರೈಕೆಯಾಗುತ್ತಿಲ್ಲ. ಸರಿಯಾದ ಸಮಯಕ್ಕೆ ಫಲಿತಾಂಶ ಪ್ರಕಟಿಸುತ್ತಿಲ್ಲ. ಸ್ಟಡಿ ಸೆಂಟರ್‌ಗಳಲ್ಲಿ ಬೋಧನೆ ಚಟುವಟಿಕೆಗಳಿಲ್ಲ ಎಂದು ವಿದ್ಯಾರ್ಥಿಗಳು ವಿವಿ ಕುಲಪತಿಗಳಿಗೆ ದೂರು ಸಲ್ಲಿಸುತ್ತಿದ್ದಾರೆ. ಆದರೂ ಸಮಸ್ಯೆ ಬಗೆಹರಿಸಲು ಆಡಳಿತ ಮಂಡಳಿ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ಬಿಕಾಂಗೆ ಕೇವಲ ಒಂದು ಅರ್ಜಿ: ಬೆಂಗಳೂರು ವಿವಿ ದೂರಶಿಕ್ಷಣ ವಿಭಾಗದಲ್ಲಿ ಬಿಎ, ಬಿಕಾಂ, ಬಿಬಿಎ, ಎಂಎ, ಎಂಕಾಂ, ಎಂಎಸ್ಸಿ ಗಣಿತ, ಪಿಜಿ ಡಿಪ್ಲೊಮಾ, ಸರ್ಟಿμಕೇಟ್ ಕೋರ್ಸ್‌ಗಳು ಸೇರಿ 15ಕ್ಕೂ ಅಧಿಕ ಕೋರ್ಸ್‌ಗಳಿವೆ. ಈ ಪೈಕಿ ಬಿಕಾಂಗೆ ಪ್ರತಿ ವರ್ಷ ಕನಿಷ್ಠ 1500 ಅರ್ಜಿಗಳು ಬರುತಿದ್ದವು. ಆದರೆ, ಪ್ರಸಕ್ತ ಸಾಲಿನಲ್ಲಿ ಈವರೆಗೆ ಬಂದಿರುವುದು ಒಂದೇ ಒಂದು ಅರ್ಜಿ. ಉಳಿದಂತೆ ಬಿಎ ಮತ್ತು ಬಿಬಿಎ ಕೋರ್ಸ್‌ಗಳಿಗೆ 500-600 ಅರ್ಜಿಗಳು ಸಲ್ಲಿಕೆಯಾಗಿವೆ.
ದೂರ ಶಿಕ್ಷಣ ವಿಭಾಗದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡುತ್ತಿಲ್ಲ. ಪ್ರವೇಶಾತಿ ವೇಳೆ ಪುಸ್ತಕಗಳಿಗೆ ಪ್ರತ್ಯೇಕವಾಗಿ ಹಣ ಪಡೆಯುತ್ತಾರೆ. ಆದರೆ, ಪರೀಕ್ಷೆ ಹತ್ತಿರ ಬಂದರೂ ಪುಸ್ತಕಗಳು ನಮ್ಮ ಕೈ ಸೇರುತ್ತಿಲ್ಲ. ಸ್ಟಡಿ ಸೆಂಟರ್‌ಗಳಲ್ಲಿ ತರಗತಿಗಳು ನಡೆಯುತ್ತಿಲ್ಲ.
● ಕಿರಣ್, ಬೆಂ.ವಿವಿ ದೂರ ಶಿಕ್ಷಣ ವಿದ್ಯಾರ್ಥಿ
ದೂರ ಶಿಕ್ಷಣ ವಿಭಾಗದ ಪ್ರವೇಶಾತಿ ಸಂಖ್ಯೆ ಗಣನೀಯವಾಗಿ ಕುಸಿದಿದೆ. ವಿಭಾಗದ ಆಡಳಿತ ವೈಫಲ್ಯವೇ ಇದಕ್ಕೆ ಕಾರಣ. ಅರ್ಜಿ ಸಲ್ಲಿಸಲು ಇನ್ನೂ 15 ದಿನ ಅವಕಾಶವಿದ್ದು, ಆ ವೇಳೆಗೆ ಅರ್ಜಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.
. ಪ್ರೊ.ಕೆ.ಆರ್.ವೇಣುಗೋಪಾಲ್, ಬೆಂ.ವಿವಿ ಕುಲಪತಿ
● ಲೋಕೇಶ್ ರಾಮ್