Advertisement

Magadi: ಶಿಕ್ಷಕ ಛಡಿ ಏಟು ಬಾರಿಸಿದ ಪರಿಣಾಮ ವಿದ್ಯಾರ್ಥಿಯ ಭುಜದ ಮೂಳೆ ಮುರಿತ

01:30 PM Jan 12, 2024 | Team Udayavani |

ಮಾಗಡಿ: ಶಿಕ್ಷಕರೊಬ್ಬರು 14 ಛಡಿ ಏಟು ಬಾರಿಸಿದ ಪರಿಣಾಮ ವಿದ್ಯಾರ್ಥಿಯ ಬಲಗೈ ಭುಜದ ಮೂಳೆ ಮುರಿದಿದ್ದು ಗಾಯಾಳುವನ್ನು ಕುಣಿಗಲ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಮಾಗಡಿ ತಾಲೂಕಿನ ಜಮಾಜ್ ಸಾಬರ ಪಾಳ್ಯದ ಬಳಿಯ ಶಾಲೆಯೊಂದರ 9ನೇ ತರಗತಿ ವಿದ್ಯಾರ್ಥಿ ಅಭಿಷೇಕ್ ಗೌಡ ಶಿಕ್ಷೆಗೊಳಪಟ್ಟ ವಿದ್ಯಾರ್ಥಿ.

ಗಣಿತ ವಿಷಯಕ್ಕೆ ಸಂಬಂಧಪಟ್ಟಂತೆ ಸರಿಯಾಗಿ ಉತ್ತರ ಹೇಳದ ಕಾರಣ ಶಿಕ್ಷಕ ಸೈಯದ್ ಮೂವಿ ಛಡಿಯಿಂದ ವಿದ್ಯಾರ್ಥಿಗೆ 14 ಏಟು ಹೊಡೆಯುತ್ತಿದ್ದಾಗ ಬಲವಾದ ಪೆಟ್ಟು ಬಿದ್ದು ವಿದ್ಯಾರ್ಥಿಯ ಬಲ ಭುಜದ ಮೂಳೆ ಮುರಿದಿದ್ದು, ಬಳಿಕ ಶಿಕ್ಷಕರೇ ಆತನನ್ನು ಆಯುರ್ವೇದಿಕ್ ಪಟ್ಟು ಹಾಕಿಸಿ ಮನೆಗೆ ಕಳಿಸಿದ್ದಾರೆ.

ಆದರೆ ವಿದ್ಯಾರ್ಥಿ ನೋವಿನಿಂದ ನರಳುತ್ತಿದ್ದಾಗ ಪೋಷಕರು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಕ್ಸರೇ ಸ್ಕ್ಯಾನಿಂಗ್ ಮಾಡಿಸಿದ್ದು, ಅದರಲ್ಲಿ ಕೈ ಮೂಳೆ ಮುರಿದಿರುವುದು ದೃಢವಾಗಿದೆ.

ಈ ಸಂಬಂಧ ಪೋಷಕರು ವಿದ್ಯಾ ಸಂಸ್ಥೆಯ ಮಂಡಳಿ ಹಾಗೂ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಚಿಕ್ಕ ಮುದುಗೆರೆ ಬಳಿ ಶಾಲೆಯ ವ್ಯಾನ್ ತಡೆದು ಪ್ರತಿಭಟನೆ ನಡೆಸಿದರು.

Advertisement

ಸ್ಥಳಕ್ಕೆ ಮಂಡಳಿ ಕಾರ್ಯದರ್ಶಿ ಹರೀಶ್ ಹಾಗೂ ಮುಖ್ಯಶಿಕ್ಷಕ ನಾಗೇಂದ್ರ ಭೇಟಿ ನೀಡಿದಾಗ ಆಡಳಿತ ಮಂಡಳಿ ಮತ್ತು ಶಿಕ್ಷಕರ ಹಾಗೂ ಪೋಷಕರ ನಡುವೆ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿತು.

ಕುದೂರು ಪಿಎಸ್ಐ ಸ್ಥಳಕ್ಕೆ ಭೇಟಿ ನೀಡಿ ಇಬ್ಬರನ್ನು ಮನವೊಲಿಸಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ದೂರು ನೀಡುವಂತೆ ಅವರಿಗೆ ಸೂಚನೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ವಿದ್ಯಾರ್ಥಿಯ ತಂದೆ ಕೃಷ್ಣಪ್ಪಗೌಡ, ತಾಯಿ ಪವಿತ್ರ ಹಾಗೂ ಗ್ರಾಮಸ್ಥರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು.

ವಿದ್ಯಾರ್ಥಿಗೆ ಥಳಿಸಿದ ಶಿಕ್ಷಕರನ್ನು ಸಂಸ್ಥೆ ವತಿಯಿಂದ ತೆಗೆದುಹಾಕುವಂತೆ ಪಟ್ಟು ಹಿಡಿದರು. ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ಆಡಳಿತ ಮಂಡಳಿ ಪೋಷಕರಿಗೆ ಸಮಾಧಾನದ ಮಾತುಗಳನ್ನಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next