ಕುರುಗೋಡು: ಎಐಡಿಎಸ್ಓ ವಿದ್ಯಾರ್ಥಿ ಸಂಘಟನೆ ವತಿಯಿಂದ ಸರ್ಕಾರಿ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ತಯಾರಾಗಲು ಸಮರ್ಪಕ ಸಮಯ ನೀಡಿ, ಪರೀಕ್ಷಾ ದಿನಾಂಕ ನಿಗದಿ ಮಾಡಲು ಆಗ್ರಹಿಸಿ ಕುರುಗೋಡು ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ಮೂಲಕ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿ ಸಲ್ಲಿಸಲ್ಲಿಸಿದರು.
ಈ ಸಂದರ್ಭದಲ್ಲಿ ಎಐಡಿಎಸ್ಓ ಜಿಲ್ಲಾ ಸೇಕ್ರೆಟರಿಯಟ್ ಸದಸ್ಯರಾದ ಶಾಂತಿ ಮಾತನಾಡಿ, ಈಗಾಗಲೇ ಕೊರೋನಾ ಸಾಂಕ್ರಾಮಿಕದ ಮೊದಲನೇಯ ಮತ್ತು ಎರಡನೇಯ ಅಲೆಯಿಂದಾಗಿ ಕಳೆದ ಶೈಕ್ಷಣಿಕ ವರ್ಷವು ಗೊಂದಲದಲ್ಲೇ ಕಳೆದುಹೋಗಿದೆ. ಈ ವರ್ಷವು ಕೂಡ ಶೈಕ್ಷಣಿಕ ಚಟುವಟಿಕೆಗಳು ಸಮರ್ಪಕವಾಗಿ ನಡೆಯದಿರುವುದರಿಂದ ವಿದ್ಯಾರ್ಥಿಗಳು ಅತಂತ್ರ ಪರಿಸ್ಥಿತಿಗೆ ತಳ್ಳಲ್ಪಟ್ಟಿದ್ದಾರೆ ಎಂದರು.
ಒಂದು ಕಡೆ ರಾಜ್ಯ ಸರ್ಕಾರ ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಯಾವುದೇ ಪೂವ೯ಭಾವಿ ಸಿದ್ಧತೆಯಿಲ್ಲದೆ ಹಠಾತ್ತನೆ 4 ವರ್ಷದ ಪದವಿ ಜಾರಿಗೊಳಿಸಿರುವುದು ಹಾಗೂ ವಿಷಯ ಹಂಚಿಕೆಯ ಗೊಂದಲದಲ್ಲೇ ವಿದ್ಯಾರ್ಥಿಗಳ ಸುಮಾರು ತಿಂಗಳ ಸಮಯ ಕಳೆದುಹೋಗಿದೆ. ವಿದ್ಯಾರ್ಥಿಗಳಿಗೆ ಈ ವರ್ಷದ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳು ಬಂದಿರುವುದು ಬಹಳ ತಡವಾಗಿದೆ. ಇನ್ನೊಂದು ಕಡೆ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಗಳೊಂದಿಗೆ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ರಾಜ್ಯವ್ಯಾಪಿ ತರಗತಿಗಳನ್ನು ಬಹಿಷ್ಕರಿಸಿ ಹೋರಾಟದಲ್ಲಿ ತೊಡಗಿದ್ದಾರೆ. ಈಗಾಗಲೇ ತಮ್ಮ ಉಪನ್ಯಾಸಕರ ಈ ಹೋರಾಟಕ್ಕೆ ಬೆಂಬಲಿಸಿ ರಾಜ್ಯವ್ಯಾಪಿ ವಿದ್ಯಾರ್ಥಿಗಳು ಪ್ರತಿಭಟನೆಗಳನ್ನು ಕೂಡ ನಡೆಸಿದ್ದಾರೆ. ಈ ಎಲ್ಲ ಕಾರಣದಿಂದಾಗಿ ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಪಠ್ಯಕ್ರಮದ ಶೇಕಡ 30% ರಿಂದ 50%ರಷ್ಟು ಮಾತ್ರ ಪಾಠಗಳು ನಡೆದಿವೆ ಎಂದರು.
ಕಳೆದ ತಿಂಗಳಿನಿಂದಲೂ ತರಗತಿಗಳು ನಡೆಯದೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ಎಲ್ಲ ಕಾಲೇಜುಗಳಲ್ಲಿ ಮೊದಲನೇ ಆಂತರಿಕ ಪರೀಕ್ಷೆಗಳು ಮುಗಿದು, ಫೆಬ್ರವರಿ ಕೊನೆಯಲ್ಲಿ ಸೆಮಿಸ್ಟರ್ ಪರೀಕ್ಷೆಗಳು ನಡೆಯುತ್ತದೆ ಎಂಬುದಾಗಿ ಹೇಳಲಾಗುತ್ತಿದೆ. ಸರಿಯಾಗಿ ಪಾಠಗಳೇ ನಡೆಯದೆ, ಪಠ್ಯಕ್ರಮ ಪೂರ್ಣಗೊಳ್ಳದೆ ಪರೀಕ್ಷೆಗಳನ್ನು ಹೇಗೆ ಎದುರಿಸುವುದು ಎಂಬ ತೀವ್ರ ಆತಂಕದಲ್ಲಿ ವಿದ್ಯಾರ್ಥಿಗಳಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಪರಿಸ್ಥಿತಿ ಹೀಗಿರುವಾಗ ಶ್ರೀಕೃಷ್ಣದೇವರಾಯ ವಿ.ವಿ ಯು ಇದೆ ತಿಂಗಳ 19 ರ ವರೆಗೆ ಪಾಠ ಮಾಡುವುದು ಕೊನೆ ದಿನ ಎಂಬ ಆದೇಶ ಹೊರಡಿಸಿರುವುದು ಆತಂಕಕಾರಿಯಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಸರ್ಕಾರಿ ಕಾಲೇಜುಗಳ ಪದವಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವಿಶ್ವವಿದ್ಯಾಲಯವು ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು. ವಿದ್ಯಾರ್ಥಿಗಳಿಗೆ ಕನಿಷ್ಟ ತರಗತಿಗಳು ನಡೆದು, ಪರೀಕ್ಷೆಯ ತಯಾರಿಗೆ ಸೂಕ್ತ ಕಾಲಾವಕಾಶ ನೀಡಿ ನಂತರವಷ್ಟೇ ಪರೀಕ್ಷೆಗಳನ್ನು ನಿಗದಿ ಪಡಿಸಬೇಕೆಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ನಿಖಿತಾ, ಪಲ್ಲವಿ, ಅಂಬಿಕಾ, ಭವಾನಿ, ಸಂಗೀತ, ಶಿವರಾಜ್, ಶ್ರೀಕಾಂತ್, ಮಂಜು ಸೇರಿದಂತೆ ಇತರರು ಭಾಗವಹಿಸಿದ್ದರು.