ಮೈಸೂರು: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಲು ಸರ್ಕಾರ ಕೂಡಲೇ ಆದೇಶ ಹೊರಡಿಸಬೇಕು ಹಾಗೂ ಸರ್ಕಾರದ ಆದೇಶ ಬರುವವರೆಗೂ ಹಿಂದಿನ ವರ್ಷದ ಬಸ್‌ಪಾಸ್ ಬಳಕೆ ಮಾಡಲು ಅವಕಾಶ ನೀಡಬೇಕೆಂದು ಆಗ್ರಹಿಸಿ ವಿವಿಧ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ವಿದ್ಯಾರ್ಥಿಗಳು, ರಾಜ್ಯದೆಲ್ಲೆಡೆ ಕಾಲೇಜುಗಳಲ್ಲಿ ಶೈಕ್ಷಣಿಕ ತರಗತಿಗಳು ಆರಂಭವಾಗಿದ್ದು, ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಸರ್ಕಾರ ಉಚಿತ ಬಸ್‌ಪಾಸ್ ನೀಡಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಅಲ್ಲದೆ, ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು. ಆದರೆ, ಸಾರಿಗೆ ಇಲಾಖೆ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಬಸ್‌ಪಾಸ್ ಹಣ ಸಂಗ್ರಹಿಸುವ ಆದೇಶ ಹೊರಡಿಸಿರುವುದು ವಿದ್ಯಾರ್ಥಿಗಳ ಆತಂಕ ಮತ್ತು ಗೊಂದಲಕ್ಕೆ ಕಾರಣವಾಗಿದೆ ಎಂದು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡುವುದಾಗಿ ಬಜೆಟ್‌ನಲ್ಲಿ ಘೋಷಿಸಿತ್ತು. ಅದರಂತೆ 19.60 ಲಕ್ಷ ವಿದ್ಯಾರ್ಥಿಗಳ ಉಚಿತ ಬಸ್‌ಪಾಸ್‌ಗೆ ಅಗತ್ಯವಾದ 836.98 ಕೋಟಿ ರೂ. ಅನುದಾನ ರಾಜ್ಯ ಸರ್ಕಾರದಿಂದ ನಿಗದಿಯಾಗಿತ್ತು. ಆದರೆ, ಸಾರಿಗೆ ಇಲಾಖೆ ಹೆಚ್ಚುವರಿ 629.32 ಕೋಟಿ ರೂ. ಸಂಗ್ರಹಿಸುವ ಅಗತ್ಯವಿಲ್ಲ,
ಬದಲಿಗೆ ಇಲಾಖೆ ಅಧಿಕಾರಿಗಳು ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಉಚಿತ ಬಸ್‌ಪಾಸ್ ನೀತಿ ಜಾರಿಗೊಳಿಸದೆ, ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್ ನೀಡಲು ಸರ್ಕಾರ ಅಧಿಕೃತ ಕ್ರಮಕೈಗೊಳ್ಳಬೇಕು ಹಾಗೂ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ 12 ತಿಂಗಳು ಬಸ್‌ಪಾಸ್ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಕಾರ್ಯದರ್ಶಿ ಚಂದ್ರಕಲಾ, ಎಐಡಿವೈಒ ಕಾರ್ಯದರ್ಶಿ ಸುನೀಲ್, ಎಐಎಂಎಸ್‌ಎಸ್ ಉಪಾಧ್ಯಕ್ಷೆ ಸೀಮಾ ಸೇರಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್, ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಾಗೂ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್ ಒಕ್ಕೂಟದ ಸದಸ್ಯರೊಂದಿಗೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.