Advertisement

ವಿದ್ಯಾರ್ಥಿಗಳ ಪ್ರಾಜೆಕ್ಟ್  ವರ್ಕ್‌ಗೆ ಬೇಕಿದೆ ಸೂಕ್ತ ಮಾರುಕಟ್ಟೆ 

05:02 PM Aug 11, 2018 | |

ದಾವಣಗೆರೆ: ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಪೇಟೆಂಟ್‌ ದಾಖಲಿಸುವ ಸಂಖ್ಯೆ ತೀರಾ ಕಡಿಮೆ ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ| ಎಸ್‌. ರಾಜಶೇಖರಯ್ಯ ತಿಳಿಸಿದ್ದಾರೆ.

Advertisement

ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ ಸಹಯೋಗದಲ್ಲಿ ಶುಕ್ರವಾರ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಸಭಾಂಗಣದಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್‌ ವಿದ್ಯಾರ್ಥಿ ಯೋಜನೆಗಳ (ಪ್ರಾಜೆಕ್ಟ್ ವರ್ಕ್‌) ಪ್ರದರ್ಶನ ಮತ್ತು ಸೆಮಿನಾರ್‌ ಉದ್ಘಾಟಿಸಿ ಮಾತನಾಡಿದ ಅವರು, ಇಂಜಿನಿಯರಿಂಗ್‌ ಕಾಲೇಜುಗಳ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳಿಂದ ಆವಿಷ್ಕರಿಸಲ್ಪಡುವ ಪ್ರಾಜೆಕ್ಟ್ ವರ್ಕ್‌ಗಳಿಗೆ ಸೂಕ್ತ ಮಾರುಕಟ್ಟೆ ದೊರೆಯುವ ವ್ಯವಸ್ಥೆ ಆಗಬೇಕು ಎಂದು ಆಶಿಸಿದರು.

ಇಂಜಿನಿಯರಿಂಗ್‌ ಒಳಗೊಂಡಂತೆ ವಿವಿಧ ಕಾಲೇಜು ಪ್ರಯೋಗಾಲಯಗಳಲ್ಲಿ ನೂತನ ಪ್ರಾಜೆಕ್ಟ್ ಸಿದ್ಧವೆನೋ ಆಗುತ್ತವೆ. ಆದರೆ, ಅವುಗಳಿಗೆ ಸೂಕ್ತ ಪ್ರಚಾರ, ಮಾರುಕಟ್ಟೆ ಪ್ರವೇಶ ಸಿಗದೇ ಹೊರ ಜಗತ್ತಿನ ಪರಿಚಯದಿಂದ ದೂರವೇ ಉಳಿಯುತ್ತವೆ. ಅಂತದ್ದಕ್ಕೆ ಸಂಬಂಧಿತ ಕಾಲೇಜುಗಳು ಅವಕಾಶ ನೀಡಲೇಬಾರದು. ವಿದ್ಯಾರ್ಥಿಗಳ ಸಂಶೋಧನಾ ಪ್ರತಿಭೆ ದೇಶ ಮತ್ತು ಸಮಾಜಕ್ಕೆ ಉಪಯೋಗ ಆಗುವಂತೆ ಮಾಡಬೇಕು ಎಂದು ತಿಳಿಸಿದರು.

ಜನಸಂಖ್ಯೆಯಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ದೇಶ, 120 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಭಾರತ 2017 ರಲ್ಲಿ 1,529 ಪೇಟೆಂಟ್‌ ಮಾತ್ರವೇ ದಾಖಲಿಸಿದೆ. 32 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಅಮೆರಿಕಾ 56,584 ಪೇಟೆಂಟ್‌ ದಾಖಲಿಸಿದೆ ಎಂದು ತಿಳಿಸಿದರು.

ಭಾರತ ಕಡಿಮೆ ಸಂಖ್ಯೆಯಲ್ಲಿ ಪೇಟೆಂಟ್‌ ದಾಖಲಿಸಿರುವುದನ್ನು ಅವಲೋಕಿಸಿದರೆ ಪ್ರಯೋಗಾಲಯಲ್ಲಿ ರೂಪ ಪಡೆಯುವ ಯೋಜನೆಗಳು ವಾಣಿಜ್ಯ ಉತ್ಪನ್ನಗಳಾಗುತ್ತಿಲ್ಲ ಎಂಬುದು ಗೊತ್ತಾಗುತ್ತದೆ. ವಿದ್ಯಾರ್ಥಿ ಸಮುದಾಯ ಕಂಡು ಹಿಡಿಯುವ ಉತ್ಪನ್ನಗಳಿಗೆ ವಾಣಿಜ್ಯ ಸ್ಪರ್ಶ ದೊರಕಿಸಿಕೊಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ, ಕಾಲೇಜುಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು. ಕಳೆದ 40 ವರ್ಷದಿಂದ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ಅಂತಿಮ ವರ್ಷದ ಇಂಜಿನಿಯರಿಂಗ್‌ ವಿದ್ಯಾರ್ಥಿ ಯೋಜನೆಗಳ(ಪ್ರಾಜೆಕ್ಟ್ ವರ್ಕ್‌) ಪ್ರದರ್ಶನ ಮತ್ತು ಸೆಮಿನಾರ್‌ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯ. ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ಈ ಕೆಲಸವನ್ನು ಮೆಚ್ಚಿರುವ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಲ್ಲಿ ಇಂತದ್ದೇ ಕಾರ್ಯಕ್ರಮ ಜಾರಿಗೆ ತರುತ್ತಿದೆ ಎಂದು ತಿಳಿಸಿದರು.

Advertisement

ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, ಇತರೆ ಕಾಲೇಜುಗಳು ಆಯೋಜಿಸುವ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಪಾಲ್ಗೊಳ್ಳುವರು ಸ್ವಂತಿಕೆಯಿಂದ ಪ್ರಾಜೆಕ್ಟ್ ಸಿದ್ಧಪಡಿಸಿ, ವಿಚಾರ ಮಂಡನೆ ಮಾಡಬೇಕು. ಹೊರಗನಿಂದ ಪ್ರಾಜೆಕ್ಟ್ ಖರೀದಿ ಮಾಡಿ, ಪ್ರದರ್ಶನಕ್ಕೆ ಇಡುವಂತಾಗಬಾರದು ಎಂದು ಎಚ್ಚರಿಸಿದರು.

ರಾಜ್ಯದ ಪ್ರತಿ ವಿಶ್ವವಿದ್ಯಾಲಯ ಮಹಾಪ್ರಬಂಧದ ವಿಚಾರಗಳು ಅಧ್ಯಯನಕ್ಕೆ ದೊರೆಯುವ ವ್ಯವಸ್ಥೆ ಮಾಡಬೇಕು. ಸಾಕಷ್ಟು ಸಂಖ್ಯೆಯಲ್ಲಿನ ಮಹಾಪ್ರಬಂಧಗಳು ಪುಸ್ತಕ ರೂಪದಲ್ಲೇ ಉಳಿಯುವಂತಾಗಿದೆ. ವಿಶ್ವವಿದ್ಯಾಲಯಗಳ ಕುಲಪತಿ, ಉಪ ಕುಲಪತಿಗಳ ನೇಮಕ ಅರ್ಹತೆ ಹೊರತುಪಡಿಸಿ ಬೇರೆ ವಿಷಯಗಳ ಆಧಾರದಲ್ಲಿ ಆಗುತ್ತಿದೆ. ಅಧಿಕಾರದಲ್ಲಿರುವವರು ವಿಶ್ವವಿದ್ಯಾಲಯಗಳ ಶುದ್ಧೀಕರಿಸಬೇಕು ಎಂದು ಮನವಿ ಮಾಡಿದರು.

ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ. ಜಾನಕಿ ಮಾತನಾಡಿ, ತಾಂತ್ರಿಕ ಸಂಶೋಧನೆ ಸಂಕೀರ್ಣ ಪ್ರಕ್ರಿಯೆ. ವೈಫಲ್ಯಗಳ ನಡುವೆಯೂ ನಿರಂತರವಾಗಿ ಸಂಶೋಧನೆ ಮುಂದುವರೆಸಬೇಕು. ಸಮಾಜ, ದೇಶಕ್ಕೆ ಬಹು ಉಪಯೋಗಿ ಆಗುವ ಯೋಜನೆ ನೀಡಬೇಕು ಎಂದು ಆಶಿಸಿದರು.

ಹಿಮಾಚಲ ಪ್ರದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಪರಿಸರ ಮಂಡಳಿ ಸದಸ್ಯ ಕಾರ್ಯದರ್ಶಿ ಕುನಾಲ್‌ ಸತ್ಯಾರ್ಥಿ ಮಾತನಾಡಿ, ಶಿಮ್ಲಾದಲ್ಲಿ ನೀರಿನ ಕೊರತೆ ತೀವ್ರವಾಗಿದೆ. ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಪರಿಸ್ಥಿತಿಯ ಸುಧಾರಣೆಗೆ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ಕೈ ಜೋಡಿಸಬೇಕು ಎಂದರು.

ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ ನಿರ್ದೇಶಕ ಪ್ರೊ| ವೈ. ವೃಷಭೇಂದ್ರಪ್ಪ, ಪ್ರಾಚಾರ್ಯ ಡಾ| ಎಸ್‌. ಸುಬ್ರಹ್ಮಣ್ಯಸ್ವಾಮಿ, ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ಕಾರ್ಯದರ್ಶಿ ಪ್ರೊ| ಎಸ್‌, ಸುಬ್ರಹ್ಮಣಿಯನ್‌, ಕಾರ್ಯಕಾರಿ ಕಾರ್ಯದರ್ಶಿ ಡಾ| ಎಸ್‌.ಜಿ. ಶ್ರೀಕಂಠಸ್ವಾಮಿ, ಡಾ| ಬಿ.ಇ. ರಂಗಸ್ವಾಮಿ, ಡಾ| ಮುರುಗೇಶ್‌ ಬಾಬು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next