Advertisement

ಬಸ್‌ ಪಾಸ್‌ಗಾಗಿ ಬೀದಿಗಿಳಿದ ವಿದ್ಯಾರ್ಥಿಗಳು

05:35 PM Jul 22, 2018 | |

ದಾವಣಗೆರೆ: ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ಸೌಲಭ್ಯಕ್ಕೆ ಒತ್ತಾಯಿಸಿ ಶನಿವಾರ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್‌ ಆರ್ಗನೈಸೇಷನ್‌(ಎಐಡಿಎಸ್‌ಒ), ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂಥ್‌ ಆರ್ಗನೈಸೇಷನ್‌ (ಎಐಡಿವೈಒ), ಆಲ್‌ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಂಎಸ್‌) ನೇತೃತ್ವದಲ್ಲಿ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸ್ವಯಂ ಪ್ರೇರಿತ ಬಂದ್‌, ಪ್ರತಿಭಟನೆ ನಡೆಸಿದರು.

Advertisement

ಸ್ವಯಂ ಪ್ರೇರಿತರಾಗಿ ಬಂದ್‌ ಮಾಡಿದ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ಸೌಲಭ್ಯಕ್ಕೆ ಒತ್ತಾಯಿಸಿದರು. ರಾಜ್ಯದ 19 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿರುವ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ ಪಾಸ್‌ ಸೌಲಭ್ಯಕ್ಕೆ ಒತ್ತಾಯಿಸಿ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೂ, ಸರ್ಕಾರ ಬಸ್‌ ಪಾಸ್‌ ಸೌಲಭ್ಯ ನೀಡಿಲ್ಲ. ಹಾಗಾಗಿಯೇ ಅಂತಿಮ ಅಸ್ತ್ರವಾಗಿ ರಾಜ್ಯದ್ಯಾಂತ ಸ್ವಯಂ ಪ್ರೇರಿತರಾಗಿ ಶಾಲಾ-ಕಾಲೇಜು ಬಂದ್‌, ಪ್ರತಿಭಟನೆಗೆ ಕರೆ ನೀಡಲಾಗಿದೆ. ಸರ್ಕಾರ ಸ್ಪಂದಿಸಬೇಕು. ಇಲ್ಲದಿದ್ದಲ್ಲಿ, ಬೇಡಿಕೆ ಈಡೇರುವವರೆಗೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಎಚ್ಚರಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ ಪಾಸ್‌ ಸೌಲಭ್ಯ ಒದಗಿಸಲಾಗಿತ್ತು. ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾದ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‌, ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಸಹ ಉಚಿತ ಬಸ್‌ ಪಾಸ್‌ ಸೌಲಭ್ಯದ ಬಗ್ಗೆ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರದ ಎಲ್ಲಾ ಯೋಜನೆ,
ಕಾರ್ಯಕ್ರಮ ಮುಂದುವರೆಸುವುದಾಗಿ ಹೇಳಿದ್ದಾರೆ. ಆದರೆ, ಈವರೆಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್‌ಪಾಸ್‌ ಸೌಲಭ್ಯ ದೊರೆತಿಲ್ಲ. ಸ್ಪಷ್ಟವಾದ ನಿರ್ಧಾರ ತಿಳಿಸುತ್ತಿಲ್ಲ ಎಂದು ದೂರಿದರು.

ರಾಜ್ಯದ್ಯಾಂತ ಶಾಲಾ-ಕಾಲೇಜು ಪ್ರಾರಂಭವಾಗಿ ತಿಂಗಳುಗಳೇ ಆಗುತ್ತಿವೆ. ಈ ಕ್ಷಣದವರೆಗೆ ಉಚಿತ ಬಸ್‌ ಪಾಸ್‌ ಸೌಲಭ್ಯ ದೊರೆಯದ ಕಾರಣ ಲಕ್ಷಾಂತರ ವಿದ್ಯಾರ್ಥಿಗಳು ಆಘಾತಗೊಂಡಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವ್ಯಾಸಂಗ ಮೊಟಕುಗೊಳಿಸುವ ಹಂತಕ್ಕೆ ಬಂದಿದ್ದಾರೆ. ಅಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಪಂದಿಸದ ಸರ್ಕಾರ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ಸೌಲಭ್ಯ ನೀಡಬೇಕು. ಈಗಾಗಲೇ ಪಾಸ್‌ ಸೌಲಭ್ಯ ಪಡೆದಿರುವ ವಿದ್ಯಾರ್ಥಿಗಳಿಗೆ ಹಣ ಹಿಂತಿರುಗಿಸಬೇಕು ಎಂದು ಒತ್ತಾಯಿಸಿದರು.

ಉಚಿತ ಬಸ್‌ ಪಾಸ್‌ ಸೌಲಭ್ಯದ ಜಾರಿಗೆ ಸರ್ಕಾರ ಆರ್ಥಿಕ ಹೊರೆಯ ನೆಪ ಹೇಳುತ್ತಿರುವುದು ಸಂಪೂರ್ಣ ಸುಳ್ಳು. ಉಚಿತ ಬಸ್‌ ಪಾಸ್‌ ಸೌಲಭ್ಯಕ್ಕೆ 600 ಕೋಟಿ ಬೇಕು ಎನ್ನುವ ಮೂಲಕ ಸರ್ಕಾರ ವಿದ್ಯಾರ್ಥಿ ಸಮುದಾಯದೊಂದಿಗೆ ವ್ಯಾಪಾರಿ ಮನೋಭಾವ ತೋರುತ್ತಿದೆ. ಸರ್ಕಾರ ಸಾರಿಗೆ ಇಲಾಖೆಗೆ ವರ್ಷಕ್ಕೆ ನೀಡುವ 860 ಕೋಟಿ ಹಣದಲ್ಲೇ ಉಚಿತ ಬಸ್‌ ಪಾಸ್‌ ಸೌಲಭ್ಯ ನೀಡಬಹುದು.
ಸರ್ಕಾರ ಎಲ್ಲ ಅಂಶ ಗಮನಕ್ಕೆ ತೆಗೆದುಕೊಂಡು ಉಚಿತ ಬಸ್‌ಪಾಸ್‌ ಸೌಲಭ್ಯ ಒದಗಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

Advertisement

ಸಂಘಟನೆಯ ತಿಪ್ಪೇಸ್ವಾಮಿ, ಭಾರತಿ, ಸೌಮ್ಯ, ನಾಗಜ್ಯೋತಿ, ಮಂಜುನಾಥ್‌ ಕೈದಾಳೆ, ಮಧು ತೊಗಲೇರಿ, ಜ್ಯೋತಿ ಕುಕ್ಕವಾಡ, ಬನಶ್ರೀ, ಸವಿತಾ, ನಾಗಸ್ಮಿತಾ, ಪೂಜಾ ನೇತ್ರ, ಕಾವ್ಯ, ಸುಧಾ, ಗುರು, ಹರಿಪ್ರಸಾದ್‌, ಶಶಿಕುಮಾರ್‌, ಸಿದ್ದೇಶ್‌, ಎಸ್‌.ಯತೀಂದ್ರ, ಪರಶುರಾಮ್‌, ಚೇತನ್‌. ಸತೀಶ್‌. ನಾಗರಾಜ್‌, ಕೃಷ್ಣ ಇತರರು ಇದ್ದರು. ಎಐಡಿಎಸ್‌ಒ, ಎಐಡಿವೈಒ, ಎಐಎಂಎಂಎಸ್‌
ಕರೆ ನೀಡಿದ್ದ ಶಾಲಾ-ಕಾಲೇಜು ಬಂದ್‌, ಪ್ರತಿಭಟನೆ ವಿಫಲಗೊಳಿಸಲು ಸರ್ಕಾರದ ಆದೇಶದಂತೆ ಜಿಲ್ಲಾಡಳಿತ ಹಾಗೂ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿ, ಶಾಲಾ-ಕಾಲೇಜುಗಳ ಬಳಿ ಪೊಲೀಸ್‌ ಬಂದೋಬಸ್ತ್ ನಿಯೋಜಿಸಿತ್ತು. ಆದರೂ, ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ಸಂಘಟನೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next