Advertisement

ವಿದ್ಯಾರ್ಥಿಗಳು ಸಂಘಟನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು: ಪುತ್ರನ್‌

01:21 PM Aug 17, 2019 | Suhan S |

ಮುಂಬಯಿ, ಆ. 16: ಸಂಘಟನೆಯಿಂದ ಮೂಲಭೂತ ಚಿಂತನೆ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಶೈಕ್ಷಣಿಕವಾಗಿ ನಾವು ತ್ಯಾಗದ ಮನೋಧರ್ಮ ಮೈಗೂಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಸಮಾಜದಲ್ಲಿ ಸಮಾನತೆಯ ಶಿಕ್ಷಣ ದೊರೆಯಲು ಸಾಧ್ಯ. ನಮ್ಮ ಸಂಸ್ಥೆಯಿಂದ ಜರಗುವ ಈ ಕಾರ್ಯಕ್ರಮ ಶೈಕ್ಷಣಿಕ ಸೇವೆ ಹಾಗೂ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ವಿದ್ಯಾರ್ಥಿಗಳ ಮನೋಬಲ ಹೆಚ್ಚಿಸಿದ ಗೌರವ ನಮ್ಮ ಸಂಸ್ಥೆಗೆ ದೊರಕಿದಂತಾಗಿದೆ ಎಂದು ಸಂಘದ ಸ್ಥಾಪಕಾಧ್ಯಕ್ಷರಾದ ಚಂದ್ರಶೇಖರ್‌ ಪುತ್ರನ್‌ ಅಭಿಪ್ರಾಯಪಟ್ಟರು.

Advertisement

ವಸಾಯಿ ತಾಲೂಕು ಮೊಗವೀರ ಸಂಘದ ವತಿಯಿಂದ ಸಂಘದ ಕಚೇರಿಯ ಸಭಾ ಭವನದಲ್ಲಿ ನಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಶಾಲಾ ಪರಿಕರ ವಿತರಣಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ವಿದ್ಯಾರ್ಥಿಗಳು ಶಿಕ್ಷಣಕ್ಕೆ ಪೂರಕವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಪ್ರತಿಯೊಬ್ಬರೂ ತಮ್ಮಬದುಕಿನಲ್ಲಿ ಹೊಸ ಆಶಾದಾಯಕ ದೃಷ್ಟಿಕೋನ ಅಳವಡಿಸಿಕೊಳ್ಳಬಹುದು. ವಿದ್ಯಾರ್ಥಿ ಜೀವನದ ಜತೆಯಲ್ಲಿ ಸಂಘಟನೆಯ ಚಿಂತನೆ ಬೆಳೆಸಿಕೊಳ್ಳಲು ಪಾಲಕರು ಪ್ರೇರಣೆ ನೀಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷರಾದ ವಿನೋದ್‌ ಕುಂದರ್‌ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪ್ರತಿಭಾ ಪುರಸ್ಕಾರ ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಅವಕಾಶವಾಗಿದ್ದು ಶೈಕ್ಷಣಿಕವಾಗಿ ಮುಂದುವರಿಯಲು ಒಂದು ಅವಕಾಶವಾಗಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ವಿತರಿಸುವುದು ಸಂಘ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ. ಶಿಕ್ಷಣವನ್ನು ಒಂದು ಗುರಿಯಾಗಿ ಸಾಧಿಸುವ ಛಲದಲ್ಲಿ ಮಕ್ಕಳು ಕಲಿಕೆಯ ಜತೆಯಲ್ಲಿ ಇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದರೆ ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಆಶಾದಾಯಕ ಬದುಕು ತನ್ನದಾಗಿಸಿಕೊಳ್ಳಲು ಸಾಧ್ಯ. ಮಕ್ಕಳಿಗೆ ಬರೇ ಉದ್ಯೋಗದ ಗುರಿ ಇರುವ ಶಿಕ್ಷಣ ಅನಗತ್ಯವಾಗಿದ್ದು, ಪರಿಸರದಲ್ಲಿ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸುವಂತಹ ಶಿಕ್ಷಣ ವಿದ್ಯಾರ್ಥಿಗಳ ಬದುಕಿಗೆ ಹಲವಾರು ಅವಕಾಶಗಳನ್ನು ಕಲ್ಪಿಸುತ್ತದೆ. ಸ್ವಜಾತಿ ಬಾಂಧವರು, ಶಿಕ್ಷಣ ಪ್ರೇಮಿಗಳು ಇಂತಹ ಕಾರ್ಯಕ್ರಮಗಳಿಗೆ ಧನಸಹಾಯ ನೀಡಿ ನಮ್ಮ ಸಂಸ್ಥೆಯ ಕಾರ್ಯಕ್ರಮವನ್ನು ಪ್ರೋತ್ಸಾಹಿಸಬೇಕು ಎಂದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಭವಾನಿ ಎಸ್‌. ಕರ್ಕೇರ ಪ್ರಾರ್ಥನೆಗೈದರು. ಗೌರವ ಕಾರ್ಯದರ್ಶಿ ಮುರಲೀಧರ ಪುತ್ರನ್‌ ಅವರು ಶೈಕ್ಷಣಿಕ ಧನಸಹಾಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಮಹಿಳಾ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳಲ್ಲಿ ಭಜನೆಯಲ್ಲಿ ಭಾಗವಹಿಸಿ ಧಾರ್ಮಿಕ ಪ್ರತಿಭೆಯನ್ನು ಅನಾವರಣಗೊಳಿಸಿದ ಮಹಿಳಾ ಸದಸ್ಯರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪರಿಸರದ ವಿದ್ಯಾರ್ಥಿಗಳಿಗೆ ಶಾಲಾ ಪರಿಕರ ಮತ್ತು ಉಚಿತ ಪುಸ್ತಕಗಳನ್ನು ವಿತರಿಸಲಾಯಿತು.

ಸಂಘದ ಹಿರಿಯ ಸದಸ್ಯರಾದ ಸುರೇಶ್‌ ಕರ್ಕೇರ ಕಾರ್ಯಕ್ರಮದ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಸಂಘದ ಶೈಕ್ಷಣಿಕ ಕೊಡುಗೆಯನ್ನು ಕೊಂಡಾಡಿದರು. ವೇದಿಕೆಯಲ್ಲಿ ಗೌರವ ಕೋಶಾಧಿಕಾರಿ ರಾಜ್‌ ಕಾಂಚನ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಪುತ್ರನ್‌ ಉಪಸ್ಥಿತರಿದ್ದರು. ಕಾರ್ಯಕ್ರಮ ವಿಭಾಗದ ಮುಖ್ಯಸ್ಥ ಸುಧೀರ್‌ ಸಾಲ್ಯಾನ್‌ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Advertisement

 

ಚಿತ್ರ-ವರದಿ: ರಮೇಶ್‌ ಉದ್ಯಾವರ್‌

Advertisement

Udayavani is now on Telegram. Click here to join our channel and stay updated with the latest news.

Next