ಬೀದರ: ಪ್ರಸ್ತುತ ಸ್ಪರ್ಧಾತ್ಮಕ ಶಿಕ್ಷಣ ಅಗತ್ಯವಾಗಿದ್ದು, ಆಧುನಿಕ ಯುಗದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ದಿಸೆಯಲ್ಲಿ ಮಕ್ಕಳನ್ನು ಅಣಿಗೊಳಿಸಬೇಕಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.
ನಗರದ ವಿ.ಕೆ. ಇಂಟರ್‌ನ್ಯಾಷನಲ್‌ನಲ್ಲಿ ಪ್ರಾಥಮಿಕ, ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ, 2018ನೇ ಸಾಲಿನ ದಿನದರ್ಶಿಕೆ ಹಾಗೂ ದಿನಚರಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭಾ ಪ್ರದರ್ಶನಕ್ಕೆ ಇರುವ ಅವಕಾಶಗಳನ್ನು ಮಕ್ಕಳು ಸರಿಯಾಗಿ ಬಳಸಿಕೊಳ್ಳಬೇಕು. ಆ ಮೂಲಕ ತಮ್ಮ ಸಾಮರ್ಥಯ ಸಾಬೀತುಪಡಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಸವತತ್ವ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ವೈಜಿನಾಥ ಕಮಠಾಣೆ ಮಾತನಾಡಿ, 35 ವರ್ಷಗಳ ಹಿಂದೆ 10 ವಿದ್ಯಾರ್ಥಿಗಳಿಂದ ಆರಂಭಿಸಿದ ಸಂಸ್ಥೆಯಲ್ಲಿ ಈಗ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ವ್ಯಾಸಂಗ
ಮಾಡುತ್ತಿದ್ದಾರೆ. 15 ಅಂಗ ಸಂಸ್ಥೆಗಳು ಜ್ಞಾನ ದಾಸೋಹ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದು ವಿವರಿಸಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜಯ ಜಾಗೀರದಾರ್ ದಿನಚರಿ ಬಿಡುಗಡೆ ಮಾಡಿದರು. ಡಾ. ಸೋನಾಲಿಕಾ ಹಿರೇಮಠ ಪ್ರೌಢಶಾಲಾ ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪತ್ರಕರ್ತ ಮಲ್ಲಿಕಾರ್ಜುನ ಮರಕಲೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿದರು.
ಟ್ರಸ್ಟ್ ನಿರ್ದೇಶಕಿ ಲಕ್ಷ್ಮೀಬಾಯಿ ಕಮಠಾಣೆ, ಪ್ರಾಚಾರ್ಯರಾದ ಧನರಾಜ ಪಾಟೀಲ, ಅಂಬಿಕಾ ಸಾವಂತ, ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶಿವಲೀಲಾ ಟೊಣ್ಣೆ, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ದೀಪಿಕಾ ವಿಜಯಕುಮಾರ, ಸುಮಾರಾಣಿ ಹಾದಿಮನಿ, ಪ್ರಿತಿ ಪ್ರತಾಪುರೆ, ಪ್ರಿಂಯಾಂಕಾ ಕುದರೆ, ರಾಜಕುಮಾರ ಕಾಬಳೆ, ಉಪನ್ಯಾಸಕ ಮಹಮ್ಮದ್ ಯುನೂಸ್, ನಾಗೇಶ ಬಿರಾದಾರ, ಜಗದೀಶ ಹಿಬಾರೆ, ಸಂಗೀತಾ ಹಲಮಂಡಗೆ ಇದ್ದರು. ಕಾರ್ಯದರ್ಶಿ ದಿಲೀಪ ಕಮಠಾಣೆ ವಂದಿಸಿದರು. ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿದ 51 ಮಾದರಿಗಳ ಕುರಿತು ವಿವರಣೆ ನೀಡುವ ಮೂಲಕ ಎಲ್ಲರ ಮನ ಗೆದ್ದರು. ರಸಾಯನವಿಜ್ಞಾನ, ಭೌತವಿಜ್ಞಾನ, ಜೀವಶಾಸ್ತ್ರಕ್ಕೆ ಸಂಬಂಧಿಸಿದ ಮಾದರಿಗಳು ಪ್ರದರ್ಶನದಲ್ಲಿದ್ದವು.