ಯಾದಗಿರಿ: ಜಗತ್ತಿನಲ್ಲಿ ಕೊರೊನಾ ದಾಳಿಯ ನಂತರ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ಕಾಣುತ್ತಿದ್ದೇವೆ. ಕಾರಣ ಇಂದು ನಾವು ವಿದ್ಯಾರ್ಥಿಗಳಿಗೆ ಹೊಸ ಜಗತ್ತಿನ ನಿಯಮಗಳ ಪರಿಚಯ ಮಾಡುವ ಜೊತೆಗೆ ಸೂಕ್ತ ಜ್ಞಾನ ನೀಡುವುದು ಅವಶ್ಯಕವಾಗಿದೆ ಎಂದು ಸಂಪನ್ಮೂಲ ವ್ಯಕ್ತಿ ಮಹೇಶ ಮಾಶಾಲ್ ಧಾರವಾಡ ಅಭಿಪ್ರಾಯಪಟ್ಟರು.
ಇಲ್ಲಿನ ಆರ್ಯಭಟ್ಟ ಪದವಿ ಪೂರ್ವ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ವಿಜ್ಞಾನ ಚೇತನ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದ ಅವರು, ಪ್ರಸಕ್ತ ದಿನಗಳಲ್ಲಿ ಜ್ಞಾನವಂತನಿಗಿಂತ ವೈಜ್ಞಾನಿಕ ಯಂತ್ರಗಳು ಉನ್ನತ ಸ್ಥಾನದಲ್ಲಿವೆ ಎಂದು ತಿಳಿಸಿದರು.
ಪಾಲಕರು ಮೊದಲು ತಮ್ಮ ಮಕ್ಕಳ ಬಗ್ಗೆ ನಕರಾತ್ಮಕ ಆಲೋಚನೆ ಮಾಡುವುದನ್ನು ನಿಲ್ಲಿಸಿ, ಅವರ ಪ್ರತಿಭೆ ಗಮನಿಸಿ, ಸಕಾಲಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.
10ನೇ ತರಗತಿ ಪಾಸಾದ ವಿದ್ಯಾರ್ಥಿಗಳು ಮುಂದೆ ನಾವು ಏನು ಅಭ್ಯಾಸ ಮಾಡಬೇಕು ಎಂಬ ಗೊಂದಲದಲ್ಲಿರುತ್ತಾರೆ. ಅಂತವರು ಮೊದಲು ನಿಮ್ಮಲ್ಲಿರುವ ಆಸಕ್ತಿ ಗುರುತಿಸಿಕೊಂಡು ಆ ಕ್ಷೇತ್ರ ಆಯ್ಕೆ ಮಾಡಿಕೊಂಡು ಅಚಲ ನಿರ್ಧಾರ, ಪರಿಶ್ರಮದೊಂದಿಗೆ ಅಭ್ಯಾಸ ಮಾಡಿ ಗುರಿ ತಲುಪಿ. ಸಮಾಜಕ್ಕೆ ಒಬ್ಬ ಪರಿಣಿತ ಶಕ್ತಿಯಾಗಿ ಬದುಕು ಸಾಗಿಸಬೇಕು ಎಂದು ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿ ನರೇಂದ್ರ ಬಡಸೇಶಿ ಉಪನ್ಯಾಸ ನೀಡಿ, ಮಕ್ಕಳ ಶೈಕ್ಷಣಿಕ, ದೈಹಿಕ, ಮಾನಸಿಕ ಪ್ರಗತಿಯಲ್ಲಿ ಉತ್ತಮ ಪರಿಸರದ ಪಾತ್ರ ಪ್ರಮುಖವಾಗಿದೆ. ಇಂತಹ ಬಿಸಿಲು ನಾಡಿನಲ್ಲಿ ಆರ್ಯಭಟ್ಟ ಶಾಲೆ ಒಳ್ಳೆಯ ಪರಿಸರ ಹಾಗೂ ಗುಣಮಟ್ಟದ ಬೋಧನೆ ನೀಡುತ್ತಿರುವುದು ಬದಲಾವಣೆಯ ಸಂಕೇತ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರದ ಜಿ.ವಿ. ಕೃಷ್ಣಾರೆಡ್ಡಿ ವಿದ್ಯಾರ್ಥಿಗಳಿಗೆ ಪೂರಕವಾದ ವಿಷಯಗಳನ್ನು ತಿಳಿಸಿದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುಧಾಕರರೆಡ್ಡಿ ಮಾಲಿ ಪಾಟೀಲ್ ಅನಪುರ ಪ್ರಾಸ್ತಾವಿಕವಾಗಿ ಮಾತನಾಡಿ, ಶೈಕ್ಷಣಿಕ ಹಿಂದುಳಿದ ಭಾಗದ ನಮ್ಮ ವಿದ್ಯಾರ್ಥಿಗಳಿಗೆ ನಿರಂತರ ಕಾರ್ಯಾಗಾರ ಹಮ್ಮಿಕೊಳ್ಳುವ ಮೂಲಕ ಸ್ಪರ್ಧಾ ಪರೀಕ್ಷೆಗಳನ್ನು ಎದುರಿಸುವ ಜ್ಞಾನ ಹಾಗೂ ಆತ್ಮವಿಶ್ವಾಸ ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಯಾದಗಿರಿ ಜಿಲ್ಲೆಯ ಹಾಗೂ ನೆರೆಯ ಕಲಬುರಗಿ ಜಿಲ್ಲೆಯ ಸೇಡಂ, ಚಿತ್ತಾಪುರ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ಶಾಲೆ ಪ್ರಾಂಶುಪಾಲ ಅರವಿಂದಾಕ್ಷಣ ಸ್ವಾಗತಿಸಿದರು. ಲಕ್ಷ್ಮೀ ಪಾಟೀಲ್ ವಂದಿಸಿದರು.