ಕುರುಗೋಡು: ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಸಿ ನಾಟಿ ಬಳಿಕ ಭತ್ತದ ಜಾಡು (ಬಾಜಿ) ಹಾಕುವುದನ್ನು ಕಾಯಕ ಮಾಡಿಕೊಂಡು ಕೃಷಿಯತ್ತ ಆಸಕ್ತಿ ತೋರುತ್ತಿದ್ದಾರೆ.
ಸದ್ಯ ಶಾಲಾ-ಕಾಲೇಜುಗಳು ತೆರೆಯದ ಕಾರಣ ಕೃಷಿ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಿಕೊಂಡಿದ್ದಾರೆ. ದಿನಕ್ಕೆ 400-500 ರೂವರೆಗೆ ಕೂಲಿ ಹಣ ಗಳಿಕೆ ಮಾಡುತ್ತಿದ್ದಾರೆ. ಕಳೆದ ತಿಂಗಳಿನಿಂದ ಕಾಲುವೆ ನೀರು ಬಿಟ್ಟಿದ್ದರಿಂದ ಅಚ್ಚುಕಟ್ಟು ವ್ಯಾಪ್ತಿ ಭತ್ತದ ಪ್ರದೇಶದಲ್ಲಿ ಮಹಿಳೆಯರು ನಾಟಿ ಮಾಡಿದ ಹೊಲದಲ್ಲಿ ಮಕ್ಕಳು ಬಾಜಿ ಹಾಕುವುದಕ್ಕೆ ಒಂದು ಎಕರೆಗೆ 150 ನಿಗದಿ ಮಾಡಿಕೊಂಡು ಇಬ್ಬರು ಸೇರಿ ದಾರದ ಸಹಾಯದಿಂದ ಕನಿಷ್ಠ 1 ದಿನಕ್ಕೆ 4ರಿಂದ 5 ಎಕರೆ ಬಾಜಿ ಕಿತ್ತುತ್ತಾರೆ. ನಾಟಿ ಮಾಡಿದ ಹೊಲದಲ್ಲಿ ಬಾಜಿ ಹಾಕುವುದರಿಂದ ಭತ್ತಕ್ಕೆ ಗೊಬ್ಬರ ಸಿಂಪಡಣೆಗೆ ಪೂರಕವಾಗಿ ಬೆಳವಣಿಗೆಗೆ ಅನುಕೂಲವಾಗುತ್ತದೆ.
ಈಗಾಗಲೇ ಕಾಲುವೆ ಭಾಗದಲ್ಲಿ ಭತ್ತನಾಟಿ ಕಾರ್ಯ ಚುರುಕುಗೊಂಡಿದ್ದು ಮಹಿಳೆಯರ ಬೇಡಿಕೆಯೂ ಹೆಚ್ಚಿದ್ದು ಎಕರೆಗೆ 2600-2800ರ ವರೆಗೆ ಕೂಲಿ ಪಡೆಯುತ್ತಿದ್ದಾರೆ. ವಿದ್ಯಾವಂತರು, ವಿವಿಧ ಖಾಸಗಿ ಶಾಲೆ ಶಿಕ್ಷಕರು ಲಾಕ್‌ಡೌನ್ ಸಮಯದಲ್ಲಿ ಕಾಲಹರಣ ಮಾಡದೇ ನರೇಗಾ ಯೋಜನೆಯಡಿ ಕೆಲಸಕ್ಕೆ ಹಾಗೂ ಇನ್ನೂ ಕೆಲವರು ಕೃಷಿ ಕೆಲಸದಲ್ಲಿ ನಿರತರಾಗಿದ್ದಾರೆ.
ಕೋವಿಡ್ ಭೀತಿಯಿಂದ ಶಾಲಾ-ಕಾಲೇಜ್ ಪ್ರಾರಂಭ ವಾಗದ್ದರಿಂದ ಅಲ್ಲಿವರೆಗೂ ಹೊಲದ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಸದ್ಯ ಏನು ಕೇಲಸವಿಲ್ಲದೆ ಖಾಲಿ ಇದ್ದು, ಶಾಲೆ ಪ್ರಾರಂಭವಾಗುವವರೆಗೆ ಕೃಷಿ ಚಟುವಟಿಕೆ ಸೇರಿದಂತೆ ನಾನಾ ಕೆಲಸಗಳಿಗೆ ಹೋಗುತ್ತಿದ್ದೇವೆ.
-ಜಡೇಪ್ಪ ಕೆ. ಪಾಡುರಂಗ, ವಿದ್ಯಾರ್ಥಿ
-ಸುಧಾಕರ್ ಮಣ್ಣೂರು