Advertisement

ತುಂಡಾದ ಸೇತುವೆಯಲ್ಲೇ ವಿದ್ಯಾರ್ಥಿಗಳ ಪಯಣ

10:02 AM May 10, 2018 | Team Udayavani |

ಅಡ್ಯನಡ್ಕ: ಇನ್ನೇನು ಮಳೆಗಾಲದ ಜತೆಗೆ ಶಾಲೆ-ಕಾಲೇಜುಗಳೂ ಆರಂಭವಾಗಲಿವೆ. ಆದರೆ, ಮರಕ್ಕಿಣಿಯ ಮಕ್ಕಳಲ್ಲಿ ಹೊಸ ಶೈಕ್ಷಣಿಕ ವರ್ಷದ ಕುರಿತಾಗಿ ಕುತೂಹಲದ ಜತೆಗೆ, ಮುರಿದ ಸೇತುವೆಯಲ್ಲಿ ಸಾಗುವುದು ಹೇಗೆಂಬ ಭಯವೂ ಮೂಡಿದೆ.

Advertisement

ಕೇಪು ಗ್ರಾ.ಪಂ.ವಾಪ್ತಿಗೆ ಬರುವ ಅಡ್ಯನಡ್ಕ ಪೇಟೆಯಿಂದ ಅನತಿ ದೂರದಲ್ಲಿರುವ ಮರಕ್ಕಿಣಿ ಎಂಬಲ್ಲಿ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಯ ಸ್ಥಿತಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ನಿದ್ದೆಗೆಡಿಸಿದೆ. ಕಳೆದ ವರ್ಷ ಮಳೆಗಾಲದಲ್ಲಿ ಈ ಭಾಗದಲ್ಲಿ ಬೀಸಿದ ಭಾರೀ ಗಾಳಿ ಮಳೆಗೆ ಖಾಸಗಿಯವರಿಗೆ ಸೇರಿದ ತೋಟದಲ್ಲಿದ್ದ ಬೃಹತ್‌ ಗಾತ್ರದ ಮರ ನೆಲಕ್ಕೆ ಅಪ್ಪಳಿಸಿತ್ತು. ಆಗ ಸಮೀಪದ ಮತ್ತೂಂದು ಮರ ಸೇತುವೆ ಮೇಲೆ ಬಿದ್ದು, ಸೇತುವೆ ಅರ್ಧ ಮುರಿದಿದೆ.

ಕಳೆದ ಮಳೆಗಾಲದಲ್ಲಿ ಮುರಿದು ಬಿದ್ದ ಸೇತುವೆಯನ್ನು ಸರಿಪಡಿಸುವ ಕಾರ್ಯಕ್ಕೆ ಗ್ರಾ.ಪಂ. ಮುಂದಾಗಲಿಲ್ಲ. ಒಂದು ವರ್ಷದಿಂದ ಈ ಭಾಗದ ಜನರು ತುಂಡಾದ ಸೇತುವೆಯಲ್ಲಿ ಜೀವ ಕೈಯಲ್ಲಿ ಹಿಡಿದು ದಾಟುತ್ತಿದ್ದಾರೆ. ಮಳೆಗಾಲದಲ್ಲಿ ನೀರು ತೋಡಿನ ತುಂಬಾ ಉಕ್ಕಿ ಹರಿಯುತ್ತದೆ. ಸೇತುವೆಗೆ ಮುತ್ತಿಕ್ಕುತ್ತಾ ನೀರು ಹರಿಯುತ್ತಿದ್ದು, ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ.

ಸೇತುವೆ ಮುರಿದು ‘ವಿ’ ಆಕಾರದಲ್ಲಿ ಬಾಗಿ ನಿಂತಿದ್ದು, ಮುರಿದ ತತ್‌ಕ್ಷಣ ಮಳೆ ಗಾಲದ ತಾತ್ಕಾಲಿಕ ಸಂಪರ್ಕಕ್ಕೆ ಸ್ಥಳೀಯರು ಮರಳು, ಮಣ್ಣನ್ನು ತುಂಬಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ ಸ್ಥಳೀ ಯಾಡಳಿತ ಇದನ್ನೇ ಪರಿಹಾರ ಎಂದು ತಿಳಿದು ದುರಸ್ತಿಗೆ ಮುಂದಾಗಲಿಲ್ಲ.

ವಿದ್ಯಾರ್ಥಿಗಳೇ ಹೆಚ್ಚು
ಈ ಭಾಗದಲ್ಲಿ 500ಕ್ಕೂ ಹೆಚ್ಚು ಮನೆಗಳಿದ್ದು, ಅಡ್ಯನಡ್ಕಕ್ಕೆ ಹೋಗಬೇಕಾದರೆ ಜನರು ಇದೇ ಮಾರ್ಗವನ್ನೇ ಅವಲಂಬಿಸಿದ್ದಾರೆ. ಅಡ್ಯನಡ್ಕ ಪೇಟೆಯನ್ನು ಸಂಪರ್ಕಿಸಲು ರಸ್ತೆ ಇದ್ದು, ಆದರೆ ಸುತ್ತು ಬಳಸಿ ತೆರಳಬೇಕಾಗಿದೆ. ಅಡ್ಯನಡ್ಕದಲ್ಲಿ ಶಾಲೆ-ಕಾಲೇಜುಗಳಿದ್ದು, ಈ ಭಾಗದ ಹೆಚ್ಚಿನ ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಂಚರಿಸುವವರಿದ್ದಾರೆ. ಇನ್ನುಳಿದಂತೆ ಅಳಿಕೆ, ವಿಟ್ಲ, ಪುತ್ತೂರು, ನೆರೆಯ ರಾಜ್ಯ ಕೇರಳ ಭಾಗದ ಶಾಲೆಗೆ ಮುಂಜಾನೆ ತೆರಳುವ ವಿದ್ಯಾರ್ಥಿಗಳು ಇದೇ ಮುರಿದ ಸೇತುವೆಯಲ್ಲೇ ದಾಟಿ ತೆರಳಬೇಕಿದೆ.

Advertisement

ಗ್ರಾಮಸಭೆಯಲ್ಲಿ ಪ್ರಸ್ತಾವ
ಸೇತುವೆ ನಿರ್ಮಿಸುವಷ್ಟು ಅನುದಾನ ಗ್ರಾ.ಪಂ.ನಲ್ಲಿ ಇರುವುದಿಲ್ಲ. ಇಲ್ಲಿಯೂ ಇದೇ ಸಮಸ್ಯೆ ಆಗಿದೆ. ಪ್ರತಿ ವಾರ್ಡ್‌ ಸಭೆಗಳು, ಗ್ರಾಮಸಭೆಯಲ್ಲಿ ಇದರ ಬಗ್ಗೆ ಪ್ರಸ್ತಾವ ಆಗುತ್ತಿದೆ. ಮುಂಬರುವ ದಿನಗಳಲ್ಲಿ ಸ್ಥಳ ಪರಿಶೀಲಿಸಿ, ಮೆಲಧಿಕಾರಿಗಳ ಗಮನಕ್ಕೆ ತರಲಾಗುವುದು.
– ನಳಿನಿ ಬಿ.
ಕೇಪು ಗ್ರಾಮ ಪಂಚಾಯತ್‌ ಪಿಡಿಒ

ಭಯದಲ್ಲೇ ಪಯಣ
ಮಳೆಗಾಲದಲ್ಲಿ ಸೇತುವೆಗೆ ಹತ್ತಿರ ಹತ್ತಿರ ನೀರು ಬರುತ್ತದೆ. ಬಾಗಿದ ಸೇತುವೆ ಯಾವಾಗ ತುಂಡಾಗಿ ಬೀಳುತ್ತದೆ ಎಂಬ ಹೆದರಿಕೆ. ಇನ್ನೊಂದೆಡೆ ತೋಡಿನ ಬದಿ ಕುಸಿದು ಬಿದ್ದಿರುವುದರಿಂದ ನಡೆದುಕೊಂಡು ಹೋಗಲು ಸ್ವಲ್ಪ ಜಾಗವಿದೆ. ಮಳೆಗಾಲದಲ್ಲಿ ಕುಸಿದು ಬಿದ್ದರೆ ನಮಗೆ ಬೇರೆ ದಾರಿ ಇಲ್ಲ. ಪ್ರಸ್ತುತ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಚುನಾವಣೆ ಬಳಿಕವಾದರೂ ಸರಿಪಡಿಸುವ ವಿಶ್ವಾಸವಿದೆ. 
– ಅಭಿಷೇಕ್‌ ಎ.ಕೆ.
ಕಾಲೇಜು ವಿದ್ಯಾರ್ಥಿ

ಕಾರ್ತಿಕ್‌ ಅಮೈ

Advertisement

Udayavani is now on Telegram. Click here to join our channel and stay updated with the latest news.

Next